ಮುಸ್ಲಿಮರೇ, ಇರುವ ಸಮಸ್ಯೆಗಳಲ್ಲೇ ಉರುಳಾಡಬೇಡಿ: ಸಯ್ಯದ್ ಸಆದತುಲ್ಲಾ ಹುಸೈನಿ

0
372

ಸಯ್ಯದ್ ಸಆದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು

ಸನ್ಮಾರ್ಗ ವಾರ್ತೆ

ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರ ಪರಿಹಾರಕ್ಕೆ ನಾವಿಡಬೇಕಾದ ಪ್ರಮುಖ ಹೆಜ್ಜೆಯೇನೆಂದರೆ, ನಾವು ಭವಿಷ್ಯದ ಕುರಿತು ಚಿಂತಿಸಲು ಸಿದ್ಧರಾಗುವುದು. ಆದರೆ ಇರುವ ಸಮಸ್ಯೆಗಳಲ್ಲೇ ಉರುಳಾಡುವುದು ನಾವು ಇವತ್ತು ಮಾಡುತ್ತಿರುವ ತಪ್ಪು. ನಮ್ಮ ದೇಶದಲ್ಲಿರುವ ಯಾವುದೇ ಸಮಸ್ಯೆಗೂ ತ್ವರಿತ ಪರಿಹಾರ ಇಲ್ಲ ಎಂಬುದು ನಾವು ತಿಳಿದಿರಬೇಕಾದ ಒಂದನೇ ವಿಷಯ. ಅದಕ್ಕೆ ದೀರ್ಘ ಕಾಲೀನ ಪರಿಹಾರಗಳು ಬೇಕು. ನಾವು ಬರಲಿರುವ ನಾಳೆಯನ್ನು ಮುಂದಿಟ್ಟು ಕೊಂಡು ಪರಿಹಾರಗಳನ್ನು ರೂಪಿಸಬೇಕು ಮತ್ತು ಅದಕ್ಕಾಗಿ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು.

ಇಂದು ನಮ್ಮ ದೇಶದ ಮತ್ತು ಇಲ್ಲಿ ಬದುಕುತ್ತಿರುವ ಮುಸ್ಲಿಮ್ ಸಮುದಾಯದ ಸ್ಥಿತಿ ಬಹಳ ಆತಂಕಕಾರಿಯಾಗಿದೆ. ನಮಗೆಲ್ಲಾ ತಿಳಿದಿರುವಂತೆ ನಮ್ಮ ದೇಶವನ್ನು ಸಾಂವಿಧಾನಿಕ ಮೌಲ್ಯಗಳ ಆಧಾರದಲ್ಲಿ ನಿರ್ಮಿಸಲಾಗಿದೆ. ಆದರೆ ದೇಶದ ರಚನೆಯನ್ನೇ ಬುಡಮೇಲು ಗೊಳಿಸುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸರ್ವ ಧರ್ಮದವರಿಗೂ ಸಮಾನ ಗೌರವ, ಎಲ್ಲರಿಗೂ ಸಮಾನ ಹಕ್ಕು, ದೇಶದ-ಆರ್ಥಿಕ-ಸಾಮಾಜಿಕ ನ್ಯಾಯ ಮುಂತಾದ ಮೌಲ್ಯಗಳ ಕುರಿತು ವಿವಿಧ ಜನರನ್ನು ಒಂದುಗೂಡಿಸುವ ಬಗ್ಗೆ ನಮ್ಮ ಸಂವಿಧಾನ ಮಾತನಾಡುತ್ತದೆ.

