ಅಲ್ಲಾಹನೇ, ವಿರೋಧಿಗಳು ನಗುವಂತೆ ಪರೀಕ್ಷಿಸಬೇಡ

0
305

ಸನ್ಮಾರ್ಗ ವಾರ್ತೆ

ಸಂಗ್ರಹ: ಎನ್.ಎಂ. ಪಡೀಲ್

ಅಬೂಹುರೈರ(ರ)ರಿಂದ ವರದಿಯಾಗಿದೆ. ಪ್ರವಾದಿಯವರು(ಸ) ಹೇಳಿದರು: “ಕಠಿಣ ಪರೀಕ್ಷೆಗಳಿಂದಲೂ ತೀವ್ರ ಸಂಕಷ್ಟದಿಂದಲೂ, ವಿನಾಶಕಾರಕ ತೀರ್ಪುಗಳಿಂದಲೂ, ವಿರೋಧಿಗಳ ನಗುವಿನಿಂದಲೂ ನೀವು ಅಲ್ಲಾಹನೊಂದಿಗೆ ಅಭಯ ಯಾಚಿಸಿರಿ.” (ಬುಖಾರಿ ಮುಸ್ಲಿಮ್)

ಬಹಳ ಮುಖ್ಯವಾದ ನಾಲ್ಕು ಆವಶ್ಯಕತೆಗಳು ಈ ಪ್ರಾರ್ಥನೆಯಲ್ಲಿದೆ. ಕಠಿಣವಾದ ಪರೀಕ್ಷೆಗಳಿಂದ ನಮ್ಮನ್ನು ರಕ್ಷಿಸಬೇಕು ಎಂಬುದು ಮೊದಲನೇ ಬೇಡಿಕೆ. ಸಹಿಸಲಸಾಧ್ಯವಾದ ಸಂಕಷ್ಟಗಳಿಂದಲೂ, ತೊಂದರೆಗಳಿಂದಲೂ ನಮ್ಮನ್ನು ಕಾಪಾಡು ಎಂದು ಇಲ್ಲಿ ಬೇಡಲಾಗುತ್ತಿದೆ. ಮರಣವನ್ನೇ ಬಯಸುವಂತಹ ವಿಪತ್ತುಗಳು, ಚಿಕಿತ್ಸೆ ಮಾಡಿ ಮಾಡಿ ಜಿಗುಪ್ಸೆ ಮೂಡಿಸಿದ ಮಾರಕ ಕಾಯಿಲೆಗಳು, ತೀರಿಸಲಾಗದ ಸಾಲ ಬಾಧ್ಯತೆಗಳು, ಮನಸ್ಸಿನಲ್ಲಿ ದುಃಖ, ನೋವು ತುಂಬಿರುವ ವಾರ್ತೆಗಳು. ಕುಟುಂಬ ಸಮಸ್ಯೆಗಳೆಲ್ಲವೂ ಇದರಲ್ಲಿ ಸೇರುತ್ತದೆ. ಪವಿತ್ರ ಕುರ್‌ಆನ್‌ನ ಅಧ್ಯಾಯ 2, ವಚನ 286ರಲ್ಲಿ ಇಂಥದ್ದೊಂದು ಪ್ರಾರ್ಥನೆಯಿದೆ: “ನಮ್ಮ ಪ್ರಭೂ, ನಮ್ಮಿಂದ ಹೊರಲಾಗದ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ.”

