ರೈಲು ಹಳಿಗಳಿಗೆ ದನಗಳ ಕಾಟ: 1,000 ಕಿ.ಮೀ. ತಡೆ ಗೋಡೆ ಕಟ್ಟಲು ಸಿದ್ಧವಾದ ರೈಲ್ವೆ ಮಂಡಳಿ

0
148

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈಲ್ವೆ ಹಳಿಗಳಿಗೆ ಜಾನುವಾರುಗಳು ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ಆರು ತಿಂಗಳ ಅವಧಿಯೊಳಗೆ 1,000 ಕಿಲೋ ಮೀಟರ್‌ ತಡೆಗೋಡೆ ನಿರ್ಮಿಸಲು ಮುಂದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದನಗಳು ಢಿಕ್ಕಿ ಹೊಡೆಯುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಹಳಿಗಳಿಗೆ ತಡೆಗೋಡೆ ಕಟ್ಟುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬುದಾಗಿ ವರದಿಯಾಗಿದೆ.

ಗೋಡೆಯ ನಿರ್ಮಾಣವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕಾಗಿ ಎರಡು ವಿನ್ಯಾಸಗಳು ಪರಿಗಣನೆಯಲ್ಲಿವೆ. ಒಂದನ್ನು ಶೀಘ್ರವೇ ಅನುಮೋದಿಸಲಾಗುವುದು. ಕೇವಲ ಗೋಡೆಯಿಂದ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರದ.

ಅಕ್ಟೋಬರ್‌ನ ಮೊದಲ ಒಂಬತ್ತು ದಿನಗಳಲ್ಲಿ 200ಕ್ಕೂ ಹೆಚ್ಚು ರೈಲುಗಳಿಗೆ ಜಾನುವಾರುಗಳು ಢಿಕ್ಕಿಯಾಗಿವೆ. ಒಂದು ತಿಂಗಳಲ್ಲಿ 4,000 ರೈಲು ಸಂಚಾರಗಳಿಗೆ ಅಡಚಣೆಯಾಗಿದೆ. ಗುಜರಾತಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ದನ ಢಿಕ್ಕಿಯಾದ ನಂತರ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಿಆರ್‌ಪಿಎಫ್ ರಂಗಪ್ರವೇಶಿಸಿತ್ತು. ಹಳಿಯಲ್ಲಿ ದನ ನೋಡಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಕಾರಣದಿಂದಾಗಿ ಗೂಡ್ಸ್ ರೈಲೊಂದು ಈ ಹಿಂದೆ ಹಳಿ ತಪ್ಪಿತ್ತು.