ಸನ್ಮಾರ್ಗ ವಾರ್ತೆ
ಗಾಂಧಿನಗರ, ಫೆ. 18: ಗುಜರಾತಿನ ಮಹಿಳಾ ಕಾಲೇಜುಜಿನಲ್ಲಿ ಪ್ರಿನ್ಸಿಪಾಲ್ರ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಋತುಚಕ್ರ ಪರೀಕ್ಷೆ ನಡೆಸಿದ ಘಟನೆಯಲ್ಲಿ ಪ್ರಿನ್ಸಿಪಾಲ್ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಹಾಸ್ಟೆಲ್ ಸೂಪರ್ ವೈಸರ್, ಸ್ಟೂಡೆಂಟ್ ಕಾರ್ಡಿನೇಟರ್, ಫ್ಯೂನ್ ಈ ಮೂವರು ಬಂಧಿತರು. ಇವರನ್ನು ಎರಡು ದಿವಸಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕಳೆದ ಫೆಬ್ರವರಿ ಹದಿನಾಲ್ಕರಂದು ಗುಜರಾತ್ ಭುಜ್ನ ಶ್ರೀ ಸಹಜಾನಂದ್ ಇನ್ಸಿಟಿಟ್ಯೂಟ್ ಹಾಸ್ಟೆಲಿನಲ್ಲಿ 68 ವಿದ್ಯಾರ್ಥಿನಿಯರನ್ನು ಮುಟ್ಟು ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ನೇತೃತ್ವದಲ್ಲಿ ಈ ರೀತಿ ಪರೀಕ್ಷೆ ನಡೆದಿತ್ತು. ಇದಾಗಿ ನಾಲ್ಕು ದಿವಸದ ಬಳಿಕ ವಿದ್ಯಾರ್ಥಿನಿಯರು ದೂರು ನೀಡಿದ್ದು ತದನಂತರ ಘಟನೆ ಬಹಿರಂಗವಾಗಿತ್ತು.
ಸ್ವಾಮಿ ನಾರಾಯಣ್ ಕನ್ಯಾ ಮಂದಿರ ಎಂಬ ಮಂದಿರದ ಸಮೀಪದಲ್ಲಿ ಕಾಲೇಜು ಮತ್ತು ಹಾಸ್ಟೆಲ್ ಇವೆ. ಹಾಸ್ಟೆಲಿನಲ್ಲಿರುವ ಹೆಣ್ಣುಮಕ್ಕಳನ್ನು ಪರೀಕ್ಷೆಗೆ ನಡೆಸಲಾಗಿತ್ತು. ಹಾಸ್ಟೆಲ್ನಲ್ಲಿರುವ ಹೆಣ್ಣುಮಕ್ಕಳು ಈ ಅವಧಿಯಲ್ಲಿ ಇತರರೊಂದಿಗೆ ಬೆರೆಯುತ್ತಾರೆ. ಮಂದಿರ ಸಮೀಪ ಹೋಗುತ್ತಾರೆ. ಅಡಿಗೆ ಮನೆಗೆ ಬರುತ್ತಾರೆ ಎಂದು ಹಾಸ್ಟೆಲ್ ವಾರ್ಡನ್ ನೀಡಿದ ದೂರಿನನ್ವಯ ವಿದ್ಯಾರ್ಥಿನಿಯರ ಮುಟ್ಟು ಪರೀಕ್ಷೆ ಮಾಡಲಾಗಿದೆ.
ಕಾಲೇಜಿನಲ್ಲಿ 1500 ವಿದ್ಯಾರ್ಥಿನಿಯರಿದ್ದಾರೆ. ಹಾಸ್ಟೆಲಿನಲ್ಲಿರುವ 68 ವಿದ್ಯಾರ್ಥಿನಿಯರನ್ನು ವಾರ್ಡನ್ ದೂರಿನ ಆಧಾರದಲ್ಲಿ ಹಾಸ್ಟೆಲ್ನ ಶುಚೀಕರಣ ಕೊಠಡಿಗೆ ಕರೆದುಕೊಂಡು ಹೋದ ಪ್ರಾಂಶುಪಾಲರು, ಬಲವಂತದಿಂದ ಬಟ್ಟೆ ಬಿಚ್ಚಿಸಿ ಋತು ಚಕ್ರ ಪರೀಕ್ಷಿಸಿದ್ದಾರೆ. ತಮ್ಮನ್ನು ಅಪಮಾನಿಸಿದ್ದಾರೆ ಮತ್ತು ಕೆಟ್ಟ ಪದಬಳಸಿ ಮಾತಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ವಿರುದ್ಧ ದೂರಿಕೊಂಡಿದ್ದರು. ಪ್ರಿನ್ಸಿಪಾಲ್ರ ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ಇತರ ಅಧ್ಯಾಪಕರೂ ಭಾಗವಹಿಸಿದ್ದರು ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಕುರಿತು ಕಾಲೇಜಿನ ಡೀನ್ ದರ್ಶನ ದೊಲಾಕಿ ತನಿಖೆ ನಡೆಸುತ್ತಿದ್ದಾರೆ.












