ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಅಂಜುಮನ್ ನೇತೃತ್ವದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ

0
269

ಸನ್ಮಾರ್ಗ ವಾರ್ತೆ

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಅಂಜುಮನ್ ಇಸ್ಲಾಂ ನೇತೃತ್ವದಲ್ಲಿ ಎಪ್ರಿಲ್ 22ರ ಸೋಮವಾರವಾದ ಇಂದು ಧಾರಾವಾಡದ ಮುಸ್ಲಿಮರು ಅರ್ಧ ದಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಬಂದ್ ಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಅಂಜುಮನ್ ಸಂಸ್ಥೆ ಕರೆ ಕೊಟ್ಟಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಮಾಡಿದ ಅಂಗಡಿ – ಮುಂಗಟ್ಟುಗಳ ಮುಂದೆ ನೇಹಾ ಭಾವಚಿತ್ರ ಹಾಕಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

“ಹೆಣ್ಣು ನಮ್ಮ ಅಕ್ಕ, ಹೆಣ್ಣು ನಮ್ಮ ತಾಯಿ, ಹೆಣ್ಣು ನಮ್ಮ ತಂಗಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು. ಹಂತಕ ಫಯಾಝ್ ನಿಗೆ ಉಗ್ರ ಶಿಕ್ಷೆಯಾಗಬೇಕು” ಎಂದು ಫಲಕಗಳನ್ನು ಹಿಡಿದು , ಧಾರವಾಡದ ಅಂಜುಮನ್ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಹಂತಕ ಫಯಾಝ್ ಪರ ಯಾವ ಮುಸ್ಲಿಂ ವಕೀಲರೂ ವಕಾಲತ್ತು ವಹಿಸಬಾರದು ಎಂದು ಒತ್ತಾಯಿಸಿದ ಅವರು, ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹಿರೇಮಠ ಅವರ ಹೆಸರಿಡುವುದಾಗಿ ಅಂಜುಮನ್ ಸಂಸ್ಥೆ ಸದಸ್ಯರು ಇದೇ ಸಂದರ್ಭದಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here