7 ಲಕ್ಷದ ಆಂಬ್ಯುಲೆನ್ಸ್ 21 ಲಕ್ಷಕ್ಕೆ ಖರೀದಿಸಿ ಶೆಡ್‍ನಲ್ಲಿ: ಬಿಹಾರದಲ್ಲಿ ಕಾವೇರಿದ ವಿವಾದ

0
477

ಸನ್ಮಾರ್ಗ ವಾರ್ತೆ

ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಕಳೆದ ವರ್ಷ ಕೊರೋನ ತೀವ್ರಗೊಂಡಿದ್ದಾಗ ಮೂರು ಪಟ್ಟು ಹೆಚ್ಚು ಬೆಲೆಗೆ ಖರೀದಿಸಿದ ಆಂಬ್ಯುಲೆನ್ಸ್ ಗಳನ್ನು ಉಪಯೋಗಿಸದೆ ಪಾರ್ಕಿಂಗ್ ಶೆಡ್‍ನಲ್ಲಿ ಇರಿಸಲಾಗಿದ್ದು, 7 ಲಕ್ಷ ರೂಪಾಯಿ ಇದ್ದ ಆಂಬ್ಯುಲೆನ್ಸ್ ಗೆ 21.84 ಲಕ್ಷ ರೂಪಾಯಿ ಕೊಟ್ಟು ಖರೀದಿಸಲಾಗಿದೆ ಎಂದು ವರದಿ ಬಹಿರಂಗಗೊಂಡ ಬಳಿಕ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ ತೀವ್ರಗೊಂಡಿದೆ. ಸದ್ಯ ಬಿಹಾರದಲ್ಲಿ ಇದು ವಿವಾದದ ಕೇಂದ್ರ ಬಿಂದುವಾಗಿದೆ.

ಐದು ಲಕ್ಷಕ್ಕಿಂತ ಹೆಚ್ಚು ಬೆಲೆಯ ವಸ್ತುಗಳನ್ನು ಖರೀದಿಸುವಾಗ ಅದನ್ನು ಸರಕಾರದ ಇ ಮಾರ್ಕೆಟ್‍ ಪ್ಲೇಸ್ ಮೂಲವೇ ಖರೀದಿಸಬೇಕೆಂದು ನಿಬಂಧನೆಯಿದ್ದು ಅದನ್ನು ಈ ಆಂಬ್ಯುಲೆನ್ಸ್ ಖರೀದಿಸುವಲ್ಲಿ ಉಲ್ಲಂಘಿಸಲಾಗಿದೆ. ಏಳು ಆಂಬುಲೆನ್ಸ್‍ಗಳಲ್ಲಿ ಐದನ್ನು ಮುಖ್ಯಮಂತ್ರಿಯ ಪ್ರಾದೇಶಿಕ ವಿಕಸನ ಫಂಡ್ ನಿಂದ ಖರೀದಿಸಲಾಗಿದೆ.

ವೆಂಟಿಲೇಟರ್ ಅಳವಡಿಸಲಾಗಿರುವುದರಿಂದ ಮತ್ತು ಸೀಟು ಆಲ್ಟ್ರೇಶನ್ ಮಾಡಿಸಿದ್ದರಿಂದ ಖರೀದಿ ದರ ಹೆಚ್ಚಳವಾಯಿತೆಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ವಾಹನದಲ್ಲಿ ಮಾಡಿದ ಈ ಬದಲಾವಣೆಗಳನ್ನು ಸಾರ್ವಜನಿಕ ಟೆಂಡರ್ ಮೂಲಕ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಸಿವಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅಮಿತ್ ಪಾಂಡೆ ಹೇಳಿದ್ದು, ಕೊರೋನದ ಸಮಯದಲ್ಲಿ ಖರೀದಿಸಿದ ಎಲ್ಲ ಆಂಬ್ಯುಲೆನ್ಸ್ ಗಳ ವಿಷಯದಲ್ಲಿಯೂ ಸಮಗ್ರವಾದ ತನಿಖೆ ನಡೆಯಬೇಕೆಂದು ಮಾಜಿ ಸಚಿವ ವಿಕ್ರಂ ಕುನ್ವರ್ ಮುಖ್ಯಮಂತ್ರಿ ನಿತೀಶ್ ಕುಮಾರ್‍ರನ್ನು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಇಂಡಿನ್ ಮಾರ್ಟ್ ಎಂಬ ಇ-ಕಾಮಸ್ ಕಂಪೆನಿ 60,000ಕ್ಕೆ ಮಾರುತ್ತಿರುವ ವೆಂಟಿಲೇಟರ್ ಗೆ 3.41 ಲಕ್ಷ ರೂ. ನೀಡಿ ಖರೀದಿಸಲಾಗಿರುವುದು ಬಹಿರಂಗವಾಗಿದ್ದು 31 ಸಾವಿರ ರೂಪಾಯಿ ಬೆಲೆಯ ಮೆಡಿಕಲ್ ಉಪಕರಣಗಳನ್ನು 1.18 ಲಕ್ಷಕ್ಕೆ ಖರೀದಿಸಲಾಗಿದೆ. 8500 ರೂಪಾಯಿಯ ಸಕ್ಷನ್ ಮೆಶಿನ್ 33,000 ರೂಪಾಯಿ ನೀಡಲಾಗಿದೆ. ಸೀಟು ರೂಪಾಂತರಕ್ಕೆ 1.24 ಲಕ್ಷ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಮಾಜಿ ಸಚಿವ ವಿಕ್ರಂ ಕುನ್ವರ್ ಪತ್ರದಲ್ಲಿ ತಿಳಿಸಿದ್ದಾರೆ.

ಕೊರೊನ ಕಾಲದಲ್ಲಿ ಆಂಬುಲೆನ್ಸ್ ಕೊರತೆ ಇದ್ದು ಬಿಹಾರದಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಇದು ಕಾರಣವಾಗುತ್ತಿದೆ. ಆದರೆ ಎರಡನೆ ಅಲೆಯ ಸಂದರ್ಭದಲ್ಲೂ ಈ ಆಂಬುಲೆನ್ಸ್ ಗಳನ್ನು ಉಪಯೋಗಿಸಲಾಗಿಲ್ಲ. ರಾಜೀವ್ ಪ್ರತಾಪ್ ರೂಢಿ ಸಂಸದರ ಮನೆಯ ಹತ್ತಿರ ಆಂಬುಲೆನ್ಸ್ ಗಳು ಬಿದ್ದುಕೊಂಡಿರುವುದು ದೊಡ್ಡ ಸುದ್ದಿಯಾಗಿತ್ತು. ಸರನ್‍ನ ಬಿಜೆಪಿ ಸಂಸದರಾದ ರೂಢಿಯ ಮನೆಯ ಬಳಿ ಆಂಬುಲೆನ್ಸ್ ಗೆ ಟರ್ಪಾಲು ಹೊದ್ದು ಇರಿಸಲಾಗಿತ್ತು. ಜನ್ ಅಧಿಕಾರ್ ಪಾರ್ಟಿಯ ಅಧ್ಯಕ್ಷ ಪಪ್ಪು ಯಾದವ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದರು.