ಸನ್ಮಾರ್ಗ ವಾರ್ತೆ
ಮಣಿಪುರದ ಜನಾಂಗೀಯ ಗಲಭೆಯಲ್ಲಿ 121 ಚರ್ಚ್ ಗಳು ಧ್ವಂಸವಾಗಿವೆ ಎಂದು ಅಲ್ಲಿನ ಗುಡ್ ವಿಲ್ ಚರ್ಚ್ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಲಾಗಿದೆ. ಮೇ ಮೂರರಂದು ಈ ಘರ್ಷಣೆ ಪ್ರಾರಂಭವಾಗಿತ್ತು. ಮುಂದಿನ ನಾಲ್ಕು ದಿನಗಳವರೆಗೆ ಬಹಳ ತೀವ್ರಗತಿಯಲ್ಲಿ ಹಿಂಸಾಚಾರ ಮುಂದುವರಿದಿತ್ತು.
ಈ ಹಿಂಸಾಚಾರದಲ್ಲಿ ಈಗಾಗಲೇ 70 ಮಂದಿ ಸಾವಿಗೀಡಾಗಿದ್ದಾರೆ. 250 ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದು ಅಧಿಕೃತ ಲೆಕ್ಕಾಚಾರದ ಪ್ರಕಾರ 30000 ಮಂದಿ ಪಲಾಯನ ಮಾಡಿದ್ದಾರೆ.
ಬೆಟ್ಟದ ಮೇಲೆ ಮತ್ತು ಕೆಳಗಡೆ 45,000 ಕ್ಕಿಂತಲೂ ಅಧಿಕ ಮಂದಿ ನಿರಾಶ್ರಿತ ಶಿಬಿರದಲ್ಲಿ ಬದುಕು ದೂಡುತ್ತಿದ್ದಾರೆ ಎಂದು ಕ್ಯಾತೋಲಿಕ್ ಚರ್ಚ್ ಮುಖ್ಯಸ್ಥರಾದ ಡೊಮಿನಿಕ್ ಲೋಮನ್ ಹೇಳಿದ್ದಾರೆ. ಈ ಶಿಬಿರದಲ್ಲಿ ಇರುವವರಿಗೆ ನೆರವಾಗಬೇಕು ಎಂದು ಕೂಡ ಅವರು ಕೋರಿದ್ದಾರೆ.
ಪ್ರಬಲ ಹಿಂದೂ ಸಮುದಾಯವಾದ ಮೈತೆಯಿಯನ್ನು ಹಿಂದುಳಿದ ವಿಭಾಗದಲ್ಲಿ ಸೇರಿಸಬೇಕು ಮತ್ತು ಸೇರಿಸಬಾರದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆ ಇದಾಗಿದೆ. ಮೈತೆಯಿ ವಿಭಾಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರೆ ತಮ್ಮ ಅವಕಾಶಗಳಿಗೆ ಧಕ್ಕೆಯದಗುತ್ತದೆ ಎಂದು ಕುಕಿ ಮತ್ತು ನಾಗ ಸಮುದಾಯಗಳು ವಿರೋಧ ವ್ಯಕ್ತಪಡಿಸಿತು. ಈ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರಿದಿದ್ದು, ಜನಸಂಖ್ಯೆಯಲ್ಲೂ ಕೂಡ ಬಹುದೊಡ್ಡ ಸಮುದಾಯವಾಗಿ ಮಣಿಪುರದಲ್ಲಿ ಗುರುತಿಸಿಕೊಂಡಿದೆ.












