ಬೆಂಗಳೂರು ಏರೋ ಇಂಡಿಯಾ ಶೋ: ವಿವಾದವಾಗುವ ಮುನ್ನವೇ ಹನುಮಂತನ ‘ಸ್ಟಿಕ್ಕರ್’ ತೆಗೆದುಹಾಕಿದ ಎಚ್‌ಎಎಲ್

0
231

ಸನ್ಮಾರ್ಗ ವಾರ್ತೆ

ಬೆಂಗಳೂರು: ಯಲಹಂಕ ಏರ್ ಬೇಸ್‌ನಲ್ಲಿ ಸೋಮವಾರದಿಂದ ನಡೆಯುತ್ತಿರುವ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಪ್ರದರ್ಶನಕ್ಕಿಟ್ಟಿದ್ದ ತಮ್ಮ ಮಾದರಿಯ ವಿಮಾನವೊಂದರಲ್ಲಿ ಹಾಕಿದ್ದ ಹನುಮಂತನ ಸ್ಟಿಕ್ಕರ್ ಅನ್ನು ವಿವಾದವಾಗುವ ಮುನ್ನವೇ ತೆಗೆದುಹಾಕಿದೆ.

“ಆಂತರಿಕ ಚರ್ಚೆಯ ನಂತರ ಈ ಚಿತ್ರವನ್ನು ಹಾಕುವುದು ಸೂಕ್ತವಲ್ಲ ಎಂದು ತೀರ್ಮಾನಿಸಿದ ಕಾರಣ ನಾವು ತೆಗೆದುಹಾಕಲು ನಿರ್ಧರಿಸಿದ್ದೇವೆ. ಯಾವುದೇ ಉದ್ದೇಶದಿಂದ ಹಾಕಿರಲಿಲ್ಲ” ಎಂದು ಎಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಸಿಬಿ ಅನಂತಕೃಷ್ಣನ್ ಹೇಳಿಕೆ ನೀಡಿದ್ದಾರೆ.

ಏರೋ ಇಂಡಿಯಾ 2023ರ ಮೊದಲ ದಿನದಂದು, ವಿಮಾನ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದ ಸೂಪರ್‍‌ ಸಾನಿಕ್ ತರಬೇತುದಾರ ವಿಮಾನ(HLFT-42)ದ ಬಾಲದಲ್ಲಿ ಎಚ್‌ಎಎಲ್ ಈ ಸ್ಟಿಕ್ಕರ್ ಅನ್ನು ಹಾಕಿತ್ತು. ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಇದು ಇನ್ನಷ್ಟು ವಿವಾದಕ್ಕೆ ಎಡೆಮಾಡಿಕೊಡುವ ಮುನ್ನವೇ ಎಚ್‌ಎಎಲ್ ಹನುಮಂತನ ‘ಸ್ಟಿಕ್ಕರ್’ ತೆಗೆದುಹಾಕಿದೆ.

ಪವನ ಪುತ್ರ ಯೋಜನೆಯ ಭಾಗವಾಗಿ ಈ ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಿದ್ದೆವು ಎಂದು ಏರೋನಾಟಿಕ್ಸ್ ಸಂಸ್ಥೆ ತಿಳಿಸಿತ್ತು.

ಏರೋ ಇಂಡಿಯಾ 2023 ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದ್ದರು. ಫೆ.17ರವರೆಗೆ ಈ ವೈಮಾನಿಕ ಪ್ರದರ್ಶನ ನಡೆಯಲಿದೆ.