ಮಧ್ಯಪ್ರದೇಶ:ಕ್ರಿಶ್ಚಿಯನ್ ಚರ್ಚ್ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು

0
133

ಸನ್ಮಾರ್ಗ ವಾರ್ತೆ

ಭೋಪಾಲ: ಮಧ್ಯಪ್ರದೇಶದ ಕ್ರೈಸ್ತರ ಚರ್ಚಿನ ಮೇಲ್ಭಾಗದ ಶಿಲುಬೆಗೆ ರಾಮ ಮಂದಿರ ಉದ್ಘಾಟನೆಯ ಕುರಿತ ಕೇಸರಿ ಬಾವುಟವನ್ನು ಕಿಡಿಗೇಡಿಗಳ ತಂಡ ಕಟ್ಟಿದೆ. ಈ ಘಟನೆ ಆದಿತ್ಯವಾರ ಜಂಬುವಾದ ಚರ್ಚ್ ನಲ್ಲಿ ನಡೆದಿದ್ದು, ಇದರ ವೀಡಿಯೋ ದೃಶ್ಯಗಳು ಪ್ರಸಾರವಾಗುತ್ತಿದೆ.

ಜೈಶ್ರೀರಾಮ್ ಎಂಬ ಘೋಷಣೆಯೊಂದಿಗೆ ಚರ್ಚ್ ನ ಮೇಲೆ ಹತ್ತಿದ ಗುಂಪು ಕೇಸರಿ ಬಾವುಟ ಕಟ್ಟಿರುವುದಾಗಿ ಚರ್ಚ್ ನ ಪಾಸ್ಟರ್ ನಾರ್ಬು ಅಮಲಿಯಾರ್ “ದ ಕ್ವಿಂಟ್‍” ಗೆ ತಿಳಿಸಿದರು. ಆದಿತ್ಯವಾರದ ಪ್ರಾರ್ಥನೆ ಮುಗಿದ ಮೇಲೆ ಗುಂಪು ಬಂದಿದ್ದು, ಈ ಗುಂಪಿನಲ್ಲಿ ಸುಮಾರು 25 ಜನರಿದ್ದರು. ಚರ್ಚ್ ನ ಜನರು ಶಿಲುಬೆಯ ಮೇಲೆ ಬಾವುಟ ಕಟ್ಟಬೇಡಿ ಎಂದು ಬಿನ್ನವಿಸಿದರೂ ಅವರು ಅದಕ್ಕೆ ಕಿವಿಕೊಡಲಿಲ್ಲ ಎಂದು ಪಾಸ್ಟರ್ ಹೇಳಿದರು.

ಆದರೆ ಈ ಘಟನೆಯಲ್ಲಿ ಈ ವರೆಗೆ ಕೇಸು ದಾಖಲಿಸಲಾಗಿಲ್ಲ ಎಂದು ಜಾಂಬುವ ಎಸ್ಪಿ ಹೇಳಿದರು. ಘಟನೆಯ ಸ್ಥಳಕ್ಕೆ ಹೋಗಿದ್ದೇವೆ. ಅದು ಒಬ್ಬರ ಮನೆಯಾಗಿದೆ. ಅಲ್ಲಿ ಪ್ರಾರ್ಥನೆ ನಡೆಯುತ್ತದೆ. ಅದು ಕ್ರೈಸ್ತರ ಚರ್ಚ್ ಅಲ್ಲ . ಸೋಮೋಟೊ ಕೇಸು ದಾಖಲಿಸಲು ಆಗುವುದಿಲ್ಲ . ಈ ಬಗ್ಗೆ ದೂರು ಬಂದಿಲ್ಲ ಎಂದು ಎಸ್‍ಪಿ ಹೇಳಿದರು.

ಇದೇ ವೇಳೇ ಪೊಲೀಸರ ವಾದವನ್ನು ಪಾಸ್ಟರ್ ನಿರಾಕರಿಸಿದ್ದು ಕಟ್ಟಡ ಚರ್ಚ್ ಆಗಿದೆ. 2016ರಿಂದ ಇಲ್ಲಿ ಆರಾಧನೆ ನಡೆಯುತ್ತಿದೆ. ನಲ್ವತ್ತು ಮಂದಿ ಆದಿತ್ಯವಾರ ಪ್ರಾರ್ಥನೆಗೆ ಬರುತ್ತಾರೆ. ಅಕ್ರಮ ಎಸಗಿದವರು ನಂತರ ನನ್ನನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾರೆ. ಆದ್ದರಿಂದ ದೂರು ನೀಡಬೇಕೆ ಎಂದು ತನಗೆ ಅನುಮಾನ ಇದೆ. ಗ್ರಾಮ ಮುಖ್ಯಸ್ಥರನ್ನು ಕೇಳಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಪಾಸ್ಟರ್ ಹೇಳಿದರು.