ಮಾಸದ ನೆನಪುಗಳು: ಮರ್ ಹೂಂ ಇಬ್ರಾಹೀಮ್ ಸಯೀದ್ ರವರು ಮಗಳ ಕಣ್ಣಲ್ಲಿ…

0
1151

ಲೇಖನ: ಲುಬ್ನ ಝಕೀಯ್ಯ

ಉಸಿರು- ಜೀವನ, ನಿಟ್ಟುಸಿರು- ಸಮಾಧಾನ, ಉಸಿರು ಕಟ್ಟುವಿಕೆ – ದಾರುಣ, ಉಸಿರು ನಿಲ್ಲುವುದು ಮರಣ. ಜೀವನ-ಮರಣದ ನಡುವಿನ ಆಟವೇ ಈ ಉಸಿರಾಟ. ಬಸಿರಿನಲ್ಲಿ ತಾಯಿಯ ಉಸಿರಿನೊಂದಿಗೆ ಆರಂಭವಾಗಿ, ಧರೆಗಿಳಿದ ಬಳಿಕ ಕೊನೆಯುಸಿರಿನ ತನಕವೂ ಯಾವುದೇ ಕ್ರತಕ ಉಸಿರಾಟದ ನೆರವಿಲ್ಲದೆ ನಿರಾಯಾಸವಾಗಿ ಉಸಿರಾಡಲು ಸಾಧ್ಯವಾದರೆ ಅದೇ ದೇವನ ಅತಿ ದೊಡ್ಡ ಅನುಗ್ರಹ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಮಂದಿ ನಾವು ಈವರೆಗೆ ಅತ್ಯಂತ ಸಹಜ, ನಿರಾಯಾಸಕರ ಪ್ರಕ್ರಿಯೆ, ಎಂದು ಭಾವಿಸಿದ್ದ ಈ ಉಸಿರಾಟಕ್ಕೂ ತೊಂದರೆ ಅನುಭವಿಸಿ ಚಡಪಡಿಸುವುದನ್ನು ಕಾಣುವಾಗ ನಿರಾತಂಕವಾಗಿ ಉಸಿರಾಸಿರಾಡಲು ಸಾಧ್ಯವಾಗುವ ನಾವುಗಳು ಖಂಡಿತ ಭಾಗ್ಯವಂತರು ಎನ್ನಿಸದಿರಲಾರದು. ಇದನ್ನು ನಮ್ಮ ಕೊನೆಯುಸಿರನವರೆಗೂ ನಮಗೆ ಅನುಗ್ರಹಿಸು ಎಂದು ಆ ದೇವನಲ್ಲಿ ಎಷ್ಟು ಮೊರೆಯಿಟ್ಟರೂ ಸಾಲದು.

ಅದು ಮೇ 27, 2007ರ ಮುಂಜಾವು. ನಗರದ ಪ್ರಸಿದ್ಧ ಆಸ್ಬತ್ರೆಯ ತೀವ್ರ ನಿಗಾಘಟಕದಲ್ಲಿ, ಕ್ರತಕ ಉಸಿರಾಟದ ಸಹಾಯದಿಂದ, ಮುಖವನ್ನು ಎಡಕ್ಕೂ ಬಲಕ್ಕೂ ತಿರುಗಿಸಿ, ಉಸಿರು ದಕ್ಕಿಸಿ ಕೊಳ್ಳಲು ಹೆಣಗಾಡುತ್ತಿದ್ದ, ನನ್ನ ತಂದೆಯವರ ಆ ದಯನೀಯ ಚಿತ್ರಣ ನನ್ನ ಸ್ಮೃತಿಪಟಲದಿಂದ ಎಂದೂ ಮಾಸದು. ಅತ್ಯಂತ ಅಸಹನೀಯ ಯಾತನೆಯನ್ನು ಅನುಭವಿಸುತ್ತಿದ್ದ ಅವರನ್ನು ಕಂಡು ಆ ಕ್ಷಣ ಈ ಬದುಕೆಷ್ಟು ದುಸ್ತರ ಎಂಬ ನಿರಾಶಾಭಾವ ಮೂಡಿದರೆ, ಮರುಕ್ಷಣವೇ, ಅಪ್ಪನವರು ಕಲಿಸಿದ ಜೀವನ ಪಾಠ ಇದಕ್ಕೆ ತದ್ವಿರುದ್ಧವಾದ ಆಶಾವಾದ, ನಿರೀಕ್ಷೆ, ಶುಭ ಮುಂಜಾನೆಯ ಪ್ರತೀಕ್ಷೆಯೇ ಆಗಿತ್ತು ಎಂಬುದು ನೆನಪಿಗೆ ಬಂತು.

