ಬಂದರ್, ಕುದ್ರೋಳಿ ಪರಿಸರದಲ್ಲಿ ಕಸದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಮನವಿ

0
263

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂದರ್ ಹಾಗೂ ಕುದ್ರೋಳಿ ವಾರ್ಡ್ ಗಳಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರೆ. ಇದರಿಂದ ಆರೋಗ್ಯ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರು ಹಾಗೂ ಆರೋಗ್ಯಾಧಿಕಾರಿಯನ್ನು ಭೇಟಿಯಾದ ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದ ನಿಯೋಗವು ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.

ಹಲವಾರು ಕಾರಣಗಳ ಹಿನ್ನೆಲೆಯಲ್ಲಿ ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ಫ್ಲಾಟ್ ಗಳ ನಿವಾಸಿಗಳು ಸೇರಿದಂತೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಗಬ್ಬುವಾಸನೆ ಬರುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಶೀಘ್ರವಾಗಿ ಸಮಸ್ಯೆಯನ್ನು ಸಂಬಂಧಪಟ್ಟವರಿಗೆ ತಿಳಿಸಿ ಪರಿಹರಿಸುವಂತೆ ಆಗ್ರಹ ವ್ಯಕ್ತಪಡಿಸಲಾಯಿತು.

ನಿಯೋಗದಲ್ಲಿ ಕುದ್ರೋಳಿಯ ಕಾರ್ಪೊರೇಟರ್ ಶಂಶುದ್ದೀನ್ HBT, ಬಂದರ್ ವಾರ್ಡ್ ನ ಕಾರ್ಪೊರೇಟರ್.ಝೀನತ್ ಶಂಸುದ್ದೀನ್, ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಕೆ. ಅಶ್ರಫ್, ಕಾರ್ಯದರ್ಶಿ ಅಬ್ದುಲ್ ಅಝಿಝ್, ಉಪಾಧ್ಯಕ್ಷ ಬಿ ಅಬೂಬಕ್ಕರ್ ಯಾಸಿನ್, ಖಜಾಂಜಿ ಮಕ್ಬೂಲ್ ಅಹ್ಮದ್, ವಹಾಬ್ ಕುದ್ರೋಳಿ ಇಕ್ಬಾಲ್, ಇಸ್ಮಾಯಿಲ್, ಲತೀಫ್ ಕೆ ಕೆ. ಮತ್ತು ಮಕ್ಬೂಲ್ ಅಹ್ಮದ್ ಉಪಸ್ಥಿತರಿದ್ದರು.