ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ಇತ್ತೀಚೆಗೆ ನೆಕ್ಕಿಲಾಡಿ ಹುದಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ‘ ಮಸ್ಜಿದ್ ದರ್ಶನ್’ ಕಾರ್ಯಕ್ರಮದಂದು ಪುತ್ತೂರಿಗೆ ವಿಧಾನಸಭಾ ಸ್ಪೀಕರ್ ಶ್ರೀವಿಶ್ವೇಶ್ವರ ಕಾಗೇರಿಯವರು ಬಂದುದರಿಂದ ತುರ್ತು ಕಾರ್ಯದ ನಿಮಿತ್ತ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿದ್ದ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ವಿಷಾದ ವ್ಯಕ್ತಪಡಿಸಿ, ಮಸ್ಜಿದ್ ದರ್ಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಾಸಕರನ್ನು ಇಂದು ಬೆಳಗ್ಗೆ (ಜನವರಿ 8) ಅವರ ನಿವಾಸದಲ್ಲಿ ಸಂಘಟಕರು ಭೇಟಿಯಾಗಿ ಕಾರ್ಯಕ್ರಮದ ಸವಿ ನೆನಪಿಗಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ತಮಗೆ ಸಾಧ್ಯವಾಗುವ ಸಮಯದಲ್ಲಿ ಮಸೀದಿಗೆ ಭೇಟಿ ನೀಡಬೇಕೆಂಬ ಕೋರಿಕೆಯನ್ನು ಶಾಸಕರು ಸಂತೋಷದಿಂದ ಸ್ವೀಕರಿಸಿದರು. ಅದೇ ವೇಳೆ ಪ್ರಸ್ತುತ ಮಸೀದಿ ಆವರಣದ ನದಿ ಬದಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಮನವಿಯೊಂದನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಕಾರ್ಯಕ್ರಮ ಸಂಚಾಲಕರಾದ ಅಮೀನ್ ಅಹ್ಸನ್, ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಜಲೀಲ್ ಮುಕ್ರಿ, ಸಮಿತಿ ಸದಸ್ಯರಾದ ಇಕ್ಬಾಲ್ ಪಾಂಡೇಲ್, ಜ. ಇ. ಹಿಂದ್ ಉಪ್ಪಿನಂಗಡಿ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಹಸೀಬ್ ಹಾಗೂ ಜ. ಇ. ಹಿಂದ್ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಂ ಉಪ್ಪಿನಂಗಡಿ ಉಪಸ್ಥಿತರಿದ್ದರು.