ಶ್ವಾಸಕೋಶದ ಅರ್ಬುದ ರೋಗಕ್ಕೆ ತುತ್ತಾಗಿ, ಆ ರೋಗ ಪತ್ತೆ ಯಾದ ಕೆಲವೇ ದಿನಗಳಲ್ಲಿ ತನಗೆ ನಿರಾಯಾಸವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಮುಖಭಾವ, ಶರೀರದ ಇಂಚಿಂಚಿನಲ್ಲೂ ಅವರು ಅನುಭವಿಸುತ್ತಿದ್ದ ನೋವು ಬಾಹ್ಯವಾಗಿ ನಮಗೆ ಗೋಚರಿಸುತ್ತಿದ್ದರೂ, ಅವರ ಬಾಯಿಯಿಂದ ‘ ಛೆ’ ಎಂಬ ಉಧ್ಗಾರವೂ ಹೊರಟಿರಲಿಕ್ಕಿಲ್ಲ. ರೋಗದ ಬಗ್ಗೆ ವಿಷಾದ ವ್ಯಕ್ತ ಪಡಿಸುವುದೋ, ಅನುಚಿತ ಮಾತೆತ್ತುವುದೋ, ತೀರಾ ಅಸಂಭವನೀಯವಾಗಿತ್ತು. ಸಂಪೂರ್ಣ ಪ್ರಜ್ಞೆ ಯೊಂದಿಗೆ ಈಗ ಆ ಕ್ಷಣಗಳನ್ನು ನೆನಪಿಸುವಾಗ ನಮಗೆ ಸಿಗುವ ಪಾಠ – ರೋಗ ಮನುಷ್ಯನನ್ನು ಶಾರೀರಿಕವಾಗಿ ಹಿಂಡಿ ಹಿಪ್ಪೆಯಾಗಿಸಿದರೂ, ಮಾನಸಿಕವಾಗಿ ನಾವು ಧೃತಿಗೆಡದೆ ಇರಬೇಕಾದರೆ ನಮ್ಮಲ್ಲಿ ಈ ಲೋಕದ ವಾಸ್ತವಿಕತೆ, ಕ್ಷಣಿಕತೆಯ ಬಗ್ಗೆ ಸಂಪೂರ್ಣ ಅರಿವಿರಬೇಕು.ಅದೇ ರೀತಿ ತಂದೆಯವರಲ್ಲಿದ್ದ ಅಚಲ ದೇವ ವಿಶ್ವಾಸ, ಪರಲೋಕದಲ್ಲಿ ದೇವನನ್ನು ಸಂಧಿಸುವ ಬಗ್ಗೆ ಇದ್ದ ಶುಭಾಕಾಂಕ್ಷೆಗಳು ಅವರ ಮನಸ್ಸನ್ನು ಎಂದೂ ಕುಗ್ಗದಂತೆ ಮಾಡಲು ಹೇತುವಾಯಿತು.ರೋಗ ಮನುಷ್ಯನ ದೇಹವನ್ನು ಸೋಲಿಸಬಹುದು ಆದರೆ ಆಶಾವಾದಿಯಾದ ಮನುಷ್ಯನ ಆತ್ಮವನ್ನು, ಮನಸ್ಸನ್ನು ಅದಕ್ಕೆ ಸೋಲಿಸಲು ಸಾಧ್ಯವಿಲ್ಲ ಎಂಬ ವಾಸ್ತವಿಕತೆಯನ್ನು ಇತ್ತೀಚಿನ ದಿನಗಳಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ನೋವನುಭವಿಸುತ್ತಿರುವವರು ನೆನಪಿಸಿ ಕೊಂಡರೆ ಮಾನಸಿಕವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯ ಬಹುದು.

ಲಾಕ್ ಡೌನ್ ನ ಈ ಸಂದಿಗ್ಧ ಕಾಲಘಟ್ಟದಲ್ಲಿ ಮನಸ್ಸನ್ನು ಉಲ್ಲಾಸಭರಿತವಾಗಿರಿಸಲು, ಆಸಕ್ತಿದಾಯಕ ಕಾರ್ಯಗಳಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಂಡು ಲವಲವಿಕೆಯಿಂದ ಇರಲು, ಹೆಚ್ಚಿನವರು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ನನ್ನ ತಂದೆಯವರ ಚಟುವಟಿಕೆಗಳ ಕುರಿತು ಕೆಲವು ವಿಷಯಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ಎಂದೆನಿಸುತ್ತದೆ. ಅವರ ಪರಿಚಯವಿರುವವರೆಲ್ಲರಿಗೂ ಅವರ ಬರವಣಿಗೆಯ ಬಗ್ಗೆ, ಅವರಿಗೆ ಓದಿನಲ್ಲಿ ಇದ್ದ ಆಸಕ್ತಿಯ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಇದರ ಜೊತೆ ಜೊತೆಗೆ ಅವರಿಗೆ ಸಂಗೀತ, ಹಾಡುಗಾರಿಕೆಯಲ್ಲಿ ಇದ್ದ ಆಸಕ್ತಿ ಬಹಳ ಛೇತೋಹಾರಿ. ಹಾಡುಗಳನ್ನು ಕೇಳುವುದಕ್ಕೂ ಅದನ್ನು ಗುನುಗುನಿಸುವುದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದು ಅದರ ಅನುಭವವಿರುವವರಿಗೇ ಚೆನ್ನಾಗಿ ಗೊತ್ತು. ತಂತ್ರಜ್ಞಾನ ಇಂದಿನಷ್ಟು ಮುಂದುವರಿದಿಲ್ಲದ ಆ ಕಾಲಘಟ್ಟದಲ್ಲಿಯೂ ತನಗೆ ಅಚ್ಚುಮೆಚ್ಚಿನ ಕವಿ ಮಹಾಕವಿ ಇಕ್ಬಾಲರ ಗಜಲ್ ಗಳನ್ನು, ಹಾಡುಗಳನ್ನು ಕೇಳುತ್ತಲೂ, ಹಾಡುತ್ತಲೂ, ಮನೆಯಲ್ಲಿ ನಮ್ಮೊಂದಿಗೆ ಹಾಡಿಸುತ್ತಲೂ ಇದ್ದುದು ಕಾವ್ಯ ದಲ್ಲಿ ಅವರಿಗಿದ್ದ ಆಸಕ್ತಿಯನ್ನು ಎತ್ತಿತೋರಿಸುತ್ತದೆ. ಕೇವಲ ಅಂಗೈಯಷ್ಟು ಅಗಲವಿದ್ದ ಸ್ಟಿಫ್ ಬೈಂಡ್ ಹಾಕಿದ ಅತಿ ಕಿರುಹೊತ್ತಗೆಯಲ್ಲಿ ಸಪೂರ ಉರ್ದು ಅಕ್ಷರಗಳಲ್ಲಿ ಬರೆದಿದ್ದ ಕವಿತೆಗಳನ್ನು ಅವರು ಹಾಡುತ್ತಿದ್ದ ಶೈಲಿ ನಿಜಕ್ಕೂ ಮನಮುಟ್ಟುವಂತಿತ್ತು. ಬಾಲಕಿಯಾಗಿರುವಾಗ ಇಕ್ಬಾಲರ ಉರ್ದು ಭಾಷೆಯ ಪದಗಳ ಅರ್ಥ ನನ್ನರಿವಿಗೆ ನಿಲುಕುವಂತಹದ್ದಾಗಿರದಿದ್ದರೂ, ತಂದೆಯವರು ವಾಚಿಸುತ್ತಿದ್ದ ಶೈಲಿ ಅದಕ್ಕೆ ಜೀವತುಂಬಿ, ಭಾಷೆ ಅರಿಯದವರೂ ಅರ್ಥೈಸುವಂತಿತ್ತು.