ಆದರೆ ಇವತ್ತು ಆ ಮೌಲ್ಯಗಳೆಲ್ಲಾ ದುರ್ಬಲಗೊಳ್ಳುತ್ತಿವೆ. ಪ್ರಜಾಪ್ರಭುತ್ವವು ನಾಲ್ಕು ದಿಕ್ಕಿನಿಂದಲೂ ಅಪಾಯವನ್ನು ಎದುರಿಸುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಮುಂದಿರುವ ದೊಡ್ಡ ಸವಾಲು ಸರ್ವಾಧಿಕಾರವಲ್ಲ ಎಂದು ಫ್ರೆಂಚ್ ತತ್ವ ಚಿಂತಕ ರೋಝನ್ ವೆಲೋನ್ ಹೇಳಿರುವರು. ಅವರ ಅಭಿಪ್ರಾಯದಲ್ಲಿ ಪೋಪುಲಿಝಮ್ ಪ್ರಜಾಪ್ರಭುತ್ವವು ಎದುರಿಸುತ್ತಿರುವ ದೊಡ್ಡ ಬೆದರಿಕೆ. ಜನರನ್ನು ತನ್ನ ಕೈಗೆ ತೆಗೆದುಕೊಳ್ಳುವ ಜನಪರ ಮತ್ತು ವರ್ಚಸ್ವಿ ನಾಯಕರು ಮಾಧ್ಯಮವನ್ನು ಸೇರಿದಂತೆ ಎಲ್ಲವನ್ನೂ ಖರೀದಿಸುತ್ತಾರೆ. ಸ್ವಾರ್ಥ ಹಿತಾಸಕ್ತಿಗಳಿಗಾಗಿ ಜನರ ಭಾವನೆಗಳನ್ನು ಕೆರಳಿಸುತ್ತಾರೆ. ಬಳಿಕ ತಮ್ಮನ್ನು ಅಧಿಕಾರಕ್ಕೇರಿಸಿದ ಜನರ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳಲು ಆರಂಭಿಸುತ್ತಾರೆ. ವಿಶ್ವದ ಎಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಗಳೂ ಈ ಬೆದರಿಕೆಯನ್ನು ಎದುರಿಸುತ್ತಿವೆ. ಈ ಬೆದರಿಕೆಯು ಹೆಚ್ಚು ಭೀಮಾಕಾರವನ್ನು ತಾಳಿರುವುದು ನಮ್ಮ ದೇಶದಲ್ಲಿ ಎಂದರೆ ತಪ್ಪಾಗಲಾರದು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದು ಭವಿಷ್ಯದಲ್ಲಿ ದೊಡ್ಡ ಬೆದರಿಕೆಯಾಗಲಿದೆ.

ಓಕ್ಸ್ಪೋಮ್‌ನಂತಹ ಏಜೆನ್ಸಿಗಳ ವರದಿಗಳ ಪ್ರಕಾರ, 2014ರ ಬಳಿಕ ಇಂತಹ ಅಸಮಾನತೆಗಳು ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇವೆ. ದೇಶದ ಸಂಪತ್ತೆಲ್ಲ ಕೆಲವು ಶತಕೋಟೀಶ್ವರರ ಕೈಗಳಲ್ಲಿ ಸಂಗ್ರಹವಾಗುತ್ತಿದೆ. ಜನರಿಗೆ ಉದ್ಯೋಗವಿಲ್ಲ. ಕೋಟ್ಯಾಂತರ ಮನುಷ್ಯರು ದಾರಿದ್ರ್ಯದೆಡೆಗೆ ನೂಕಲ್ಪಡುತ್ತಿದ್ದಾರೆ.

ಈ ಸವಾಲುಗಳನ್ನು ಮುಸ್ಲಿಮ್ ಸಮುದಾಯವು ಅತ್ಯಂತ ಹೆಚ್ಚು ಎದುರಿಸುತ್ತಿದೆ. ನೋಡಿ, ಭಾರತದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಇಂದು ಒಬ್ಬನೇ ಒಬ್ಬ ಮುಸ್ಲಿಮ್ ಮಂತ್ರಿ ಇಲ್ಲ. ಭಾರತದ ಮುಸ್ಲಿಮ್ ಇತಿಹಾಸದಲ್ಲಿ ಇಂಥ ಪರಿಸ್ಥಿತಿ ಇದು ಮೊದಲನೇ ಬಾರಿಯಾಗಿದೆ. ಮಾತ್ರವಲ್ಲ, ಮುಸ್ಲಿಮರ ಮೇಲೆ ನಡೆಯುವ ಯಾವುದೇ ದೌರ್ಜನ್ಯ, ಆಕ್ರಮಣಗಳನ್ನು ಸಂಪೂರ್ಣವಾಗಿ ಸ್ವಾಭಾವಿಕೀಕರಣ ಅಥವಾ ನಾರ್ಮಲೈಝ್ ಗೊಳಿಸಲಾಗಿದೆ. ಇದು ಇಂದು ದೇಶದ ಅತ್ಯಂತ ದೊಡ್ಡ ಸಮಸ್ಯೆಯೆಂದು ನಾನು ಭಾವಿಸುತ್ತೇನೆ.

ಅದೇವೇಳೆ ಭವಿಷ್ಯದ ಕುರಿತು ಹೇಳುವಾಗ ಇಂತಹ ವಿಷಯಗಳನ್ನು ಮಾತ್ರ ನಾವು ಮಾತನಾಡುವುದಲ್ಲ. ನಾವು ಕನಸು ಕಾಣುವ, ನಾವು ಸಾಕ್ಷಾತ್ಕಾರಗೊಳಿಸ ಬಯಸುವ ಭವಿಷ್ಯ ಯಾವುದು? ನಾವು ಅದನ್ನು ಹೇಗೆ ಸಾಧಿಸುತ್ತೇವೆ? ಎಂಬುದು ನಮ್ಮ ಚರ್ಚೆಯ ತಿರುಳಾಗಿರಬೇಕು.

