ವ್ಯಾಲೆಂಟೈನ್ಸ್ ಉಡುಗೊರೆ ನೀಡುವುದಾಗಿ ಮೋಸ: 3.68ಲಕ್ಷ ರೂ‌‌. ಕಳೆದುಕೊಂಡ 51 ವರ್ಷದ ಮಹಿಳೆ

0
411

ಸನ್ಮಾರ್ಗ ವಾರ್ತೆ

ಮುಂಬಯಿ: ವ್ಯಾಲೆಂಟೈನ್ಸ್ ಡೇ‌’‌ಗೆ ಉಡುಗೊರೆ ನೀಡುವುದಾಗಿ 51 ವರ್ಷದ ಮಹಿಳೆಗೆ 3.68 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾಗಿದ್ದ ವ್ಯಕ್ತಿ ಈ ಕೃತ್ಯ ನಡೆಸಿದ್ದಾಗಿ ವರದಿಯಾಗಿದೆ.

ಅಲೆಕ್ಸ್ ಲಾರೆನ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿ ಮಹಿಳೆಯ ವಿಶ್ವಾಸ ಗಳಿಸಿಕೊಂಡಿದ್ದು, ತಾನು ಹಡಗಿನಲ್ಲಿ ಅಧಿಕಾರಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದನು.

ಫೆಬ್ರುವರಿ 3ರಂದು ಮಹಿಳೆಗೆ ಇನ್ಸ್ಟಾಗ್ರಾಂನಲ್ಲಿ ಅಜ್ಞಾತ ಆರೋಪಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ನಂತರ ಅವರಿಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಆರೋಪಿ ಕೇಳಿದ್ದರಿಂದ ಮಹಿಳೆ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ತಾನು ಹಡಗಿನಲ್ಲಿ ಅಧಿಕಾರಿಯಾಗಿದ್ದೇನೆ. ಇಟಲಿಯಲ್ಲಿ ಜಿಮ್ ನಡೆಸುತ್ತಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದನು. ನಂತರ ಇಬ್ಬರು ಆತ್ಮೀಯರಾಗಿದ್ದರು. ಆರೋಪಿ ಮಹಿಳೆಯ ಖಾಸಗಿ ಫೋಟೋಗಳನ್ನು ಕೇಳಿದ್ದು, ಆಕೆ ಆತನಿಗೆ ಕಳುಹಿಸಿ ಕೊಟ್ಟಿದ್ದಾರೆ.

ಬಳಿಕ ಫೆಬ್ರುವರಿ 2ರಂದು ವಾಲಂಟೈನ್ ಡೇ ಉಡುಗೊರೆ ನೀಡುತ್ತೇನೆ ಎಂದೂ ಅದಕ್ಕೆ ವಿಳಾಸ ಕಳುಹಿಸಲು ಆರೋಪಿ ತಿಳಿಸಿದ್ದನು. 750 ರೂಪಾಯಿ ಕೊರಿಯರ್ ಕಂಪೆನಿಗೆ ಕೊಡಬೇಕಾಗಬಹುದು ಎಂದು ಹೇಳಿದ್ದನು. ಫೆಬ್ರುವರಿ 10ರಂದು ಮಹಿಳೆಗೆ ಒಂದು ಪಾರ್ಸೆಲ್ ಬಂದಿರುವುದಾಗಿ  ಫೋನ್ ಕರೆ ಬಂತು. ಲೆಕ್ಕಕ್ಕಿಂತ ಹೆಚ್ಚು ಭಾರ ಇರುವುದರಿಂದ 72,000ರೂಪಾಯಿ ಕಟ್ಟಬೇಕೆಂದು ತಿಳಿಸಲಾಗಿತ್ತು. ಮಹಿಳೆ ಅದನ್ನು ಪಾವತಿಸಿದ್ದರು.

ನಂತರ ಪಾರ್ಸೆಲ್‍ನಲ್ಲಿ ಯುರೋಪಿಯನ್ ಕರೆನ್ಸಿ ಇದೆ. ಕಪ್ಪುಹಣದ ಸಮಸ್ಯೆಯಲ್ಲಿ ಸಿಲುಕದಿರಲು 2,65,000ರೂಪಾಯಿ ಪಾವತಿಸಬೇಕೆಂದು ಕೊರಿಯರ್ ಕಂಪೆನಿಯಿಂದ ಮತ್ತೊಂದು ಕರೆ ಬಂದಿದ್ದು, ಮಹಿಳೆ ಆ ಹಣವನ್ನೂ ಕಟ್ಟಿದರು. ಆದರೆ ಪುನಃ 98,000ರೂಪಾಯಿ ಕಟ್ಟಲು ಕೊರಿಯರ್ ಕಂಪೆನಿ ಹೇಳಿದ ಬೆನ್ನಲ್ಲೇ,  ಮಹಿಳೆ ಸಂದೇಹಗೊಂಡು,  ಲಾರೆನ್ಸ್ ಎಂಬ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಆತ ಹಣ ಕಟ್ಟದಿದ್ದರೆ ನಿಮ್ಮ ಖಾಸಗಿ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದರೊಂದಿಗೆ ಮಹಿಳೆಗೆ ತಾನು ಮೋಸ ಹೋಗಿದ್ದೇನೆ ಅರಿವಾಗಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.