ಲಿವ್-ಇನ್ ಸಂಬಂಧ: ಭಾರತ ಬದಲಾಗುತ್ತಿದೆ…

0
238

ಲೇಖಕರು: ಅಲ್ಮೇಡಾ ಗ್ಲಾಡ್ಸನ್

ಸೋಮವಾರ ಆಗಸ್ಟ್ 8ರ ಮುಂಜಾನೆ 2.30ರ ಸಮಯ. ಗಾಝೀಯಾಬಾದ್‍‍ನ ಪೋಲೀಸರಿಬ್ಬರು ತಡರಾತ್ರಿಯ ಗಸ್ತು ತಿರುತ್ತಿರುವಾಗ ಓರ್ವ ಮಹಿಳೆ ದೊಡ್ಡ ಸೂಟ್‍ಕೇಸ್‍ವೊಂದನ್ನು ಪಕ್ಕದಲ್ಲಿಟ್ಟುಕೊಂಡು ಆಟೋ ರಿಕ್ಷಾಕ್ಕೆ ಕಾಯುತ್ತಿರುವುದು ಕಂಡುಬರುತ್ತೆ. ಪೋಲೀಸರು ಆಕೆಗೆ ಸಹಾಯ ಮಾಡುವ ಉದ್ದೇಶದಿಂದ ಆಕೆಯ ಬಳಿ ಹೋಗಿ, ಆಕೆ ಒಂಟಿಯಾಗಿ ತಡರಾತ್ರಿ ಎಲ್ಲಿಗೆ ಹೋಗುತ್ತಿದ್ದಾಳೆಂದು ಕೇಳುತ್ತಾರೆ. ತಾನು ಹತ್ತಿರದ ರೇಲ್ವೇ ನಿಲ್ದಾಣಕ್ಕೆ ಹೋಗಲು ಆಟೋಗಾಗಿ ಕಾಯುತ್ತಿದ್ದೇನೆ ಎಂದು ಆಕೆಯ ಉತ್ತರ. ಪೋಲೀಸರು ತಮ್ಮ ಕರ್ತವ್ಯದ ಭಾಗವಾಗಿ ಆಕೆ ಎಲ್ಲಿಗೆ ಹೋಗುತ್ತಿದ್ದಾಳೆ, ಯಾವ ರೈಲು, ಎಷ್ಟು ಸಮಯ ಎಂದೆಲ್ಲಾ ಕೇಳಿದಾಗ ಮಹಿಳೆ ಅಸಮರ್ಪಕ ಉತ್ತರ ಕೊಡುತ್ತಾಳೆ. ಅನುಮಾನಗೊಂಡ ಪೋಲೀಸರು ಆಕೆಯ ಬಳಿ ಇದ್ದ ಸೂಟ್‍ಕೇಸನ್ನು ನೋಡಲು ಹೋದಾಗ ಅದರ ಭಾರ ನೋಡಿ ಹೈರಾಣಾಗುತ್ತಾರೆ. ಆಕೆಯ ಎದುರಿನಲ್ಲೇ ಸೂಟ್‍ಕೇಸನ್ನು ಬಲವಂತವಾಗಿ ತೆರೆಯುತ್ತಾರೆ.

ಆ ಸೂಟ್‍ಕೇಸ್‍ನೊಳಗೆ ಓರ್ವ ಪುರುಷನ ಮೃತದೇಹ ಕಂಡುಬರುತ್ತೆ. ಆತನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪೋಲೀಸರು ಆಕೆಯನ್ನು ಠಾಣೆಗೆ ಕರೆದೊಯ್ಯುತ್ತಾರೆ. ಅಲ್ಲಿ ವಿಚಾರಣೆ ನಡೆದು, ತಿಳಿದ ವಿಷಯಗಳು ಹೀಗಿವೆ:

ಆಕೆಯ ಹೆಸರು ಪ್ರೀತಿ ಶರ್ಮಾ. ವಯಸ್ಸು 35
ಸೂಟ್‍ಕೇಸನಲ್ಲಿ ಹಾಕಿ ಆಕೆ ಸಾಗಿಸುತ್ತಿದ್ದದ್ದು ಮೊಹಮ್ಮದ್ ಫಿರೋಜ್ ಎನ್ನುವ 22 ವರುಷದ ಯುವಕನ ಮೃತದೇಹ.

