ಕೊನ್ನಿ(ಕೇರಳ), ಮಾ.21: ಸೌದಿ ಅರೇಬಿಯದಲ್ಲಿ ನಿಧನಗೊಂಡ ಯುವಕನ ಮೃತದೇಹದ ಬದಲು ಊರಿಗೆ ಶ್ರೀಲಂಕಾದ ಯುವತಿಯ ಮೃತದೇಹ ಬಂದಿದ್ದನ್ನು ನೋಡಿ ಮನೆ ಮಂದಿ ಬೆಚ್ಚಿ ಬಿದ್ದ ಘಟನೆ ನಡೆದಿದೆ. ಫೆಬ್ರುವರಿ 27ರಂದು ಕೊನ್ನಿ ಕುಮ್ಮನ್ನೂರ್ ಈಟ್ಟಿಮುಟ್ಟಿಲ್ ರಫೀಕ್(28) ಸೌದಿ ಅರೇಬಿಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಬುಧವಾರ ರಾತ್ರೆ ಹತ್ತು ಗಂಟೆಗೆ ಕಮ್ಮುನ್ನೂರಿನ ಮನೆಗೆ ಸೌದಿಯಿಂದ ವಿಮಾನ ಮೂಲಕ ಮೃತದೇಹ ಬಂದಿತ್ತು. ಮೃತದೇಹದ ಪೆಟ್ಟಿಗೆಯಲ್ಲಿ ಪಾಸ್ಪೋರ್ಟ್ ನಂಬರ್, ರಫೀಕ್ ಎಂಬೆಲ್ಲ ವಿವರಗಳನ್ನು ಬರೆದಿರಿಸಲಾಗಿತ್ತು. ಆದರೆ ಪೆಟ್ಟಿಗೆ ನೋಡಿದಾಗ ಅದರೊಳಗಿದ್ದ ಮೃತದೇಹ ಯುವಕನ ಬದಲು ಯುವತಿಯದ್ದಾಗಿತ್ತು.
ಸೌದಿ ಏರ್ಲೈನ್ಸ್ ವಿಮಾನದಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ಸಂಬಂಧಿಕರು ಮೃತದೇಹವನ್ನು ಕೊಂಡು ಹೋಗಿದ್ದರು. ಸೌದಿ ಅರೇಬಿಯದಲ್ಲಿಯೇ ಮೃತದೇಹಕ್ಕೆ ಸ್ನಾನ ಮಾಡಿಸಿ ಪ್ಯಾಕ್ ಮಾಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ಗಲ್ಫ್ ನಲ್ಲಿ ರಫೀಕ್ ಜೊತೆಗಿದ್ದವರು ಹೇಳುತ್ತಿದ್ದಾರೆ.
ಯುವತಿಯ ಮೃತದೇಹವನ್ನು ಕುಮ್ಮನ್ನೂರಿನ ರಫೀಕ್ ಮನೆಯಿಂದ ಪೊಲೀಸರು ವಶಪಡಿಸಿಕೊಂಡು ಕೋಟ್ಟಯಂ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇರಿಸಿದ್ದಾರೆ. ಹೊರದೇಶದ ಮೃತದೇಹವಾದ್ದರಿಂದ ಅದನ್ನು ಅಲ್ಲಿಗೆ ಕೊಂಡು ಹೋಗಲು ಕೆಲವು ಕಾನೂನು ತೊಡಕುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.












