ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮೈತ್ರಿಕೂಟ ಸಾಧ್ಯತೆ: ಎನ್ ಸಿ ಪಿ ಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್ ಗೆ ಸ್ಪೀಕರ್ ಹುದ್ದೆ?

0
856

ಸನ್ಮಾರ್ಗ ವಾರ್ತೆ-

ಮುಂಬೈ; ನ.13- ಮಹಾರಾಷ್ಟ್ರದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ಶಿವಸೇನೆಯನ್ನು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಪಕ್ಷಗಳು ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುತ್ತಿದೆ. ಶಿವಸೇನೆಗೆ ಬೆಂಬಲ ನೀಡಬೇಕಾದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಬೇಕೆಂದು ಈ ಎರದೂಪಕ್ಷಗಳು ಬೇಡಿಕೆಯಿಟ್ಟಿವೆ. ಅಲ್ಲದೆ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವ ಸಾಧ್ಯತೆಯನ್ನು ಶರದ್ ಪವಾರ್ ತಳ್ಳಿ ಹಾಕಿದ್ದಾರೆ. ಅಂದರೆ ಈ ಮೂರೂ ಪಕ್ಷಗಳು ಮೈತ್ರಿಕೂಟ ಒಂದನ್ನು ರಚಿಸಿ ಅಧಿಕಾರದಲ್ಲಿ ಭಾಗಿಯಾಗುವ ಒಲವನ್ನು ತೋರಿವೆ.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ತಾನು ಬದ್ಧನೆಂಬ ನಿಲುವನ್ನು ಶಿವಸೇನೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಮತ್ತು ಜಾತ್ಯತೀತ ಸಿದ್ಧಾಂತಗಳೊಂದಿಗೆ ಯಾವುದೇ ರಾಜಿ ಇಲ್ಲ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ, ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬಂದರೆ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ, ಎನ್ಸಿಪಿಗೆ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿಗೆ ಸ್ಪೀಕರ್ ಹುದ್ದೆಯನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಜೆಪಿಯಲ್ಲೂ ಕೂಡ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು ಸರಕಾರ ರಚಿಸುವ ಯಾವುದೇ ಅವಕಾಶವನ್ನು ಕೈಬಿಡಬಾರದು ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ನಡುವೆ ಆಪರೇಷನ್ ಕಮಲದ ಮಾತುಗಳೂ ಕೇಳಿಬರುತ್ತಿವೆ.