ಮೊದಲ ಹಿಂದೂ ಕೋರ್ಟಿಗೆ ಚಾಲನೆ- ನ್ಯಾಯಾಧೀಶೆಯಾಗಿ ಪೂಜಾ ಶಕುನ್ ಪಾಂಡೆ, ಮನುಸ್ಮೃತಿ ಸಂವಿಧಾನ

0
2329

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 20: ಮನುಸ್ಮೃತಿ ಸಂವಿಧಾನದೊಂದಿಗೆ ದೇಶದ ಮೊದಲ ಹಿಂದೂ ಕೋರ್ಟಿಗೆ ಅಖಿಲ ಭಾರತ ಹಿಂದೂ ಮಹಾಸಭಾ ಚಾಲನೆ ನೀಡಿದೆ. ಮಹಾತ್ಮಾಗಾಂಧಿಯ ಪ್ರತಿಕ್ರಿತಿಗೆ ಗುಂಡು ಹಾರಿಸುವಂತೆ ತೋರಿಸಿ ಗಾಂಧಿ ಹತ್ಯೆಯನ್ನು ಮರುಸೃಷ್ಟಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಪ್ರಥಮ ಹಿಂದೂ ಕೋರ್ಟಿನ ನ್ಯಾಯಾಧೀಶೆಯಾಗಲಿದ್ದಾರೆ. ಉತ್ತರ ಪ್ರದೇಶದ ಮೀರತ್‍ನಲ್ಲಿ ಸ್ವಾತಂತ್ರ್ಯ ದಿನದಂದು ಮೊದಲ ಹಿಂದೂ ಕೋರ್ಟು ಆರಂಭವಾಗಿದೆ.

ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಅಲಾಹಾಬಾದ್ ಹೈಕೋರ್ಟು ಉತ್ತರಪ್ರದೇಶ ಸರಕಾರ ಮತ್ತು ಮೀರತ್ ಜಿಲ್ಲಾಡಳಿತಕ್ಕೆ ನೋಟಿಸು ಕಳುಹಿಸಿತ್ತು. ಪ್ರಕರಣ ಸೆಪ್ಟಂಬರ್ ಹನ್ನೊಂದರಂದು ವಿಚಾರಣೆಗೆ ಬರಲಿದೆ. ಇಸ್ಲಾಮಿಕ್ ಕಾನೂನು ಪ್ರಕಾರ ಪರಿಹರಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿ ಆರಂಭಿಸಿದ ದಾರುಲ್ ಖದಾವನ್ನು ಮುಚ್ಚಲು ಕೇಂದ್ರ ಮತ್ತು ಉತ್ತರಪ್ರದೇಶ ಬಿಜೆಪಿ ಸರಕಾರ ಸಿದ್ಧವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಮನುಸ್ಮೃತಿ ಆಧಾರಿತ ಹಿಂದೂ ಕೋರ್ಟು ಆರಂಭಿಸಲು ಹಿಂದೂ ಮಹಾಸಭಾ ತೀರ್ಮಾನಿಸಿದೆ ಎಂದು ಪೂಜಾ ಹೇಳಿದ್ದಾರೆ.

ಹಿಂದೂ ಮಹಿಳೆಯರ ವಿರುದ್ಧ ಪೀಡನೆಗಳು, ಹಿಂದೂ ಮದುವೆ, ಆಸ್ತಿವಿವಾದ, ಹಣದ ವ್ಯಾಜ್ಯ ವಿಷಯಗಳನ್ನು ಹಿಂದೂ ಕೋರ್ಟು ಪರಿಗಣಿಸಲಿದೆ ಎಂದು ಪೂಜಾ ಪಾಂಡೆ ಹೇಳಿದರು. ತಮ್ಮ ಅಗತ್ಯಕ್ಕೆ ಜೈಲುಗಳಿವೆ. ಗರಿಷ್ಠ ಶಿಕ್ಷೆ ಮರಣದಂಡನೆ ಆಗಿದೆ ಎಂದು ಪೂಜಾ ಹೇಳಿದರು. ಗಾಂಧಿ ಜಯಂತಿ ದಿನದಲ್ಲಿ ಹಿಂದೂ ಕೋರ್ಟಿನ ನಿಯಮಾವಳಿಯನ್ನು ಹೊರಡಿಸಲಾಗುವುದು. ಐವರು ಜಡ್ಜ್‌ಗಳನ್ನು ನವೆಂಬರ್ ಐದರಂದು ನೇಮಿಸಲಾಗುವುದು ಎಂದು ಪೂಜಾ ಶಕುನ್ ಪಾಂಡೆ ತಿಳಿಸಿದರು.