ಸನ್ಮಾರ್ಗ ವಾರ್ತೆ
ಬಂಟ್ವಾಳ: ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಔಷಧ ತೆಗೆದುಕೊಳ್ಳಲು ಕಷ್ಟಪಡುತ್ತಿದ್ದ ಕೋರೋನಾ ರೋಗಿಯೋರ್ವರಿಗೆ ಮೆಡಿಕಲ್ ಅಂಗಡಿಯ ಮಾಲಕರೋರ್ವರು ರೋಗಿಯ ಕಷ್ಟಕಂಡು ಮನಕರಗಿ ಸುಮಾರು ಒಂದು ತಿಂಗಳ ಸಂಪೂರ್ಣ ಔಷಧವನ್ನು ಉಚಿತವಾಗಿ ನೀಡಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೊರೋನಾ ಸೋಂಕಿತ ರೋಗಿಯೋರ್ವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ಬಳಿಕ ಹಣವಿಲ್ಲದೇ ಔಷಧಿಗಾಗಿ ಪರಿತಪಿಸುತ್ತಿದ್ದರು. ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಮನೆಗೆ ತೆರಳುವ ಹಂತದಲ್ಲಿ ಔಷಧಿ ಖರೀದಿಸಲು ಅವರಲ್ಲಿ ಹಣವಿಲ್ಲದೆ ಕಷ್ಟಪಡುತ್ತಿದ್ದರು.
ಈ ಸಂದರ್ಭ ಸುದ್ದಿ ತಿಳಿದ ಪಾಣೆಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ನ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್ ಆರ್ ಎಸ್) ಕಾರ್ಯಕರ್ತರೋರ್ವರು ಮೆಲ್ಕಾರ್ ಜಂಕ್ಷನ್ ನಲ್ಲಿರುವ ಪದ್ಮ ವಿಕಾಸ್ ಮೆಡಿಕಲ್ ಮಾಲಕ ರಾಜೇಂದ್ರ ಜೈನ್ ಅವರಿಗೆ ಮಾಹಿತಿ ನೀಡಿದ್ದಾರೆ. ರೋಗಿಯ ದಯನೀಯ ಪರಿಸ್ಥಿತಿ ಕಂಡು ಮರುಗಿದ ಅವರು ಒಂದು ತಿಂಗಳ ಅವಧಿಗಾಗುವ ಔಷಧಿಯನ್ನು ಉಚಿತವಾಗಿ ಒದಗಿಸಿ ಮಾನವೀಯ ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ದಾರೆ.
ಮೆಡಿಕಲ್ ಅಂಗಡಿಯ ಮಾಲಕರ ಈ ಮಾನವೀಯ ಸೇವೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.