ಎರಡನೇಯದಾಗಿ ತೀವ್ರ ಸಂಕಷ್ಟದಿಂದ ರಕ್ಷಿಸಬೇಕೆಂದು ಪ್ರಾರ್ಥಿಸಲಾಗಿದೆ. ದುರಂತ, ದೌರ್ಭಾಗ್ಯಗಳಿಂದ ರಕ್ಷಿಸಬೇಕು ಎಂದರ್ಥ. ಐಹಿಕ ಮತ್ತು ಪರಲೋಕದ ಎಲ್ಲಾ ರೀತಿಯ ದೌರ್ಭಾಗ್ಯಗಳಿಂದಲೂ, ಕಷ್ಟಗಳಿಂದಲೂ ರಕ್ಷಿಸಬೇಕೆಂದು ಅಲ್ಲಾಹನೊಡನೆ ಬೇಡಬೇಕು.
ಇಬ್ನು ಖಯ್ಯಿಂ(ರ) ಹೇಳುತ್ತಾರೆ: “ಪ್ರಾರ್ಥನೆಯು ಅತ್ಯಂತ ಉಪಕಾರಪ್ರದವಾದ ಔಷಧಿಯಾಗಿದೆ. ಅದು ವಿಪತ್ತುಗಳ ಶತ್ರುವಾಗಿದೆ. ಅದು ವಿನಾಶಗಳನ್ನು ಎದುರಿಸಿ ಅದಕ್ಕೆ ಪರಿಹಾರವನ್ನು ನೀಡುತ್ತದೆ. ಸಂಕಷ್ಟಗಳು ಎದುರಾದರೆ ಅದನ್ನು ತಡೆಯುತ್ತದೆ ಅಥವಾ ಸುಲಭಗೊಳಿಸುತ್ತದೆ.

ಮೂರನೇಯದಾಗಿ ವಿನಾಶಕಾರಿಯಾದ ದುರ್ವಿಧಿಗಳಿಂದ ಮುಕ್ತಿ ನೀಡಬೇಕು ಎಂದಾಗಿದೆ. ವಿನಾಶಕಾರಕವಾದ ವಿಧಿಗಳಿಂದ ರಕ್ಷಣೆ ಕೇಳುವುದು ಅಲ್ಲಾಹನ ಕದ್ರ್(ವಿಧಿ)ಗಳಲ್ಲಿ ತೃಪ್ತಿಪಡಬೇಕೆಂಬ ಶರೀಅತ್‌ನ ನಿಯಮಗಳಿಗೆ ವಿರುದ್ಧವಾಗುವುದಿಲ್ಲ. ಏಕೆಂದರೆ ರಕ್ಷಣೆ ಪಡೆಯುವುದು ಕೂಡಾ ವಿಶ್ವಾಸದ ಭಾಗವೇ ಆಗಿದೆ. ಪ್ರಾರ್ಥನೆಯು ಶರಈ ನಿಯಮವಾಗಿದೆ. ಅಲ್ಲಾಹನ ಇಹಲೋಕದ ವಿಧಿಗಳಲ್ಲಿ ತೃಪ್ತಿಪಡುವುದರೊಂದಿಗೆ, ವಿನಾಶಕರವಾದ ವಿಧಿಗಳಿಂದ ಅಭಯ ಯಾಚಿಸಬೇಕೆಂದು ಶರೀಅತ್ ಆದೇಶಿಸುತ್ತದೆ. ಆದರೆ ಅನಿಷ್ಟಗಳು ಸಂಭವಿಸುವುದಕ್ಕಿಂತ ಮೊದಲೇ ಪ್ರಾರ್ಥಿಸಬೇಕು. ಘಟಿಸಿದ ಬಳಿಕ ಅತೃಪ್ತಿ ಪ್ರಕಟಿಸುವುದೋ ಅಥವಾ ಗಾಬರಿಗೊಳ್ಳುವುದೋ ಮಾಡದೆ ಸಹನೆಯನ್ನು ಅವಲಂಬಿಸಬೇಕು.

ನಾಲ್ಕನೇಯದಾಗಿ ಶತ್ರುಗಳ ಸಂತೋಷದಿಂದ ಅಭಯ ಯಾಚಿಸಲಾಗುತ್ತಿದೆ. ಓರ್ವರಿಗೆ ಏನಾದರೂ ಕಷ್ಟಗಳು ಸಂಭವಿಸುವಾಗ ಅವರ ವಿರೋಧಿಗಳು ಸಂತೋಷ ಪಡುತ್ತಾರೆ. ಮತ್ತು ಅನುಗ್ರಹಗಳುಂಟಾಗುವಾಗ ದುಃಖಿಸುತ್ತಾರೆ. ಹೀಗೆ ವಿರೋಧಿಗಳನ್ನು ಮತ್ತು ಶತ್ರುಗಳನ್ನು ಸಂತೋಷಗೊಳಿಸುವಂತಹ ಪರೀಕ್ಷೆಗಳನ್ನು ನೀಡಬಾರದೆಂಬುದು ಈ ಪ್ರಾರ್ಥನೆಯ ಪಾಠ.