ಮಹಮ್ಮದ್ ಫಿರೋಜ್ ಹಾಗೂ ಪ್ರೀತಿ ಶರ್ಮಾ ಲಿವ್‍-ಇನ್ ಸಂಬಂಧದಲ್ಲಿದ್ದರು, ಅದೂ ಬರೋಬರಿ ನಾಲ್ಕು ವರುಷ. ಪ್ರೀತಿ ಶರ್ಮಾಳಿಗೆ ಅದಕ್ಕಿಂತಾ ಮೊದಲೇ ದೀಪಕ್ ಯಾದವ್ ಎನ್ನುವ ವ್ಯಕ್ತಿಯೊಡನೆ ಮದುವೆಯಾಗಿದ್ದರೂ, ಆಕೆ ಕಾರಣಾಂತರಗಳಿಂದ ದೀಪಕ್‍ನನ್ನು ಬಿಟ್ಟು ಫಿರೋಜ್‍ನ ಜೊತೆ ಲಿವ್-ಇನ್ ಸಂಬಂಧದಲ್ಲಿ ಗಾಝೀಯಾಬಾದ್‍ನ ಫ್ಲ್ಯಾಟ್‍ವೊಂದರಲ್ಲಿ ವಾಸಿಸುತ್ತಿದ್ದಳು.

ಮಹಮ್ಮದ್ ಫಿರೋಜ್ ವೃತ್ತಿಯಲ್ಲಿ ಕ್ಷೌರಿಕ. ದೆಹಲಿಯ ಯೂನಿಸೆಕ್ಸ್ ಸಲೂನ್‍ವೊಂದರಲ್ಲಿ ಕೆಲಸ ಮಾಡುತಿದ್ದನು. ಅಲ್ಲಿ ನಾಲ್ಕು ವರುಷಗಳ ಹಿಂದೆ ಕಸ್ಟಮರ್ ಆಗಿ ಬರುತ್ತಿದ್ದ ಪ್ರೀತಿ ಶರ್ಮಾನೊಡನೆ ಪ್ರೇಮಾಕುಂರವಾಗಿ, ಆತನ ಮನೆಯವರ ವಿರೋಧ ಕಟ್ಟಿಕೊಂಡು, ಅವರಿಂದ ದೂರವಾಗಿ ಪ್ರೀತಿಯೊಡನೆ ವಾಸಿಸುತ್ತಿದ್ದನು. ಆತನಿಗಿಂತಾ ಸುಮಾರು ಹದಿನೈದು ವರುಷ ದೊಡ್ಡವಳಾಗಿದ್ದ ಪ್ರೀತಿಯೊಡನೆ ಮದುವೆಯಾಗಲು ಫಿರೋಜ್‍ನ ಮನೆಯವರ ಒಪ್ಪಿಗೆ ಇರಲಿಲ್ಲ. ಬಡ ಕುಟುಂಬದ ಫಿರೋಜನ ತಂದೆಯೂ ಕ್ಷೌರಿಕ ವೃತ್ತಿಯಲ್ಲೇ ಇದ್ದಾರೆ. ಲೋನಿಯ ಬಾಡಿಗೆ ಮನೆಯೊಂದರಲ್ಲಿ ಆತನ ಕುಟುಂಬದ ವಾಸ. ಆದರೆ ಫಿರೋಜ್ ಅವರಿಂದ ದೂರವಾಗಿ ಪ್ರೀತಿಯೊಡನೆ ಗಾಝೀಯಾಬಾದ್‍ನಲ್ಲಿ ಲಿವ್-ಇನ್ ರಿಲೇಶನ್‍ಶಿಪ್‍ನಲ್ಲಿದ್ದ.

