ಸನ್ಮಾರ್ಗ ವಾರ್ತೆ
ನಾಗಪುರ, ಮಾ. 27: ಕೊರೊನಾ ಲಾಕ್ಡೌನ್ನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಮಹಾರಾಷ್ಟ್ರದಲ್ಲೊಬ್ಬ ಯುವಕ ಮನೆಗೆ ತಲುಪಲು 135 ಕಿಲೊಮೀಟರ್ ನಡೆದಿದ್ದಾನೆ. 26 ವರ್ಷದ ನರೇಂದ್ರ ಶೆಲ್ಕೆ 135 ಕಿಲೋಮೀಟರ್ ನಡೆದು ಬಂದ ವ್ಯಕ್ತಿ. ಅದೂ ಆಹಾರ ಇಲ್ಲದೆ. ಪುಣೆಯಲ್ಲಿ ಕೂಲಿಯಾಗಿ ದುಡಿಯುತ್ತಿದ್ದಾತ ಗತ್ಯಂತರವಿಲ್ಲದೆ ಚಂದ್ರಪುರ ಜಿಲ್ಲೆಯ ಜಂಭ್ ಗ್ರಾಮದ ತನ್ನ ಮನೆಗೆ ನಡೆದು ಬಂದಿದ್ದಾನೆ. ನಾಗಪುರದಿಂದ ತನ್ನೂರಿಗೆ ಹೀಗೆ ಅವನು ಬರಬೇಕಾಯಿತು.
ದಾರಿಯಲ್ಲಿ ಯಾವುದಾದರೂ ವಾಹನ ಸಿಗುತ್ತದಾ ಎಂದು ಯತ್ನಿಸಿ ವಿಫಲನಾಗಿದ್ದ ಆತ ಕೊನೆಗೆ ನಾಗಪುರ -ನಾಗ್ಭಿಡ್ ರಸ್ತೆಯಲ್ಲಿ ಆತ ನಡೆದ. ಅದೂ ಕೇವಲ ನೀರು ಕುಡಿದು. ಬುಧವಾರ ರಾತ್ರೆ ನಿಶ್ಶಕ್ತನಾಗಿ ಸಿಂಧೆವಹಿ ಎಂಬ ಸ್ಥಳದಲ್ಲಿ ಶಿವಾಜಿ ಚೌಕದಲ್ಲಿ ಕುಳಿತಿದ್ದ ಶೆಲ್ಕೆಯನ್ನು ಪೊಲೀಸರು ನೋಡಿದರು. ಕರ್ಫ್ಯೂ ಉಲ್ಲಂಘಿಸಿ ಹೊರಗೆ ಬಂದಿದ್ದೇಕೆ ಎಂದು ಪೊಲೀಸರು ಕೇಳಿದರು. ಆಗ ಈತ ತನ್ನ ಕಥೆಯನ್ನು ಪೊಲೀಸರಿಗೆ ತಿಳಿಸಿದ.
ಪೊಲೀಸರು ಕೂಡಲೇ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪೊಲೀಸರೇ ಊಟ ಕೊಟ್ಟರು. ನಂತರ ವೈದ್ಯರ ಅನುಮತಿ ಸಿಕ್ಕ ಬಳಿಕ ಪೊಲೀಸರೇ ಇನ್ನೂ 25 ಕಿಲೊಮೀಟರ್ ದೂರಲ್ಲಿದ್ದ ಆತನ ಮನೆಗೆ ತಲುಪಿಸಿದರು. ಈಗ ಅವನ ಮೇಲೆ 14 ದಿನಗಳ ನಿಗಾ ಇರಿಸಲಾಗಿದೆ.












