60,000 ಉದ್ಯೋಗಿಗಳ ವಜಾಗೆ ಮೈಕ್ರೋಸಾಫ್ಟ್ ಸಿದ್ಧತೆ

0
201

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕಂಪನಿಯು ಭಾರತ, ಅಮೆರಿಕ ಮತ್ತು ಯುಕೆ ದೇಶಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಸ್ವಯಂಪ್ರೇರಿತ ನಿವೃತ್ತಿ ಯೋಜನೆ (VRS) ಮೂಲಕ ಉದ್ಯೋಗಿಗಳನ್ನು ಕಳುಹಿಸಲು ಕಂಪನಿ ಯೋಜಿಸುತ್ತಿದೆ. ಅವರಿಗೆ ಆರ್ಥಿಕ ನೆರವು ಮತ್ತು ವೃತ್ತಿ ಯೋಜನೆ ಸಹಾಯ ಸಿಗಲಿದೆ.

ವಿಆರ್‌ಎಸ್‌ಗೆ ಅರ್ಹರಾದವರ ಪಟ್ಟಿಯನ್ನು ಮೈಕ್ರೋಸಾಫ್ಟ್ ಪ್ರಕಟಿಸಲಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಭಾರತದಲ್ಲಿ 23,000 ಉದ್ಯೋಗಿಗಳನ್ನು ಹೊಂದಿದೆ. ಅವರಲ್ಲಿ ಎಷ್ಟು ಮಂದಿ ವಿಆರ್‌ಎಸ್ ಪಟ್ಟಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಜಾಗತಿಕವಾಗಿ ಕನಿಷ್ಠ 60,000 ಉದ್ಯೋಗಿಗಳು ಈ ಹೊಸ ನಡೆಯಿಂದ ಪ್ರಭಾವಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಪ್ರತಿ ವರ್ಷದ ಸೇವೆಗೆ ಒಂದು ತಿಂಗಳ ವೇತನಕ್ಕೆ ಸಮನಾದ ಪರಿಹಾರದೊಂದಿಗೆ ಆರೋಗ್ಯ ವಿಮೆ ಮತ್ತು ಉದ್ಯೋಗ ಬದಲಾವಣೆ ಸಹಾಯವನ್ನು (Job transition assistance) ಒದಗಿಸಲಿದೆ.

ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ (Executive Vice President) ಆಮಿ ಕೋಲ್‌ಮನ್ ಅವರು ಬ್ಲಾಗ್ ಮೂಲಕ ಈ ಹೊಸ ಕೊಡುಗೆಯನ್ನು ಘೋಷಿಸಿದ್ದಾರೆ. ಈ ಮಧ್ಯೆ, ಭಾರತದಲ್ಲಿ ಮೈಕ್ರೋಸಾಫ್ಟ್‌ನ ಹೂಡಿಕೆ ಮುಂದುವರಿಯಲಿದೆ ಎಂದೂ ಕಂಪನಿ ಘೋಷಿಸಿದೆ. ಕಂಪನಿಯು 20.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಈ ಹೂಡಿಕೆಯು 2025 ರಿಂದ 2029 ರ ಅವಧಿಗೆ ಇರಲಿದೆ. ಹೂಡಿಕೆಯು ಕ್ಲೌಡ್ ಮತ್ತು ಎಐ (AI) ಮೂಲಸೌಕರ್ಯದಲ್ಲಿದೆ. ಭಾರತದಲ್ಲಿ 30 ಮಿಲಿಯನ್ (3 ಕೋಟಿ) ಜನರಿಗೆ ಎಐ ಕೌಶಲ್ಯಗಳನ್ನು ಒದಗಿಸುವುದು ತನ್ನ ಗುರಿಯಾಗಿದೆ ಎಂದೂ ಮೈಕ್ರೋಸಾಫ್ಟ್ ಘೋಷಿಸಿದೆ.