ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.26: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅತೃಪ್ತಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ ಹಾಗೂ ತದನಂತರ ವಿಧಾನಸಭಾ ಸ್ಪೀಕರ್ ಅನರ್ಹ ಗೊಳಿಸಿದ ಶಾಸಕರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಘೋಷಿಸಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟು ತಡೆಯಾಜ್ಞೆ ಹೊರಡಿಸಿದೆ.
ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬಂದಿತ್ತು. ಉಪಚುನಾವಣೆಯನ್ನು ಮುಂದೂಡಿ ಪ್ರಕರಣದ ಅರ್ಜಿಯಲ್ಲಿ ಸವಿವರ ವಿಚಾರಣೆಗೆ ಸುಪ್ರೀಂಕೋರ್ಟು ನಿರ್ಧರಿಸಿದೆ.
ಅಕ್ಟೋಬರ್ 22ಕ್ಕೆ ಪ್ರಕರಣದಲ್ಲಿ ವಿಚಾರಣೆ ನಡೆಯಲಿದ್ದು ಉಪಚುನಾವಣೆಯನ್ನು ನಡೆಸುವಂತಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸಲಾಗದ ಪರಿಸ್ಥಿತಿಯಿಂದ ಅನರ್ಹ ಶಾಸಕರು ನಿಟ್ಟುಸಿರಿಡುವಂತೆ ಸುಪ್ರೀಂಕೋರ್ಟು ತೀರ್ಪು ಬಂದಿದ್ದು ಸದ್ಯಕ್ಕೆ ತಮ್ಮ ಮೇಲೆ ತೂಗಾಡುತ್ತಿದ್ದ ಕತ್ತಿಯಿಂದ ಪಾರಾಗಿದ್ದಾರೆ. ಅನರ್ಹತೆಯ ಆದೇಶ ಪ್ರಶ್ನಿಸಿ ಹದಿನೇಳು ಶಾಸಕರು ಮೇಲ್ಮನವಿ ಸಲ್ಲಿಸಿದ್ದರು.












