ಮಸೀದಿಯ ಇಫ್ತಾರ್ ಕೂಟ, ಭೋಜನ ಮತ್ತು ಸಾಮರಸ್ಯ ..

0
426

ಸನ್ಮಾರ್ಗ ವಾರ್ತೆ

ದೇಶಾದ್ಯಂತ ಮಸೀದಿಗಳಲ್ಲಿ ಇಫ್ತಾರ್ ಕೂಟಗಳು ನಿರಂತರ ನಡೆಯುತ್ತಿವೆ. ಈ ಕೂಟಗಳಲ್ಲಿ ಅನ್ಯಧರ್ಮದವರನ್ನು ಆಹ್ವಾನಿಸಿ ಸಹಭೋಜನವನ್ನು ಮಾಡುವುದರ ಮೂಲಕ ಸಾಮರಸ್ಯ ಸಂದೇಶ ಸಾರುವುದು ಸ್ವಾಗತಾರ್ಹ. ಇದರ ಉದ್ದೇಶವೇ ಇತರ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಸ್ಥಾಪಿಸುವುದೇ ಆಗಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹ ಒಂದು ಪದ್ಧತಿ.

ಆದರೆ ಸಮಸ್ಯೆಯೆಂದರೆ, ರಂಜಾನ್ ಇಫ್ತಾರ್ ಸಂದರ್ಭದಲ್ಲಿ ಮುಸ್ಲಿಮರೆಲ್ಲರೂ ಉಪವಾಸಿಗರಾಗಿರುತ್ತಾರೆ. ಬರೀ ಊಟ ಉಪಹಾರದ ಹೊರತಾಗಿ ಈ ಕೂಟಗಳ ಆ ಹೊತ್ತಿನಲ್ಲಿ ಬೇರಾವುದಕ್ಕೂ ಸಮಯ, ಅವಕಾಶ ಮತ್ತು ಮನಸ್ಸು ಇರುವುದಿಲ್ಲ. ಆಹಾರ ಸೇವಿಸುವುದು ಮತ್ತು ಪ್ರಾರ್ಥನೆಗೆ ಸಿದ್ಧವಾಗುವ ಕಾರಣಕ್ಕೆ ಹೆಚ್ಚಿನವರು ಬಹಳ ಗಡಿಬಿಡಿಯಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಬಂದ ಅತಿಥಿಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಕೆಲವೊಮ್ಮೆ ಆಹ್ವಾನಿತರಿಗೆ ಸೂಕ್ತ ಆತಿಥ್ಯವನ್ನು ನೀಡದ ಉದಾಹರಣೆಗಳು ಇವೆ. ಇದು ಸ್ವಲ್ಪಮಟ್ಟಿಗೆ ಗೊಂದಲಗಳಿಗೆ ಕಾರಣವಾಗಬಹುದು.

ಇಫ್ತಾರ್ ನಲ್ಲಿ ಧಾರ್ಮಿಕ ಪಠಣ ಮತ್ತು ಪ್ರಕ್ರಿಯೆಗಳು ಇರುವುದರಿಂದ ಅನ್ಯಧರ್ಮದವರಿಗೆ ಇದರಲ್ಲಿ ಒಳಗೊಳ್ಳಿಸುವುದು ಅಷ್ಟು ಸಮಂಜಸವಲ್ಲ. ಇದರ ಬದಲಾಗಿ ಸಾಮರಸ್ಯ ಸ್ಥಾಪಿಸಲು ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರತಿವರ್ಷ ಮಸೀದಿಯ ವಠಾರ ಅಥವ ಪ್ರತ್ಯೇಕ ಮೈದಾನಗಳಲ್ಲಿ ಹಗಲು ಅಥವಾ ರಾತ್ರಿ ಕೆಲವು ಗಂಟೆಗಳ ಸಾಮರಸ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಸರ್ವಧರ್ಮದ ಅತಿಥಿಗಳನ್ನು ಆಹ್ವಾನಿಸುವುದರ ಮೂಲಕ ಹಮ್ಮಿಕೊಳ್ಳುವುದು ಉತ್ತಮ. ಇಸ್ಲಾಮಿನ ಶಾಂತಿ ಮತ್ತು ಸೌಹಾರ್ದದ ಇತಿಹಾಸ ಮತ್ತು ಸಂದೇಶವನ್ನು ಸಾರಲು ಇಂತಹ ಕಾರ್ಯಕ್ರಮಗಳಲ್ಲಿ ಮುಕ್ತ ಮತ್ತು ಹೆಚ್ಚಿನ ಅವಕಾಶವಿರುತ್ತದೆ. ಹೀಗೆ ಮಾಡುವುದರಿಂದ ಸಮುದಾಯಗಳ ನಡುವೆ ಜಗಳ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಗೆ ದೊಡ್ಡ ಹಿನ್ನಡೆಯಾಗುತ್ತದೆ. ಹೀಗಾಗಿ ಇಫ್ತಾರ್ ಕೂಟಗಳಿಗಿಂತ ವಾರ್ಷಿಕವಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ಪ್ರತಿ ಮಸೀದಿಗಳವರು ಹಮ್ಮಿಕೊಳ್ಳುವುದು ಬಹಳ ಪರಿಣಾಮಕಾರಿ.