ವಿಶ್ವದ ಇತಿಹಾಸದತ್ತ ಕಣ್ಣು ಹಾಯಿಸಿ ನೋಡಿ. ಅತಿಕ್ರಮಣಗಳು, ದೌರ್ಜನ್ಯಗಳು ಮೇರೆ ಮೀರಿದ ಸಂದರ್ಭಗಳಲ್ಲಿ ಪುನರುಜ್ಜೀವನ ಮತ್ತು ಸುಧಾರಣಾ ಉಪಕ್ರಮಗಳು ನಡೆದಿದೆ ಎಂಬುದು ತಿಳಿದು ಬರುತ್ತದೆ. ಅನ್ಯಾಯ, ಆಕ್ರಮಣ, ಹಕ್ಕು ನಿರಾಕರಣೆ, ಫ್ಯಾಸಿಝಂನ ಈ ಓಟವು ಅಂತ್ಯಗೊಳ್ಳುತ್ತದೆಯಾ, ಸುಂದರವಾದ ಉಜ್ವಲ ಭವಿಷ್ಯವು ಭಾರತದಲ್ಲಿ ಉದಯವಾಗುತ್ತದೆಯಾ? ಭಾರತೀಯ ಜನತೆಯು ಬದಲಾವಣೆಗೆ ರಂಗ ಸಜ್ಜುಗೊಳಿಸುತ್ತಾರೆಂದೂ ನಾವು ನಿರೀಕ್ಷಿಸುತ್ತೇವೆ. ಇಂತಹ ಆಂದೋಲನಕ್ಕೆ ದಿಕ್ಕು ತೋರಿಸಲು ಮುಸ್ಲಿಮ್ ಸಮುದಾಯಕ್ಕೆ ಸಾಧ್ಯವಾಗಬೇಕು.

ನಾವು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಭಾವನಾತ್ಮಕ ವಿಷಯಗಳಲ್ಲಿ ನಮ್ಮ ಎಲ್ಲಾ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ದೃಷ್ಟಿಯು ಬರಲಿರುವ ಕಾಲದ ಕಡೆಗಿರಬೇಕು. ಫ್ಯಾಸಿಝಂನ ಬಳಿಕದ, ಕೋಮುವಾದದ ಬಳಿಕದ, ಹಿಂದುತ್ವಾ ನಂತರದ ಭಾರತವನ್ನು ಕಟ್ಟಲು ನಾವು ನಿರ್ವಹಿಸಬೇಕಾದ ಪಾತ್ರವೇನು? ಎಂಬುದು ನಮ್ಮ ಚಿಂತನೆಯ ವಿಷಯವಾಗಬೇಕು.

