ಲಕ್ನೊ, ಮಾ.21: ಈ ಸಲ ಬಿಜೆಪಿ ತನ್ನ ಹಿರಿಯ ನಾಯಕರಿಗೆ ಟಿಕೆಟು ನೀಡದಿರಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಟಿಕೆಟು ಹಂಚಿಕೆಯ ಕುರಿತು ಬಿಜೆಪಿಯ ಅಂತಿಮ ನಿರ್ಧಾರ ಇನ್ನಷ್ಟೇ ಪ್ರಕಟವಾಗಬೇಕಿದೆ.
ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಭುವನ ಚಂದ್ರ ಖಂಡೂರಿ ಸಹಿತ ಹಲವು ನಾಯಕರಿಗೆ ಟಿಕೆಟು ಇಲ್ಲ. ಇದೇವೇಳೆ ಉತ್ತರಪ್ರದೇಶದಿಂದ ಸಾಕ್ಷಿ ಮಹಾರಾಜ್ ಸಹಿತ ಡಝನ್ಗಟ್ಟಲೆ ಸಂಸದರಿಗೆ ಸಂಸತ್ತಿಗೆ ಸ್ಪರ್ಧಿಸಲು ಟಿಕೆಟ್ ಸಿಗಲಾರದು ಎನ್ನಲಾಗುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಜೊತೆ ಸೇರಿ ಉತ್ತರ ಪ್ರದೇಶದ 80 ಸೀಟುಗಳಲ್ಲಿ 73 ಸೀಟುಗಳನ್ನು ಗೆದ್ದುಕೊಂಡಿತ್ತು. ದೊಡ್ಡ ಅಂತರದಿಂದ ಗೆದ್ದಿದ್ದ ನಾಯಕರಿಗೆ ಈಸಲ ಟಿಕೆಟಿಲ್ಲ ಎಂದು ಮೂಲಗಳು ತಿಳಿಸುತ್ತಿವೆ. ವರದಿಯಾಗಿರುವ ಪ್ರಕಾರ ಎರಡು ಡಝನ್ ಸಂಸದರಿಗೆ ಟಿಕೆಟು ಸಿಗಲಾರದು. ಇದೇವೇಳೆ ,ಗೃಹಸಚಿವ ರಾಜನಾಥ ಸಿಂಗ್ , ಪ್ರಧಾನಿ ಮೋದಿ ಸಹಿತ 28 ಸೀಟುಗಳಲ್ಲಿ ಹಿಂದಿನ ಉಮೇದುವಾರರೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.