ಕ್ಯೂ ಝಿಯಾ ಕಾರ್ ಬನೂ ಸೂದ್ ಫರಾ ಮೋಶ್ ರಹೂ… ಎಂಬ ಪಂಕ್ತಿಯೊಂದಿಗೆ ಆರಂಭವಾಗುವ ಅಲ್ಲಾಮಾ ಇಕ್ಬಾಲರ ಜಗತ್ ಪ್ರಸಿದ್ಧ ಶಿಕ್ವಾ – ಜವಾಬೆ ಶಿಕ್ವಾ ಹಾಡಿನ ಪ್ರಥಮ ಕೆಲವು ಚರಣಗಳು ಇಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಇದೆ. ಎಷ್ಟೊಂದು ಗಹನವಾದ ಸಾಲುಗಳವು! ನತೂ ಝಮೀನ್ ಕೆ ಲಿಯೇ ಹೈ ನ ಆಸ್ ಮಾನ್ ಕೆ ಲಿಯೇ… ಜಹಾನ್ ಹೈ ತೇರೆ ಲಿಯೇ ತೂ ನಹೀಂ ಜಹಾನ್ ಕೆ ಲಿಯೇ ಎಂಬ ” ನೀನಾ ರಿಗಾದೆ ಎಲೈ ಮಾನವ” ಎಂಬ ಕವನವನ್ನು ಏರುದನಿಯಲ್ಲಿ ಅರ್ಥಗರ್ಭಿತವಾಗಿ ಹಾಡುತ್ತಿದ್ದುದು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಬಾಲಕಿಯಾಗಿ ತಂದೆಯವರು ಹಾಡುತ್ತಿದ್ದ ಹಾಡುಗಳಲ್ಲಿ ನನ್ನ ಮನಸ್ಸಿಗೆ ತುಂಬಾ ಸಮೀಪವಾದ ಹಾಡು ಆತಾ ಹೈ ಯಾದ್ ಮುಜ್ ಕೋ, ಗುಝ್ ರಾ ಹುವಾ ಝಮಾನ…. ಓ ಬಾಗ್ ಕೆ ಬಹಾರೇ ಓ ಸಬ್ ಕ ಚಹ್ ಚಹಾನ ಎಂದು ತನ್ನ ಗತ ಸ್ವತಂತ್ರ ಜೀವನ ವನ್ನು ನೆನಪಿಸುತ್ತಾ ಹೃದಯ ಸ್ಪರ್ಶಿ ಯಾಗಿ ಹಾಡುವ ಆ “ಹಕ್ಕಿಯ ಪ್ರಲಾಪ”… ತಂದೆಯವರ ಧ್ವನಿಯನ್ನು ನೆನಪಿಸುತ್ತಾ ಇಂದಿಗೂ ನನ್ನ ಕಣ್ಣುಗಳನ್ನು ಮಂಜಾಗಿಸುತ್ತದೆ. ಬಿಡುವಿದ್ದಾಗ ಮನೆಮಂದಿಯನ್ನು ಒಟ್ಟು ಸೇರಿಸಿ ಈ ರೀತಿ ಹಾಡುವುದು, ಹಾಡಿಸುವುದು, ಹಾಡು ಕೇಳುವುದು ನನ್ನ ತಂದೆಯವರಿಗೆ ಬಹಳ ಖುಷಿ ಕೊಡುತ್ತಿದ್ದ ಚಟುವಟಿಕೆಗಳಲ್ಲಿ ಒಂದು.

