ಮಗುವಿನ ಜೀವ ಉಳಿಸಲಿಕ್ಕಾಗಿ ಹುಲಿಯೊಂದಿಗೆ ಹೋರಾಡಿದ ತಾಯಿ

0
337

ಸನ್ಮಾರ್ಗ ವಾರ್ತೆ

ಭೋಪಾಲ: ತನ್ನ 15 ತಿಂಗಳ ಮಗುವಿನ ಜೀವ ಉಳಿಸಲಿಕ್ಕಾಗಿ 25 ವರ್ಷದ  ಅರ್ಚನಾ ಚೌಧರಿ ಹುಲಿಯೊಂದಿಗೆ ಹೋರಾಡಿದ ಘಟನೆ ಮಧ್ಯಪ್ರದೇಶದ ಉಮಾರಿಯ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಹತ್ತು ಗಂಟೆಗೆ ನಡೆದಿದೆ. ಹುಲಿಯ ದಾಳಿಗೊಳಗಾದ ತಾಯಿ ಮಗುವನ್ನು ಚಿಕಿತ್ಸೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮದ ಬಂಧವ್‍ಗಡ್ ಹುಲಿ ಸಂರಕ್ಷಣಾ ಕೇಂದ್ರಕ್ಕೆ ತಾಗಿರುವ ರಸ್ತೆಯಲ್ಲಿ ಮಗುವನ್ನೆತ್ತಿಕೊಂಡು ಅರ್ಚನ ನಡೆದು ಬರುತ್ತಿದ್ದರು. ಪೊದೆಯ ಗಿಡಗಳ ನಡುವೆ ಅಡಗಿ ಕೂತಿದ್ದ ಹುಲಿ ಇವರ ಮೇಲೆ ದಾಳಿ ಮಾಡಿದೆ. ಮಗುವನ್ನು ರಕ್ಷಿಸಲಿಕ್ಕಾಗಿ 20 ನಿಮಿಷಗಳ ಕಾಲ ಅರ್ಚನಾ ಹೋರಾಡಿದ್ದಾರೆ. ಧ್ವನಿ ಕೇಳಿ ಸ್ಥಳೀಯರು ಅಲ್ಲಿಗೆ ಬಂದಾಗ ತಾಯಿ ಮಗುವನ್ನು ಬಿಟ್ಟು ಹುಲಿ ಕಾಡಿಗೆ ಪರಾರಿಯಾಯಿತು.

ಹುಲಿಯ ದಾಳಿಯಿಂದಾಗಿ ಅರ್ಚನಾ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ತಾಯಿ ಮಗುವನ್ನು ಜಬಲಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫಾರೆಸ್ಟ್ ಗಾರ್ಡ್ ರಾಮ್ ಸಿಂಗ್ ಮಾರ್ಕೊ ತಿಳಿಸಿದರು. ಹುಲಿಯ ಪತ್ತೆ ಹಾಗೂ ಸ್ಥಳೀಯರ ಸುರಕ್ಷಿತತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.