ಪ್ರೀತಿಯ ಪ್ರಕಾರ ಶನಿವಾರ ಆಗಸ್ಟ್ 6 ರ ರಾತ್ರಿ ಪ್ರೀತಿ ಹಾಗೂ ಫಿರೋಜ್ ಮಧ್ಯೆ ಜಗಳ ನಡೆದಿದೆ. ಪ್ರೀತಿ ತನ್ನನ್ನು ಮದುವೆಯಾಗು ಎಂದು ಫಿರೋಜ್‍ನನ್ನು ಒತ್ತಾಯಿಸಿದ್ದಾಳೆ. ಇದಕ್ಕೆ ಫಿರೋಜ್ ಒಪ್ಪಿಲ್ಲ. ಇದರಿಂದ ಸಿಟ್ಟುಗೊಂಡ ಪ್ರೀತಿ ಫಿರೋಜ್‍ ತನ್ನ ವೃತ್ತಿಗಾಗಿ ಬಳಸುತ್ತಿದ್ದ razor ನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಆ ರಾತ್ರಿ ಆತನ ಮೃತ ದೇಹದೊಂದಿಗೆ ಅಲ್ಲೇ ಇದ್ದ ಪ್ರೀತಿ ಮರುದಿನ ಮುಂಜಾನೆದ್ದು ದೆಹಲಿಯ ಸೀಲಂಪುರ್ ಪ್ರದೇಶಕ್ಕೋಗಿ ಒಂದು ದೊಡ್ಡ ಹಾಗೂ ಗಟ್ಟಿ ಸೂ‍ಟ್‍ಕೇಸನ್ನು ಖರೀದಿಸಿ ತಂದಿದ್ದಾಳೆ.

ಸಂಜೆ ಮನೆಗೆ ಬಂದು ಫಿರೋಜ್‍ನ ದೇಹವನ್ನು ಆ ಸೂಟ್‍ಕೇಸ್‍ನೊಳಗೆ ತುರುಕಿದ್ದಾಳೆ. ಆ ಸೂಟ್‍ಕೇಸನ್ನು ಹೇಗಾದರೂ ರೇಲ್ವೇ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ, ರೈಲಲಿಟ್ಟು ಪರಾರಿಯಾಗುವೆ ಪ್ಲ್ಯಾನ್ ಆಕೆಯದಾಗಿತ್ತು. ಆದರೆ ರಾತ್ರಿ ಗಸ್ತಿನ ಪೋಲೀಸರ ಕಾರ್ಯಕ್ಷಮತೆಯಿಂದ ಆಕೆಯ ಯೋಜನೆ ತಲೆಕೆಳಗಾಯಿತು.