ಅತ್ಯಂತ ಅನನ್ಯ ಕಂಠಸಿರಿಯನ್ನು ಹೊಂದಿದ್ದ ತಂದೆಯವರ ಭಾಷಣದ, ಮಾತುಗಾರಿಕೆಯ ಧ್ವನಿ ಯಾರೂ, ಎಂದೂ ಮರೆಯುವಂಥದ್ದಲ್ಲ. ಪವಿತ್ರ ಕುರ್ ಆನ್ ನ ಕನ್ನಡ ಭಾವಾನುವಾದವನ್ನು ವಾಚಿಸಿ, ಧ್ವನಿಮುದ್ರಣ ಮಾಡಿದ ಶೈಲಿ ಎಂತಹವರನ್ನೂ ಒಮ್ಮೆ ಬಡಿದೆಬ್ಬಿಸುವಂತಹದ್ದು. ಯವ್ವನದ ಸಮಯದಲ್ಲಿ ಸರ್ಕಸ್ ಕಂಪೆನಿಯವರು ಅದರ ಪ್ರಚಾರಾರ್ಥ, ತಂದೆಯವರೊಂದಿಗೆ ಅವರ ಕಂಠ ನೀಡಲು ಕೋರಿಕೊಂಡದ್ದರು ಎಂಬುದನ್ನು ಹೇಳಿ ಹಲವು ಬಾರಿ ಹಾಸ್ಯಚಟಾಕಿ ಉಡಾಯಿಸಿದ್ದಿದೆ. ಅದೇ ರೀತಿ ಸಂದೇಶ ಸ್ಟುಡಿಯೋದಲ್ಲಿ ಬೈಬಲ್ ವಾಚನಕ್ಕಾಗಿ ತಮ್ಮ ಧ್ವನಿಯನ್ನು ನೀಡಬೇಕು ಎಂದು ಅವರೊಂದಿಗೆ ಬೇಡಿಕೊಂಡಾಗ, ನನ್ನ ಧ್ವನಿ ಮಾರಾಟಕ್ಕಿರುವುದಲ್ಲ ಎನ್ನುತ್ತಾ ದೇವನ ಅನುಗ್ರಹವನ್ನು ಆತನ ಹಾದಿಯಲ್ಲೇ ವ್ಯಯಿಸಲು ತಾನು ಎಲ್ಲ ಸಂಧರ್ಭಗಳಲ್ಲೂ ಬದ್ಧ ಎಂಬ ತಮ್ಮ ಆದರ್ಶವನ್ನು ಎತ್ತಿ ತೋರಿಸಿದ್ದಾರೆ.

ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡರೂ ಆ ವಿಶ್ವಾಸ, ದ್ರಢತೆ, ಸ್ವಾಭಿಮಾನ, ಆಶಾವಾದ ಮತ್ತು ಸದಾಕಾಂಕ್ಷೆ ಎಲ್ಲ ಸಂದರ್ಭಗಳಲ್ಲೂ ಅವರನ್ನು ಧೃತಿಗೆಡದಂತೆ ಮಾಡಿತ್ತು. ಇದೇ ನಾವು ಅವರ ಬದುಕಿನಿಂದ ಕಲಿಯಬೇಕಾದ,ಎಂದೆಂದಿಗೂ ಪ್ರಸ್ತುತವಾದ ಅತಿದೊಡ್ಡ ಜೀವನ ಪಾಠ.

✍️ ಲುಬ್ನ ಝಕೀಯ್ಯ
ಇಬ್ರಾಹೀಮ್ ಸಯೀದ್ ರ ಮಗಳು