ನಾವು ನಾಲ್ಕು ವಿಷಯಗಳಿಗೆ ಒತ್ತು ನೀಡಿ ಮುಂದೆ ಸಾಗಬೇಕು.
ಒಂದು: ಭಾರತೀಯ ಮುಸ್ಲಿಮರ ಐಕ್ಯ. ಒಗ್ಗಟ್ಟಾಗುವುದು ಎಂಬುದು ನಮ್ಮ ಪ್ರಮುಖ ಅಜೆಂಡವಾಗಿ ಮಾರ್ಪಡಬೇಕು. ನಾವು ಒಂದಾಗಬೇಕಾಗಿದೆ. ಏಕೆಂದರೆ ಸಮುದಾಯದ ಸುರಕ್ಷತೆಯು ಅಪಾಯದಲ್ಲಿದೆ. ಫ್ಯಾಸಿಸ್ಟ್ ಶಕ್ತಿಗಳು ದೇಶದ ಎಲ್ಲಾ ರಂಗಗಳಲ್ಲೂ ಹಿಡಿತ ಸಾಧಿಸುತ್ತಿದೆ. ನಮ್ಮ ವೈಯಕ್ತಿಕ ಕಾನೂನುಗಳು, ಮಸೀದಿಗಳು ಬೆದರಿಕೆ ಎದುರಿಸುತ್ತಿವೆ.. ಹೀಗೆಲ್ಲಾ ಹೇಳಿಕೊಂಡು ಒಗ್ಗಟ್ಟಾಗುವುದಲ್ಲ. ಇದು ನೆಗೆಟಿವ್ ಅಜೆಂಡಾವಾಗಿದೆ. ಇಂತಹ ಉದ್ದೇಶಗಳನ್ನು ಹೇಳಿಕೊಂಡು ಸ್ಥಿರವಾದ ಐಕ್ಯವನ್ನು ಸಾಧಿಸಲು ಸಾಧ್ಯವಿಲ್ಲ. ಐಕ್ಯತೆಯ ಆಧಾರ ಒಂದು ಪ್ರೋ ಆಕ್ಟೀವ್ ಅಜೆಂಡಾವಾಗಿರಬೇಕು. ಕ್ರಿಯಾತ್ಮಕವಾದ ಒಂದು ವಿಝನ್ ಮತ್ತು ಕಾರ್ಯ ಚಟುವಟಿಕೆಯ ಆಧಾರದಲ್ಲಿ ಐಕ್ಯತೆ ಸಾಧಿಸಬೇಕು. ನಾವು ಯಾವುದೇ ಸಂಘಟನೆಯ ಭಾಗವಾಗಿದ್ದರೂ ನಾಲ್ಕೋ ಐದೋ ಕ್ಷೇತ್ರಗಳಲ್ಲಿ ನಮಗೆ ಒಂದಾಗಿ ಭವಿಷ್ಯಕ್ಕೆ ಒಂದು ಕಾರ್ಯ ಚಟುಟಿಕೆಯನ್ನು ರೂಪಿಸಲು ಸಾಧ್ಯವೆಂದಾದರೆ ಅದಕ್ಕಾಗಿ ಪ್ರಯತ್ನಿಸಬೇಕು. ಅಂದರೆ ಐಕ್ಯತೆಯ ಅಡಿಗಲ್ಲು ನಕಾರಾತ್ಮಕ ಅಜೆಂಡಾವಾಗಿರಬಾರದು. ಅದು ಕ್ರಿಯಾತ್ಮಕ ಅಜೆಂಡಾವಾಗಿರಬೇಕು ಎಂದರ್ಥ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಕ್ರಿಯಾ ಯೋಜನೆ ರೂಪಿಸಿ ಮುನ್ನಡೆಯಬೇಕು.

ಎರಡು: ಈ ದೇಶದಲ್ಲಿ ನ್ಯಾಯವು ನಮ್ಮ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ಇದನ್ನು ಪವಿತ್ರ ಕುರ್‌ಆನ್ ಒತ್ತಿ ಹೇಳುತ್ತದೆ. ಮುಸ್ಲಿಮ್ ಸಮುದಾಯದ ನಿಯೋಗದ ಉದ್ದೇಶವೆನೆಂದರೆ ಅವರು ತಮ್ಮ ಸುರಕ್ಷತೆಗಾಗಿ ಎದ್ದು ನಿಲ್ಲಬೇಕು ಎಂಬುದಲ್ಲ. ಜನರಿಗಾಗಿ ಎದ್ದೇಳಿಸಲ್ಪಟ್ಟ ಉತ್ತಮ ಸಮುದಾಯ ಎಂಬುದು ಅದರ ವಿಶೇಷತೆ. ಆ ಸಮುದಾಯವು ಜನರ ನಡುವೆ ನ್ಯಾಯದ ಧ್ವಜವಾಹಕರಾಗಬೇಕು ಎಂದೂ ಹೇಳಲಾಗಿದೆ. ಈ ಕಾರ್ಯಸೂಚಿಯೊಂದಿಗೆ ನಾವು ಕಾರ್ಯನಿರತರಾದರೆ ಅದು ಸಮುದಾಯದ ಐಕ್ಯತೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಈ ಸಮಾಜದ ಸಮಕಾಲೀನ ಪ್ರಸ್ತುತತೆಯು ಇತರ ಜನ ವಿಭಾಗಗಳಿಗೂ ಸ್ಪಷ್ಟವಾಗುತ್ತದೆ. ಪೊಲೀಸ್ ದೌರ್ಜನ್ಯ ಕೊನೆಗೊಳಿಸಲು ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯ ನೀಡುವ ಪ್ರಯತ್ನಗಳು ನ್ಯಾಯ ಸಂಸ್ಥಾಪನೆಯ ಪರಿಧಿಯಲ್ಲಿ ಬರುತ್ತದೆ. ಆದ್ದರಿಂದ ನ್ಯಾಯಕ್ಕಾಗಿ ಹೋರಾಟವು ಸಮುದಾಯದ ಮುಖ್ಯ ಕಾರ್ಯಸೂಚಿಯಾಗಿ ಮಾರ್ಪಡಬೇಕು.

