ಮಂಗಳೂರು ವಿವಿ ಬಿಬಿಎ ಕನ್ನಡ ಪರೀಕ್ಷಾ ಗೊಂದಲ: ಸ್ಪಷ್ಟೀಕರಣ ಸಹಿತ ಸೂಕ್ತ ಕ್ರಮಕ್ಕೆ ಎಸ್‌ಐಓ ಆಗ್ರಹ

0
196

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರು ವಿವಿಯ ಬಿಬಿಎ ಪದವಿ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್’ನ ಕನ್ನಡ ವಿಷಯದ ಪರೀಕ್ಷೆಯು ಇಂದು ದಿನಾಂಕ 05/09/2022ರ ಸೋಮವಾರದಂದು ನಿಗದಿಯಾಗಿತ್ತು, ಅದರಂತೆ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಿದ್ದರು; ಆದರೆ, ದ್ವಿತೀಯ ಸೆಮಿಸ್ಟರಿನ ಪ್ರಶ್ನೆಪತ್ರಿಕೆಯಲ್ಲಿ ಪ್ರಥಮ ಸೆಮಿಸ್ಟರಿನ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕಂಡುಬಂದಿದ್ದರಿಂದ ಪರೀಕ್ಷಾ ಕೊಠಡಿಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು, ತದನಂತರ ವಿವಿಯ ಆದೇಶ ಮೇರೆಗೆ ಇಂದಿನ ಪರೀಕ್ಷೆಯನ್ನು ರದ್ದುಪಡಿಸಿ, ಮುಂದೂಡಲಾಗಿದೆ.

ಈ ಬೆಳವಣಿಗೆಯಿಂದ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ನಿರಾಸೆಯಿಂದ ಆಗೆಯೇ ಮನೆಗೆ ಹಿಂತಿರುಗಿ ಹೋಗಿದ್ದಾರೆ, ಬಹುತೇಕ ವಿದ್ಯಾರ್ಥಿಗಳಲ್ಲಿ ಇದರಿಂದ ಆತ್ಮವಿಶ್ವಾಸ ಕುಂದುಹೋಗಿದ್ದು, ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವಿವಿಯ ಆಡಳಿತ ಮಂಡಳಿ ಮತ್ತು ಪರೀಕ್ಷಾ ವಿಭಾಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿವಿಯ ಬೇಜವಾಬ್ದಾರಿಯುತ ಕಾರ್ಯದಿಂದ ಉಂಟಾದ ಈ ಅವಾಂತರಕ್ಕೆ ಕಾರಣವಾದವರನ್ನು ತಕ್ಷಣವೇ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮುಂದೆ ಈ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಲು ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಎಸ್.ಐ.ಓ (SIO) ಮಂಗಳೂರು ಘಟಕದ ನಿಯೋಗವು ವಿವಿಯ ಪರೀಕ್ಷಾ ವಿಭಾಗದ ಅಧಿಕಾರಿಗಳಿಗೆ ಭೇಟಿ ನೀಡಿ ಆಗ್ರಹಿಸಿತು.

ಎಸ್.ಐ.ಓ ಮಂಗಳೂರು ನಗರ ಘಟಕದ ಕಾರ್ಯದರ್ಶಿಯಾದ ಮೊಹಮ್ಮದ್ ಹಯ್ಯಾನ್ ನೇತೃತ್ವದ ನಿಯೋಗವು ವಿವಿಯ ಕುಲಪತಿ ಕುಲಸಚೀವರು, ಮತ್ತು ಪರೀಕ್ಷಾ ವಿಭಾಗದ ಅಧಿಕಾರಿಗಳಿಗೊಂದಿಗೆ ಮಾತುಕತೆ ನಡೆಸಿ, ಶೈಕ್ಷಣಿಕ ಆಡಳಿತದ ಸೂಕ್ತ ನಿರ್ವಹಣೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.