ಕೊರೊನಾ ಎಂದು ಮಣಿಪ್ಪುರದ ಹುಡುಗಿಯ ಮುಖಕ್ಕೆ ಉಗುಳಿದ ವ್ಯಕ್ತಿ: ಬಂಧನ

0
591

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 26: ಕೊರೊನಾ ವೈರಸ್ ಎಂದು ಆಕ್ಷೇಪಿಸಿ ಮಣಿಪುರದ ಯುವತಿಯೊಬ್ಬರ ಮುಖಕ್ಕೆ ಉಗುಳಿದ ದಿಲ್ಲಿಯ ಮುಖರ್ಜಿ ನಗರದ ನಲ್ವತ್ತು ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ವಿಜಯನಗರದಲ್ಲಿ ಘಟನೆ ನಡೆದಿದೆ. ರವಿವಾರ ಜನತಾ ಕರ್ಫ್ಯೂ ನಿಯಂತ್ರಣ ಮುಗಿದ ಬಳಿಕ ಹತ್ತಿರದ ತರಕಾರಿ ಮಾರ್ಕೆಟಿನಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಮರಳುತ್ತಿದ್ದ ಮಣಿಪುರ ಯುವತಿಗೆ ಬೈಕಿನಲ್ಲಿ ಬಂದ ಯುವಕ ತಡೆದು ನಿಲ್ಲಿಸಿ ಕೆಟ್ಟದಾಗಿ ಮಾತಾಡಿದ್ದಾನೆ. ನಂತರ ಕೊರೊನಾ ಎಂದು ಬೈಯುತ್ತಾ ಮುಖಕ್ಕೆ ಉಗುಳಿದ್ದಾನೆ.

ಯುವತಿ ಕೂಡಲೇ ಹತ್ತಿರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಯುವತಿ ನೀಡಿದ ವಿವರಗಳ ಆಧಾರದಲ್ಲಿ, ಮುಖಚಹರೆ ಚಿತ್ರ ರಚಿಸಿ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಘಟನೆ ಬಹಿರಂಗಗೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರತಿಭಟನೆ ಕಂಡುಬಂದಿದೆ. ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಹಲವರು ಮುಖ್ಯಮಂತ್ರಿ ಕೇಜ್ರಿವಾಲ್‍ರನ್ನು ಟ್ವೀಟ್ ಮಾಡಿ ಒತ್ತಾಯಿಸಿದ್ದರು.

ಕೊರೊನಾ ವೈರಸ್ ವ್ಯಾಪಕಗೊಂಡ ಬಳಿಕ ಹಲವು ಬಾರಿ ಈಶಾನ್ಯ ರಾಜ್ಯಗಳವರ ಮೇಲೆ ಇಂತಹ ದಾಳಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ದಿಲ್ಲಿ ಯುನಿವರ್ಸಿಟಿಯ ನಾರ್ತ್ ಕ್ಯಾಂಪ್‍ನಲ್ಲಿ ಹೋಳಿ ದಿನ ವಿದ್ಯಾರ್ಥಿಗಳ ಮೇಲೆ ವಾಟರ್ ಬಲೂನ್ ಎಸೆದು ಕೊರೊನಾ ಎಂದು ವ್ಯಂಗ್ಯ ಮಾಡಲಾಗಿತ್ತು. ಪಂಡಾರ ರಸ್ತೆಯ ಹೊಟೇಲಿನಲ್ಲಿ ಊಟ ಕೊಡುವುದಿಲ್ಲ ಎಂದು ಯುವತಿಯನ್ನು ಹೊರಕಳುಹಿಸಿದ ಘಟನೆ ನಡೆದಿದೆ.