ಸನ್ಮಾರ್ಗ ವಾರ್ತೆ
ಪಾಟ್ನ: ಪ.ಬಂಗಾಳದಲ್ಲಿ ಜನರ ಗುಂಪು ಹಲ್ಲೆಯಿಂದ ಕೊಲೆಯಾದ ಬಿಹಾರದ ಪೊಲೀಸ್ ಅಧಿಕಾರಿಯ ಮೃತದೇಹವನ್ನು ನೋಡಿ ಅವರ ತಾಯಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಿಶನ್ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಅಶ್ವಿನಿ ಕುಮಾರ್(52) ಜನರ ಗುಂಪಿನ ಹಲ್ಲೆಯಿಂದ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಶನಿವಾರ ಪಶ್ಚಿಮಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಗೋಲ್ಬೋಕರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅವರ ಹತ್ಯೆ ನಡೆದಿದೆ.
ದ್ವಿಚಕ್ರ ವಾಹನ ಕದಿಯುವುದಕ್ಕೆ ಸಂಬಂಧಿಸಿ ಶೋಧಕಾರ್ಯಕ್ಕಾಗಿ ಅವರು ಪಂದೇಪಾಡ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಜನರ ಗುಂಪು ದಾಳಿ ಮಾಡಿದೆ. ನಂತರ ಮೃತದೇಹವನ್ನು ಜಾನಕಿ ನಗರಕ್ಕೆ ತರಲಾಗಿತ್ತು.
ತನ್ನ ಮಗನ ಮೃತದೇಹವನ್ನು ನೋಡಿದ 70 ವರ್ಷದ ತಾಯಿ ಊರ್ಮಿಳಾ ದೇವಿ ಕುಸಿದು ಬಿದ್ದು ಮೃತಪಟ್ಟರು. ಅಮ್ಮ ಮತ್ತು ಮಗನ ಅಂತ್ಯ ವಿಧಿ ರವಿವಾರ ಊರಲ್ಲಿಯೇ ನಡೆಯಿತು. ಕುಮಾರ್ರ ಜೊತೆ ಏಳು ಪೊಲೀಸರು ತನಿಖೆಗೆ ಹೋಗಿದ್ದರು. ಅವರನ್ನೆಲ್ಲ ಅಮಾನತುಗೊಳಿಸಲಾಗಿದೆ. ಜನರ ಗುಂಪು ದಾಳಿಗೆ ಬಂದ ಸಮಯದಲ್ಲಿ ಸಹೋದ್ಯೋಗಿಯನ್ನು ರಕ್ಷಿಸಲು ಮುಂದೆ ಬರದೆ ಇವರು ಓಡಿಹೋಗಿದ್ದರು. ಶೋಧ ಸಮಯದಲ್ಲಿ ಪ.ಬಂಗಾಳದ ಪೊಲೀಸರಿಂದ ನೆರವು ಸಿಕ್ಕಿರಲಿಲ್ಲ ಎಂದು ಕಿಸನ್ಗಂಜ್ ಎಸ್ಪಿ ಕುಮಾರ್ ಆಶೀಷ್ ಹೇಳಿದರು.
ಚುನಾವಣಾ ಸಂಬಂಧ ನಿಬಿಢತೆಯಿಂದಾಗಿ ಬಿಹಾರ ಪೊಲೀಸರು ಮಾತ್ರ ತನಿಖೆ ನಡೆಸಬೇಕಾಗಿತ್ತು. ಹಲ್ಲೆಗೈದವರಲ್ಲಿ ಐದು ಮಂದಿಯನ್ನು ಪ.ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಮೂವರನ್ನು ಶನಿವಾರ ಮತ್ತು ಇಬ್ಬರನ್ನು ಆದಿತ್ಯವಾರ ಪೊಲೀಸರು ಬಂಧಿಸಿದರು.












