ಕೋರೋನಾ ವ್ಯಾಕ್ಸಿನ್ ಬಗ್ಗೆ ಭಯ: ಪತ್ನಿಯ ಆಧಾರ್ ಕಾರ್ಡ್ ನೊಂದಿಗೆ ಮರವೇರಿ ಕುಳಿತ ಪತಿರಾಯ..!

0
567

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶ: ಕೋರೋನಾ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಗಳಿಸಿ ಭಯಭೀತಿಗೊಂಡ ವ್ಯಕ್ತಿಯೋರ್ವ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಲಸಿಕೆ ನೀಡಲು ಆಗಮಿಸಿದ ವೇಳೆ ಪತ್ನಿಯ ಆಧಾರ್ ಕಾರ್ಡ್ ಹಿಡಿದುಕೊಂಡು ಮರವೇರಿ ಕುಳಿತ ಸ್ವಾರಸ್ಯಕರ ಘಟನೆ ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಪತಂಕಲನ್ ಎಂಬಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಕನ್ವರ್ ಲಾಲ್ ಎಂಬಾತ ಈ ಘಟನೆಗೆ ಕಾರಣವಾಗಿದ್ದು, ತನ್ನ ಪತ್ನಿ‌ ವ್ಯಾಕ್ಸಿನ್ ಪಡೆಯದಿರಲು ಈ ಯೋಚನೆ ಮಾಡಿದ್ದಾನೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಆರೋಗ್ಯ ಅಧಿಕಾರಿಗಳು ಪತಂಕಲನ್ ಗ್ರಾಮದ ನಿವಾಸಿಗಳಿಗೆ ಲಸಿಕೆ ಹಾಕಲು ಶಿಬಿರವನ್ನು ಆಯೋಜಿಸಿದ್ದರು. ಎಲ್ಲಾ ಗ್ರಾಮಸ್ಥರಿಗೆ ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಲಾಯಿತು. ಕನ್ವರ್ಲಾಲ್ ಶಿಬಿರಕ್ಕೆ ಆಗಮಿಸಿದರೂ ವ್ಯಾಕ್ಸಿನ್ ತೆಗೆದುಕೊಳ್ಳಲು ನಿರಾಕರಿಸಿದರು. ಲಸಿಕೆಯನ್ನು ತಪ್ಪಿಸುವ ಪ್ರಯತ್ನದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ಬಳಿಯಿದ್ದ ಬೃಹತ್ ಮರದ ಮೇಲೆ ಹತ್ತಿ‌ ಕುಳಿತನು.

ಕನ್ವರ್ಲಾಲ್ ಅವರ ಪತ್ನಿ ಲಸಿಕೆ ತೆಗೆದುಕೊಳ್ಳಲು ಸಿದ್ಧರಾಗಿದ್ದರು.‌ ಇದನ್ನರಿತ ಕನ್ವರ್ಲಾಲ್ ಮರವನ್ನು ಹತ್ತುವಾಗ ಆಕೆಯ ಆಧಾರ್ ಕಾರ್ಡ್ ಅನ್ನು ತನ್ನೊಂದಿಗೆ ಇಟ್ಟುಕೊಂಡೇ ಮರ ಹತ್ತಿ ವ್ಯಾಕ್ಸಿನ್ ತೆಗೆಯದಂತೆ ತಡೆದನು. ಬಳಿಕ ಖುಜ್ನರ್ ಬ್ಲಾಕ್ ನ ವೈದ್ಯಾಧಿಕಾರಿ ಡಾ.ರಾಜೀವ್ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಕನ್ವರ್ಲಾಲ್ ಅವರಿಗೆ ಸಲಹೆ ನೀಡಿ ಅವರ ಮನವೊಲಿಸಿ‌ದ ಬಳಿಕ ಆತ‌‌ ಮರದಿಂದ ಇಳಿದನು. ಆತ ಇಳಿಯುವ ಹೊತ್ತಿಗೆ ವ್ಯಾಕ್ಸಿನ್ ಖಾಲಿಯಾದ ಹಿನ್ನೆಲೆಯಲ್ಲಿ ಮುಂದಿನ ಶಿಬಿರದಲ್ಲಿ ಕನ್ವರ್ ಲಾಲ್ ಮತ್ತವರ ಪತ್ನಿ ಲಸಿಕೆ ತೆಗೆಯಲಿದ್ದಾರೆ ಎಂದು ಡಾ.‌ ರಾಜೀವ್ ತಿಳಿಸಿದ್ದಾರೆ.

ಈ ಘಟನೆಯು ಹಳ್ಳಿಗಳಲ್ಲಿ ಲಸಿಕೆ ಬಗ್ಗೆ ತಪ್ಪು ಗ್ರಹಿಕೆ ಉಂಟಾಗಿದೆ. ಗ್ರಾಮ ನಿವಾಸಿಗಳು ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿರವುದಂತು ಸುಳ್ಳಲ್ಲ‌.