ಮೀಫ್ ಪ್ರಯತ್ನದ ಫಲ: 12 ಅರ್ಹ ಬಡ ವಿದ್ಯಾರ್ಥಿಗಳಿಗೆ ಬೆಂಗಳೂರು ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಉಚಿತ ಇಂಜಿನಿಯರಿಂಗ್ ಸೀಟ್

0
608

ಸನ್ಮಾರ್ಗ ವಾರ್ತೆ

ಮಂಗಳೂರು : ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆಗಳ ನಿಯೋಗ ಗೌರವಾಧ್ಯಕ್ಷ ಉಮ್ಮರ್ ಟೀಕೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿ ಚಾನ್ಸಲರ್ ದಕ್ಷಿಣ ಕನ್ನಡ ಮೂಲದ ಡಾ. ನಿಸಾರ್ ರನ್ನು ಭೇಟಿಯಾಗಿ ಅರ್ಹ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಸೀಟು ಹಾಗೂ ಹಾಸ್ಟೆಲ್ ಖರ್ಚನ್ನು ಭರಿಸಿ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಡಾ. ನಿಸಾರ್ ಅವರು ಉಚಿತ ಸೀಟ್ ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ದೇಶದ ಪ್ರತಿಷ್ಠಿತ ಯುನಿವರ್ಸಿಟಿ ಮತ್ತು 100% ಉದ್ಯೋಗದ ಭರವಸೆಯನ್ನು ದೇಶ ವಿದೇಶದ 150ಕ್ಕೂ ಮಿಕ್ಕಿದ ಕಂಪನಿಗಳೊಂದಿಗೆ ನೇರ ನೇಮಕಾತಿಯ ಅವಕಾಶ ಹೊಂದಿದ ಸಂಸ್ಥೆ ಪ್ರೆಸಿಡೆನ್ಸಿಯಲ್ಲಿ ಪ್ರಸಕ್ತ ಪುತ್ತೂರು, ಬಂಟ್ವಾಳ, ಉಡುಪಿ ವ್ಯಾಪ್ತಿಯ 12 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ದೊರೆತಿದ್ದು, ಪ್ರೆಸಿಡೆನ್ಸಿ ಯುನಿವರ್ಸಿಟಿ ಈ ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ಉಚಿತವಾಗಿ ಭರಿಸಲಿದೆ.

ಇದರಿಂದ ದೇಶದ ಪ್ರತಿಷ್ಠಿತ ಪ್ರೆಸಿಡೆನ್ಸಿಯಲ್ಲಿ ವಿದ್ಯಾಭ್ಯಾಸ ಕನಸಾಗಿದ್ದ ಬಡ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದ ಡಾ. ನಿಸಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್, ಸಂಯೋಜಕ ಶಾರಿಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.