ಕೋಟ್ಯಾಂತರ ಮೌಲ್ಯದ ಮರಗಳನ್ನು ಕಡಿದು ಸಾಗಿಸಿದ ಆರೋಪ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಅರಣ್ಯಾಧಿಕಾರಿಗಳ ವಶಕ್ಕೆ

0
255

ಸನ್ಮಾರ್ಗ ವಾರ್ತೆ

ಕೋಟ್ಯಂತರ ರೂಪಾಯಿ ಮೌಲ್ಯದ ಮರ ಕಡಿದು, ಸಾಗಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ವಿಕ್ರಮ್ ಸಿಂಹ ಅವರನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ‘ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ’ ಎಂದಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಜಯಮ್ಮ ಎಂಬವರಿಗೆ ಸೇರಿದ ಸರ್ಕಾರಿ ಗೋಮಾಳ ಜಮೀನನ್ನು ವಿಕ್ರಮ್ ಸಿಂಹ ಗುತ್ತಿಗೆಗೆ ಪಡೆದುಕೊಂಡಿದ್ದರು. ಜಮೀನಿನ ಪಕ್ಕದಲ್ಲಿದ್ದ ಸರ್ಕಾರಿ ಭುಮಿಯಲ್ಲಿನ ಬೆಲೆ ಬಾಳುವ ಸುಮಾರು 126 ಮರ ಕಡಿದು ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೇಲೂರು ತಹಶೀಲ್ದಾರ್ ಮಮತಾ ಅವರು ಸ್ಥಳಕ್ಕೆ ಭೇಟಿ ನೀಡಿ ಮರ ಕಡಿಯುವುದನ್ನು ತಡೆದಿದ್ದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ದೌಡಾಯಿಸಿದ ಅರಣ್ಯಾಧಿಕಾರಿಗಳು ಎರಡು ಹಿಟಾಚಿ, ಎರಡು ಪವರ್ ಚೈಣ್, ಒಂದು ಟ್ರೈಲರ್ ಯಂತ್ರಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣದಲ್ಲಿ ವಿಕ್ರಮ್ ಸಿಂಹ ಅವರೇ ಮುಖ್ಯ ಆರೋಪಿಯೆಂದು ಪರಿಗಣಿಸಿದ್ದ ಅಧಿಕಾರಿಗಳು ಮತ್ತು ಪೊಲೀಸರು ಡಿಸೆಂಬರ್ 25ರಂದು ವಿಕ್ರಂ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ, ವಿಕ್ರಂ ಪರಾರಿಯಾಗಿದ್ದರು. ಇದೀಗ, ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

“ಅರಣ್ಯ ಸಂಪತ್ತನ್ನು ನಾಶಪಡಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ. ಸರ್ಕಾರಿ ಜಾಗದಲ್ಲೇ ಆಗಲಿ, ಪಟ್ಟಾ ಜಮೀನಿನಲ್ಲೇ ಆಗಲಿ ಅನುಮತಿ ಪಡೆಯದೇ ಅಕ್ರಮವಾಗಿ ಮರ ಕಡಿಯುವುದು ಅಪರಾಧ” ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.