ಕಾಂಗ್ರೆಸನ್ನು ಬುದ್ಧಿಮಾಂದ್ಯರ ಪಕ್ಷ ಎಂದಿದ್ದ ಖುಷ್ಬೂ: ದೂರಿನ ಬಳಿಕ ಕ್ಷಮೆಯಾಚನೆ

0
719

ಸನ್ಮಾರ್ಗ ವಾರ್ತೆ

ದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿ.ಟಿ.‌ರವಿ ಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ, ಖುಷ್ಬೂ ಕಾಂಗ್ರೆಸ್ ಪಕ್ಷವು “ಬುದ್ಧಿಮಾಂದ್ಯತೆ ಇರುವವರ ಪಕ್ಷ” ಎಂದು ಕರೆದಿದ್ದರು. ವ್ಯಾಪಕ ಟೀಕೆಗಳು ಹಾಗೂ ವಿಮರ್ಶೆಗಳ ಬಳಿಕ ಇದೀಗ ಖುಷ್ಬೂ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಮೊದಲು ಕಾಂಗ್ರೆಸ್‌ನಲ್ಲಿ ಗುರುತಿಸಿ, ಬಳಿಕ ಬಿಜೆಪಿಗೆ ಸೇರಿದ ಬಳಿಕ ಮೋದಿಯವರ ನಾಯಕತ್ವದ ಬಗ್ಗೆ ಹೊಗಳಿದ್ದರು. ಅಲ್ಲದೇ, ಕಾಂಗ್ರೆಸ್ “ಬುದ್ಧಿಮಾಂದ್ಯ”ರ ಪಕ್ಷ ಎಂದು ಟೀಕಿಸಿದ್ದರು.

“ಆತುರ, ಆಳವಾದ ಯಾತನೆ ಮತ್ತು ದುಃಖದ ಕ್ಷಣದಲ್ಲಿ ಒಂದೆರಡು ನುಡಿಗಟ್ಟುಗಳನ್ನು ತಪ್ಪಾಗಿ ಬಳಸಿದ್ದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ” ತಮ್ಮ ಕ್ಷಮಾಪಣೆಯಲ್ಲಿ ಖುಷ್ಬೂ ತಿಳಿಸಿದ್ದಾರೆ.

ಅಂಗವೈಕಲ್ಯ ಹಕ್ಕುಗಳ ಹೋರಾಟಗಾರರು ಬಿಜೆಪಿ ನಾಯಕಿಯ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ಆಕೆಯ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಿದ ನಂತರ ಕ್ಷಮೆಯಾಚನೆ ಮಾಡಿದ್ದಾರೆ.

2010 ರಲ್ಲಿ ಡಿಎಂಕೆ ಪಕ್ಷವನ್ನು ಸೇರಿದ್ದ ಖುಷ್ಬೂ, ಡಿಎಂಕೆಯ ಸ್ಟ್ಯಾಲಿನ್ ರೊಂದಿಗೆ ಮನಃಸ್ತಾಪ ಉಂಟಾಗಿ 2014 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಈ ಸಂದರ್ಭದಲ್ಲಿ “ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ತೀರ್ಮಾನ ಕೈಗೊಂಡೆ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.