ಮೂರು: ಇಡೀ ಭಾರತೀಯ ಜನತೆಯನ್ನು ತಲುಪುವ ಕಾರ್ಯಕ್ರಮಗಳು ನಡೆಯಬೇಕು. ನಾವು ನಮ್ಮಲ್ಲೇ ಸೀಮಿತವಾಗಿರಬಾರದು. ಜನರ ಗ್ರಹಿಕೆ ಮತ್ತು ಅಭಿಪ್ರಾಯಗಳನ್ನು ತಿದ್ದಲು ಹೊರಡಬೇಕಾದವರು ಈ ದೇಶದ ಭವಿಷ್ಯ ಉಜ್ವಲವಾಗಬೇಕೆಂಬ ಬಯಕೆ ನಿಮಗಿದ್ದರೆ, ಜನರ ಗ್ರಹಿಕೆಗಳು ಮತ್ತು ದೃಷ್ಟಿಕೋನವನ್ನು ಬದಲಾಯಿಸಲು ಪ್ರಯತ್ನಿಸುವುದು ಅದರ ಪ್ರಮುಖ ಅಂಶವಾಗಿದೆ. ಜನರ ಚಿಂತನೆಗಳು ಮತ್ತು ದೃಷ್ಟಿಕೋನಗಳನ್ನು ಬದಲಾಯಿಸಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ತಲುಪಿದೆ ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ನಿಮಗೆ ಬದಲಾಯಿಸಬೇಕೆಂದಿದ್ದರೆ ನಾವು ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲೇಬೇಕು.

ಎಲ್ಲರೂ ಸೇರಿ ಈ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ನಿರ್ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಹೃದಯದ ಬಾಗಿಲನ್ನು ತಟ್ಟಬೇಕು. ಇದು ಎಂದಿಗೂ ತ್ವರಿತ, ಸುಲಭವಾದ ಕೆಲಸವಲ್ಲ. ಆದ್ದರಿಂದಲೇ ನಮ್ಮಲ್ಲಿ ಅಲ್ಫಾವಧಿ ಯೋಜನೆಗಳಿಲ್ಲ. ದೀರ್ಘಾವಧಿಯ ಯೋಜನೆಗಳಿವೆ ಎಂದು ಆರಂಭದಲ್ಲಿ ಹೇಳಲಾಗಿತ್ತು.

ನಾಲ್ಕು: ಈ ಕಾರ್ಯಗಳನ್ನು ನಿರ್ವಹಿಸಲು ಮುಸ್ಲಿಮರು ತಮ್ಮನ್ನು ತಾವೇ ಸಶಕ್ತಗೊಳಿಸಿಕೊಳ್ಳಬೇಕು. ಆರ್ಥಿಕವಾಗಿ ಮುನ್ನಡೆಯಬೇಕು. ಶೈಕ್ಷಣಿಕವಾಗಿ ಮುಂಚೂಣಿಗೆ ತಲುಪಬೇಕು. ವ್ಯವಹಾರದಲ್ಲಿ ಮುಂದಿನ ಪಂಕ್ತಿಯಲ್ಲಿರಬೇಕು. ಅವರ ಧಾರ್ಮಿಕ ಮಟ್ಟವು ಅತ್ಯುತ್ತಮವಾಗಿರಬೇಕು.

ಈ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರ ಎಲ್ಲಾ ವಿಭಾಗಗಳೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಅದನ್ನು ಸಾಧಿಸಲು ಸಾಧ್ಯ. ಹಾಗೆ ಮಾಡಿದರೆ ಈ ದೇಶದ ಭವಿಷ್ಯವನ್ನು ರೂಪಿಸುವುದರಲ್ಲಿ ಅವರಿಗೆ ಗಮನಾರ್ಹ ಪಾತ್ರವಿರುತ್ತದೆಂದು ನಾನು ದೃಢವಾಗಿ ನಂಬುತ್ತೇನೆ. ಈ ಕಾರ್ಯಸೂಚಿಯನ್ನು ಅನುಸರಿಸಿ ಕಾರ್ಯಪ್ರವೃತ್ತರಾದರೆ ಸವಾಲುಗಳನ್ನು ಅವಕಾಶವಾಗಿ ಬದಲಾಗುವುದು ನಿಮಗೆ ಕಾಣಲು ಸಾಧ್ಯವಾಗುತ್ತದೆ.

(ಶಾಂತಪುರ ಅಲ್ ಜಾಮಿಯ ಪದವಿ ಪ್ರಧಾನ ಸಮಾರಂಭದ ಸಂದರ್ಭದಲ್ಲಿ ಸಂಘಟಿಸಿದ ಲೀಡರ್ಸ್ ಮೀಟ್‌ನಲ್ಲಿ ಮಾಡಿದ ಭಾಷಣ)