ಸ್ವಾತಂತ್ರ್ಯೋತ್ಸವದ ವೇಳೆ ಪ್ಲಾಸ್ಟಿಕ್​ ಧ್ವಜ ಬಳಕೆಯಾಗದಂತೆ ನಿಗಾ ವಹಿಸಲು ಸೂಚಿಸಿದ ಕೇಂದ್ರ ಸರಕಾರ

0
557

ಸನ್ಮಾರ್ಗ ವಾರ್ತೆ

ನವದೆಹಲಿ: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಬಳಕೆಯಾಗದಂತೆ ನಿಗಾ ವಹಿಸಿ ಎಂದು ಕೇಂದ್ರ ಸರಕಾರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದ್ದು, ಕಟ್ಟುನಿಟ್ಟಾಗಿ ಅದನ್ನು ಪಾಲಿಸಲು ತಿಳಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ಲಾಸ್ಟಿಕ್ ಧ್ವಜಗಳು ಎಲ್ಲೆಂದರಲ್ಲಿ ಬಿದ್ದು ಕಸದ ತೊಟ್ಟಿ ಸೇರುವಂತಹ ಘಟನೆಗಳು ನಡೆಯುವುದರಿಂದ ಅದು ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ತಿರಂಗದ ಗೌರವವನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯವಾಗಿದ್ದು, ಸ್ವಚ್ಛತೆಯ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ ಮಾಡಬೇಕಿದೆ ಎಂದು ಕೇಂದ್ರ ತಿಳಿಸಿದೆ.

ರಾಷ್ಟ್ರಧ್ವಜಕ್ಕೆ ಅತ್ಯುನ್ನತ ಸ್ಥಾನವಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಆ ಗೌರವವನ್ನು ಸಲ್ಲಿಸಬೇಕು. ಆದರೆ, ಆ ವಿಚಾರದಲ್ಲಿ ತಿಳುವಳಿಕೆಯ ಕೊರತೆ ಇನ್ನೂ ಇದ್ದು, ಪ್ಲಾಸ್ಟಿಕ್​ ಧ್ವಜ ಬಳಕೆ ಮಾಡಿ ಅದನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಅಪಮಾನ ಮಾಡಲಾಗುತ್ತಿದೆ. ಸಂವಿಧಾನಬದ್ಧವಾಗಿ ಹಾಗೂ ಕಾನೂನಿನ ಪ್ರಕಾರ ರಾಷ್ಟ್ರಧ್ವಜಕ್ಕೆ ಹೇಗೆ ಗೌರವ ನೀಡಬೇಕು ಎನ್ನುವ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಪ್ಲಾಸ್ಟಿಕ್ ಧ್ವಜಗಳು ಮಣ್ಣಿನಲ್ಲಿ ಸೇರುವುದೂ ಇಲ್ಲವಾದ್ದರಿಂದ ಅವು ಕರಗದ ತ್ಯಾಜ್ಯವಾಗಿ ಪರಿವರ್ತನೆ ಹೊಂದಿ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತವೆ ಎಂದು ಹೇಳಿದೆ. ಭಾರತದ ಧ್ವಜ ಸಂಹಿತೆ, 2002ರ ಪ್ರಕಾರ ಪೇಪರ್​ನಿಂದ ಮಾಡಲ್ಪಟ್ಟ ತ್ರಿವರ್ಣ ಧ್ವಜಕ್ಕೆ ಒತ್ತು ಕೊಟ್ಟು ಅವು ಎಲ್ಲೆಂದರಲ್ಲಿ ಎಸೆಯದಂತೆ, ನೆಲಕ್ಕೆ ಬೀಳದಂತೆ ನಿಗಾ ವಹಿಸಿ ಎಂದು ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.