ಇದೀಗ ಈ ಸುದ್ದಿಯ ಬಗ್ಗೆ ನಮ್ಮ ಮಧ್ಯೆ ಎಷ್ಟು ಮಂದಿಗೆ ತಿಳಿದಿದೆ? ಮೂರು ತಿಂಗಳ ಹಿಂದೆ ಆಗಿರುವಂತದ್ದು. ನಮ್ಮ ಮಾಧ್ಯಮಗಳು ಇದರ ಬಗ್ಗೆ ವರದಿ ಮಾಡಿದೆಯೇ? ಕೊಲೆಯಾದವನು ಹಾಗೂ ಕೊಲೆ ಮಾಡಿದವಳು ವಿಭಿನ್ನ ಧರ್ಮದವರು. ಇಬ್ಬರೂ ಲಿವ್-ಇನ್ ರಿಲೇಶನ್‍ಶಿಪ್‍ನಲ್ಲಿದ್ದವರು. ಆದರೂ ಕೊಲೆಯಾದ ನಂತರ, ಆಕೆಯ ಬಂಧನವಾಧ ನಂತರ ಯಾರಾದ್ರೂ ‘ಲವ್ ಧರ್ಮಯುದ್ದದ’ ಬಗ್ಗೆ ಮಾತಾನಾಡಿದ್ದಾರಾ? ಟಿವಿ ಚಾನೆಲ್ಲುಗಳು ಪ್ಯಾನಲ್ ಡಿಸ್ಕಶನ್ ಮಾಡಿವೆಯೇ? ಕೊಲೆಯಾದವನು ಮುಸ್ಲೀಮ್, ಕೊಲೆ ಮಾಡಿದವಳು ಹಿಂದೂ. ಹಾಗಾಗಿ ಇದರ ಹಿಂದೆ ಭಯೋತ್ಪಾದನೆ, ಧರ್ಮಾಂದತೆಯ ನೆರಳಿದ್ದ ಬಗ್ಗೆ ಚರ್ಚೆ ನಡೆದಿದೆಯೇ?

ಮೂರು ತಿಂಗಳ ನಂತರ ಅಂಥಹ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇವರದ್ದೂ ಲಿವ್-ಇನ್ ಸಂಬಂಧ. ಯುವತಿ ಕೊಲೆಯಾಗಿದ್ದಾಳೆ, ಕೊಲೆ ಮಾಡಿದ ಯುವಕ ಸಿಕ್ಕಿಬಿದ್ದಿದ್ದಾನೆ. ನಮ್ಮ ಇಡೀ ದೇಶದ ಮಾಧ್ಯಮಗಳು ಕಳೆದ ಮೂರ್ನಾಲ್ಕು ದಿನಗಳಿಂದ ಊಟ, ನಿದ್ದೆ ಬಿಟ್ಟು ಈ ಪ್ರಕರಣದ ಬಗ್ಗೆ ಪುಂಖಾನುಪುಂಖವಾಗಿ ವರದಿ ಮಾಡುತ್ತಿದ್ದಾರೆ. ಲವ್ ಜಿಹಾದ್, ಭಯೋತ್ಪಾದನೆ ಎಲ್ಲವೂ ಕೇಳಿಬರುತ್ತಿದೆ.

ನಾನು ಮೊದಲು ಉಲ್ಲೇಖಿಸಿರುವ ಪ್ರಕರಣಕ್ಕೂ, ಈಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಪ್ರಕರಣಕ್ಕೂ ಇರುವ ವ್ಯತ್ಯಾಸವೇನು? ಬಹಳ ಚಿಕ್ಕದು. ಪ್ರಥಮ ಪ್ರಕರಣದಲ್ಲಿ ಕೊಲೆಯಾದವನು ಫೀರೋಜ್, ಓರ್ವ ಮುಸ್ಲಿಮ್, ಕೊಲೆ ಮಾಡಿರುವವಳು ಪ್ರೀತಿ, ಓರ್ವ ಹಿಂದೂ, ಅದರಲ್ಲೂ ‘ಶರ್ಮಾ’ ಹಿಂದೂ. ಎರಡನೆಯ ಪ್ರಕರಣದಲ್ಲಿ ಕೊಲೆಯಾದವಳು ಶೃದ್ಧಾ, ಓರ್ವ ಹಿಂದೂ, ಕೊಲೆ ಮಾಡಿದ ಆಫ್ತಾಬ್ ಮುಸ್ಲಿಮ್. ಇದಷ್ಟೇ ವ್ಯತ್ಯಾಸ. ಶೃದ್ಧಾ ಆಫ್ತಾಬ್‍ನ ಕಾರಣಕ್ಕೆ ತನ್ನ ತಂದೆ ಹಾಗೂ ಕುಟುಂಬದಿಂದ ದೂರವಾದಂತೆ, ಫಿರೋಜ್ ಪ್ರೀತಿ ಶರ್ಮಾಳಿಗಾಗಿ ತನ್ನ ಕುಟುಂಬವನ್ನು ದೂರ ಮಾಡಿದ್ದ.

