ಸನ್ಮಾರ್ಗ ವಾರ್ತೆ
ಮುಂಬೈ, ಜ. 23: ಪೌರತ್ವದ ಹೆಸರಿನಲ್ಲಿ ಯಾರಿಗೂ ರಾಜ್ಯ ತೊರೆಯುವ ಪರಿಸ್ಥಿತಿ ಬರುವುದಿಲ್ಲ ಎಂದು ಮುಸ್ಲಿಂ ನಾಯಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕರೆ ಭರವಸೆ ನೀಡಿದ್ದಾರೆ. ಮುಂಬೈ ಪೊಲೀಸ್ ಕೇಂದ್ರದಲ್ಲಿ ನಡೆದ ಸಮಾಲೋಚನೆಯಲ್ಲಿ ಉದ್ಧವ್ ಠಾಕರೆ ಪೌರತ್ವದ ವಿಷಯದಲ್ಲಿ ಆತಂಕ ಪಡಬೇಡಿ ಎಂದು ಮುಸ್ಲಿಮ್ ನಾಯಕರಿಗೆ ಹೇಳಿದರು.
ಕೇರಳ ಸರಕಾರ ಮಾಡಿದಂತೆ ಪೌರತ್ವ ಮಸೂದೆಯ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯೂ ಪ್ರಸ್ತಾವ ಪಾಸು ಮಾಡಬೇಕೆಂದು ನಾಯಕರು ಮುಖ್ಯಮಂತ್ರಿಗೆ ಮನವಿ ಮಾಡಿದರು. ರಝಾ ಅಕಾಡಮಿ ಪ್ರಧಾನ ಕಾರ್ಯದರ್ಶಿ ಸಈದ್ ನೂರಿಯ ನೇತೃತ್ವದಲ್ಲಿ 200 ನಾಯಕರು ಉದ್ಧವ್ರನ್ನು ಭೇಟಿಯಾಗಿದ್ದಾರೆ. ಭೇಟಿಗೆ ಮುಂಬೈ ಪೊಲೀಸರು ವ್ಯವಸ್ಥೆ ಮಾಡಿದ್ದರು. ಮುಸ್ಲಿಮರು ದೇಶದ ಪ್ರಜೆಗಳೇ ಆಗಿದ್ದು ಪೌರತ್ವವನ್ನು ಅವರಿಂದ ಯಾರಿಗೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಉದ್ಧವ್ ಠಾಕರೆ ಹೇಳಿರುವುದಾಗಿ ಸಈದ್ ನೂರಿ ತಿಳಿಸಿದರು.