ಪ್ರವಾದಿ ಹಾರೂನ್(ಅ), ಮೂಸಾ(ಅ)ರೊಂದಿಗೆ ನಡೆಸಿದ ವಿನಂತಿಯನ್ನು ಪವಿತ್ರ ಕುರ್‌ಆನ್ ಉದ್ಧರಿಸುತ್ತದೆ. ವಿರೋಧಿಗಳು ನನ್ನನ್ನು ನೋಡಿ ನಗುವಂತಹ ಅವಕಾಶವನ್ನು ನೀಡಬೇಡ. (7: 150) ಪ್ರವಾ ದಿಯವರು(ಸ) ಹೀಗೆ ಪ್ರಾರ್ಥಿಸುತ್ತಿದ್ದರು: “ಅಲ್ಲಾಹನೇ, ಶತ್ರುಗಳು ಮತ್ತು ಅಸೂಯೆಗಾರರು ಸಂತೋಷ ಪಡುವ ರೀತಿಯಲ್ಲಿ ನೀನು ನನ್ನನ್ನು ಪರೀಕ್ಷಿಸಬೇಡ.” (ಅಲ್ ಹಾಕಿಮ್)

ಅತ್ಯಂತ ಹೆಚ್ಚು ಪರೀಕ್ಷೆಗಳಿಗೆ ಗುರಿಯಾದ ಅಯ್ಯೂಬ್(ಅ)ರೊಂದಿಗೆ, ಅತ್ಯಂತ ಹೆಚ್ಚು ಪ್ರಯಾಸಕರವಾದ ಅನುಭವವೇನೆಂದು ಕೇಳಿದಾಗ ಅವರು ಹೇಳಿದರು, “ನನ್ನ ಮೇಲೆ ವಿಪತ್ತು ಉಂಟಾದಾಗ ನನ್ನ ಶತ್ರುಗಳಿಗೆ ಉಂಟಾದ ಸಂತೋಷ.” (ಉಯೂನುಲ್ ಅಖ್‌ಬಾರ್) ತನ್ನ ಸಹೋದರನನ್ನು ಬಾಧಿಸುವ ಸಂಕಷ್ಟಗಳಿಗಾಗಿ ಸಂತೋಷಪಡಬಾರದೆಂಬ ಸಂದೇಶವು ಈ ಪ್ರಾರ್ಥನೆಯಲ್ಲಿದೆ.

ಪ್ರವಾದಿಯವರು(ಸ) ಹೇಳಿದರು: “ನಿನ್ನ ಸಹೋದರನಿಗೆ ಉಂಟಾದ ವಿಪತ್ತಿಗಾಗಿ ಸಂತೋಷ ಪಡಬಾರದು. ಆಗ ಅಲ್ಲಾಹನು ಅವನನ್ನು ಅನುಗ್ರಹಿಸುವನು ಮತ್ತು ನಿನ್ನನ್ನು ಪರೀಕ್ಷಿಸುವನು.” (ತಿರ್ಮಿದಿ)

ಒರ್ವ ಕವಿ ಹಾಡುತ್ತಾರೆ:
ನಮ್ಮ ಕಷ್ಟಗಳನ್ನು ನೋಡಿ ಸಂತಸಪಡುವವರೊಂದಿಗೆ ನೀನು ಹೇಳು: ಆನಂದಿಸುತ್ತಿರುವ ನೀವೂ ನಾವನುಭವಿಸುವುದನ್ನು ಎದುರಿಸಬೇಕಾಗುವುದು.
ಈ ಹದೀಸ್‌ನ ಪ್ರಾರ್ಥನೆಯ ರೂಪ ಹೀಗಿದೆ:
ಕಠಿಣ ಪರೀಕ್ಷೆಗಳಿಂದಲೂ, ತೀವ್ರ ಸಂಕಷ್ಟಗಳಿಂದಲೂ, ವಿನಾಶಕರವಾದ ವಿಧಿಗಳಿಂದಲೂ ವಿರೋಧಿಗಳ ನಗುವಿನಿಂದಲೂ ಅಲ್ಲಾಹನೇ ನಿನ್ನೊಂದಿಗೆ ನಾನು ಅಭಯ ಯಾಚಿಸುತ್ತೇನೆ.