ಶೃದ್ಧಾಳನ್ನು ಕೊಲೆ ಮಾಡಿದ ಆಫ್ತಾಬ್‍ ಆಕೆಯ ದೇಹವನ್ನು ವಿಲೇವರಿ ಮಾಡಲಾಗದೆ ಅದರ ತುಂಡು ಮಾಡಿ ಮೆಲ್ಲ-ಮೆಲ್ಲನೆ ಬೇರೆ-ಬೇರೆ ಸ್ಥಳಗಳಲ್ಲಿ ಎಸೆದನು. ಇನ್ನು ಪ್ರೀತಿ ಶರ್ಮಾ, ಮಹಮ್ಮದ್‌ನನ್ನು ಕೊಲೆ ಮಾಡಿದ ನಂತರ ಅವನ ದೇಹವನ್ನೂ ವಿಲೇವಾರಿ ಮಾಡಲಾಗದೇ, ಸೂಟ್‍ಕೇಸ್ ಖರೀದಿಸಿ, ಅದನ್ನು ಸೂಟ್‍ಕೇಸ್‍ನಲ್ಲಿ ತುರುಕಿಸಿ, ಆ ಸೂಟ್‍ಕೇಸನ್ನು ಎಲ್ಲಾದರೂ ಬಿಟ್ಟು ಹೋಗಲು ಯೋಜನೆ ಹಾಕಿದ್ದಳು. ಇಲ್ಲಿ ಪ್ರೀತಿ ಹಾಗೂ ಆಫ್ತಾಬ್‍ನ ಮನಸ್ಥಿತಿ ಒಂದೇ. ಇಬ್ಬರೂ ಕೊಲೆಗಾರರು, ಇಬ್ಬರ ಉದ್ದೇಶನೂ ಒಂದೇ, ತಮ್ಮಿಂದ ಕೊಲೆಯಾದವರ ದೇಹವನ್ನು ಯಾರಿಗೂ ತಿಳಿಯದಂತೆ ವಿಲೇವರಿ ಮಾಡುವುದು. ಒಬ್ಬನು ಅದನ್ನು ಕತ್ತರಿಸಿ, ತುಂಡು ಮಾಡಿದರೆ ಇನ್ನೊಬ್ಬಳು ಐದೂವರೆ ಅಡಿ ದೇಹವನ್ನು ಮೂರಡಿಯ ಸೂಟ್‍ಕೇಸ್‍ನಲ್ಲಿ ತುರುಕಿಸಿದಳು.

ಸದ್ಯಕ್ಕೆ ಆಫ್ತಾಬ್‍ನನ್ನು ಯಾವುದಾದರೂ ಒಂದು ಭಯೋತ್ಪಾದಕ ಸಂಘಟನೆಯೊಂದಿಗೆ ಥಳಕು ಹಾಕಿ, ಶೃದ್ಧಾಳನ್ನು ಆತ ಲವ್‍ ಜಿಹಾದ್‍ಗಾಗಿ ಕೊಂದ ಎಂದು ತೀರ್ಪು ಬರಲ್ವಾ ನೋಡಿ. ಆದರೆ ಅತ್ತಕಡೆ ಕೊಲೆಯಾದ ಮಹಮ್ಮದ್ ಫಿರೋಜ್‍ ಹಿಂದೂ ಹುಡುಗಿಗೆ ಮೋಸ ಮಾಡಿದ ಕಾರಣಕ್ಕೆ ಆತನ ಕೊಲೆಯಾಯಿತೆಂದೂ ತೀರ್ಪು ಬರಬಹುದು.

ಭಾರತ ಬದಲಾಗುತ್ತಿದೆ…