ಹೊರಗಿನವರಿಗೆ ಆಹ್ವಾನವಿಲ್ಲದ ಇನ್ನಿತರ ದಿನಗಳ ಇಫ್ತಾರ್ ಸಂದರ್ಭದಲ್ಲೂ ಮಸೀದಿಗೆ ಬರುವ ಬರಿಯ ಪುರುಷರಿಗೆ ಮಾತ್ರ ಊಟದ ವ್ಯವಸ್ಥೆಯನ್ನು ಮಾಡುವುದು ಇಸ್ಲಾಮಿನ ಆಶಯಗಳ ಪ್ರಕಾರ ದೊಡ್ಡ ತಪ್ಪು. ಮಸೀದಿಯಲ್ಲಿ ಊಟದ ಏರ್ಪಾಡು ಮಾಡುವವರು ಕನಿಷ್ಠ ಪ್ರಮಾಣದಲ್ಲಾದರೂ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಆಹಾರ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಬರಿಯ ಪುರುಷರು ಮಸೀದಿಯಲ್ಲಿ ವಿಶೇಷವಾಗಿ ತಯಾರಿಸಿದ ಬಿರಿಯಾನಿ ತಿಂದು ಮಗರಿಬ್ ನಮಾಜ್ ಪೂರೈಸಿ ತೇಗುತ್ತಾ ಸಾಮಾನ್ಯ ಆಹಾರ ಸೇವಿಸಿದ ಮಕ್ಕಳು ಮಹಿಳೆಯರನ್ನು ಎದುರುಗೊಳ್ಳಬಾರದು. ಮಹಿಳೆಯರಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂಬ ಇಸ್ಲಾಮಿಕ್ ನಿಯಮ ಒಂದು ಸೌಲಭ್ಯವೇ ಹೊರತು ನಿರ್ಬಂಧವಲ್ಲ. ಮಸೀದಿಯಲ್ಲಿ ತಯಾರಾಗುವ ಆಹಾರವು ಅವರ ಹಕ್ಕಿನ ಆಹಾರ. ರಂಜಾನ್ ಪವಿತ್ರ ಮಾಸದಲ್ಲಿ ಒಂದೇ ಮನೆಯ ಪುರುಷರು ವಿಶೇಷ ಆಹಾರ ಸೇವಿಸುವುದು ಮತ್ತು ಮಹಿಳೆಯರು ಸಾಮಾನ್ಯ ಆಹಾರ ಸೇವಿಸುವುದು, ಇದೊಂದು ಆರಾಧನೆ ನಷ್ಟಗೊಳಿಸುವ ಅತಿ ಕೆಟ್ಟ ಪದ್ಧತಿ. ರಂಜಾನ್ ನಲ್ಲಿ ಈ ಪದ್ಧತಿ ಬಹುತೇಕ ಎಲ್ಲಾ ಮಸೀದಿಗಳಲ್ಲಿ ಇದೆ. ಪ್ರವಾದಿಯವರು ಆಹಾರವನ್ನು ಹಂಚಿಕೊಂಡು ತಿನ್ನುವ ಉತ್ತಮ ಮಾದರಿಯನ್ನು ಸಮುದಾಯಕ್ಕೆ ನೀಡಿದ್ದಾರೆ. ಸಮುದಾಯ ಚಿಂತಿಸಲಿ..

✍🏽 ಮುಷ್ತಾಕ್ ಹೆನ್ನಾಬೈಲ್