ಯುಪಿ: ಕೊರೋನಾ ಸೋಂಕು ಹರಡಲು ಬಂದಿದ್ದಾನೆ ಎಂದು ಆರೋಪಿಸಿ ಮುಸ್ಲಿಮ್ ಯುವಕನ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ

0
8445

ಸನ್ಮಾರ್ಗ ವಾರ್ತೆ

ಅಲಿಗಡ,ಮೇ.10: ಔಷಧಿ ಖರೀದಿಸಲು ಮೆಡಿಕಲ್‌ಗೆ ಬಂದಿದ್ದ ಅಬ್ದುಲ್ ಸಮದ್(25)ಎಂಬ ಮುಸ್ಲಿಂ ಯುವಕನ ಮೇಲೆ “ಕೊರೋನಾ ವೈರಸ್ ಹರಡಲು ಬಂದಿದ್ದಾನೆ, ಅವನನ್ನು ಹೊಡೆಯಿರಿ” ಎಂದು ಆರೋಪಿಸಿ ಹಿಂದೂ ಗುಂಪೊಂದು ಹಲ್ಲೆ ನಡೆಸಿದ ಘಟನೆಯು ಅಲಿಗಡದಲ್ಲಿ ನಡೆದಿದೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, “ಕೊರೋನಾ ವೈರಸ್ ಹರಡಲು ಬಂದಿದ್ದಾನೆ” ಎಂದು ಆರೋಪಿಸಿದ ಹಿಂದೂ ಗುಂಪೊಂದು ಅಬ್ದುಲ್ ಸಮದ್‌ನನ್ನು ಗಂಭೀರ ಗಾಯಗಳಾಗುವಂತೆ ಥಳಿಸಿದ ಪರಿಣಾಮವಾಗಿ ಪ್ರಜ್ಞಾಹೀನನಾಗಿ ಅಂಗಡಿಯ ಎದುರು ಬಿದ್ದಿದ್ದನು.

ಮುಸ್ಲಿಮರನ್ನು ಜರಿದ ಗುಂಪು ಅವಾಚ್ಯ ಪದಗಳೊಂದಿಗೆ ಸಮದ್‌ನನ್ನು ನಿಂದಿಸಿದ್ದು, ಹಾಕಿ ಕೋಲುಗಳಿಂದ ಹಿಗ್ಗಾಮುಗ್ಗಾ ಪ್ರಹಾರ ನಡೆಸಿದೆ.

“ಅವನನ್ನು ಹೊಡೆಯಿರಿ. ಅವನು ಮುಸ್ಲಿಂ. ಅವನು ಕೊರೋನಾ ವೈರಸ್ ಹರಡಲು ಬಂದಿದ್ದಾನೆ ” ಎಂದು ಹೇಳುತ್ತಾ ಅವರು ಸಮದ್‌ನನ್ನು ಬರ್ಬರವಾಗಿ ಥಳಿಸಿದ್ದಾರೆ.

ಜನರು ಸಮದ್‌ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರಿಂದಾಗಿ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಮದ್‌ನನ್ನು ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

“ಶುಕ್ರವಾರ ಉಪವಾಸ ತೊರೆದ ನಂತರ ರಾತ್ರಿ ವೇಳೆ ನನ್ನ ಮಗ ಅನಾರೋಗ್ಯದಿಂದ ಬಳಲುತ್ತಿದ್ದ. ಔಷಧಿ ಖರೀದಿಸಲು ನೆರೆಹೊರೆಯ ಔಷಧಿ ಅಂಗಡಿಗೆ ಹೋಗಿದ್ದನು ”ಎಂದು ಸಮದ್ ಅವರ ತಂದೆ ಲೈಕುರ್ ರೆಹಮಾನ್ ಮಾಧ್ಯಮಗಳಿಗೆ ತಿಳಿಸಿದರು.

“ನಾವು ಅವನನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯದಿದ್ದರೆ, ಗಾಯಗಳು ಮಾರಣಾಂತಿಕವಾಗಿರಬಹುದಿತ್ತು” ಎಂದು ಅವರು ಹೇಳಿದರು.

ಸಮದ್ ಈಗ ಅಪಾಯದಿಂದ ಹೊರಗುಳಿದಿದ್ದು, ಆತನನ್ನು ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಡ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬನ್ನಾದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಶೀಘ್ರ ಕಾನೂನು ಕ್ರಮ ಕೈಗೊಳ್ಳವುದಾಗಿ ಪೊಲೀಸರು ತಿಳಿಸಿದ್ದಾರೆ.