ನನ್ನ ಮಂಗಳೂರಿನ ಸೌಹಾರ್ದ ಪರಂಪರೆಯ ಝಲಕ್ ಗಳು

0
803

✒ಇಸ್ಮತ್ ಪಜೀರ್

ದೇಶದ ತುಂಬಾ ಕೋಮುವಾದ ಮತ್ತು ಅಸಹಿಷ್ಣುತೆಯ ವಿಷವಾಯು ಹಬ್ಬಿ ಉಸಿರುಗಟ್ಟುವ ವಾತಾವರಣವಿರುವ ಈ ಕಾಲದಲ್ಲಿ ಸೆಕ್ಯುಲರಿಸಮ್ ಎಂಬ ಒಣ ಸಿದ್ಧಾಂತ ಕೆಲಸಕ್ಕೆ ಬಾರದು. ಕಳೆದ ಹನ್ನೆರಡು ವರ್ಷಗಳಿಂದ ಕೋಮು ಸೌಹಾರ್ದ ಚಳವಳಿಯ ಕಾರ್ಯಕರ್ತನಾಗಿ ನನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ನನಗೊಂದು ಸಿದ್ಧಾಂತವಿದೆ. ಇದು ಜಾತ್ಯಾತೀತತೆಯನ್ನು ಒಪ್ಪಿ ಅದಕ್ಕಾಗಿ ಕೆಲಸ ಮಾಡುವವರಿಗೆ ಪ್ರಯೋಜನಕ್ಕೆ ಬರಬಹುದೇ ಹೊರತು ಅಂತಹ ಒಂದು ಪರಿಕಲ್ಪನೆಯ ಅರಿವೇ ಇಲ್ಲದ ಯುವಸಮೂಹದ ಮುಂದೆ ಅವುಗಳ ಪಾಠ ಮಾಡುವುದು ವ್ಯರ್ಥ. ಬದಲಾಗಿ ಈ ಉಸಿರುಗಟ್ಟುವ ವಾತಾವರಣದಲ್ಲೂ ಪ್ರಾಣವಾಯು ಆಗಬಲ್ಲ, ನಾನು ಕಂಡ ಮತ್ತು ಹತ್ತಿರದಿಂದ ಬಲ್ಲ ಕೆಲವು ಪ್ರಸಂಗಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ದಾಖಲಿಸುತ್ತೇನೆ.ಅವು ಸಿದ್ದಾಂತಗಳ ಹಂಗು ಮತ್ತು ಅರಿವಿಲ್ಲದ ಜನಸಾಮಾನ್ಯರ ಸಹಜ ಬದುಕಷ್ಟೆ.

೧. ೨೯೯೨ ಡಿಸೆಂಬರ್ ೬. ಬಾಬರೀ ಮಸೀದಿ ಧರಾಶಾಹಿಯಾಗುವುದರೊಂದಿಗೆ ನಮ್ಮ ಸಂವಿಧಾನದ ಜಾತ್ಯಾತೀತ ಆಶಯಗಳೂ ಧರಾಶಾಹಿಯಾದ ಕಾಲವದು.ದೇಶದ ಉದ್ದಗಲಕ್ಕೂ ಕೋಮು ದಾವಾಗ್ನಿಯು  ಜ್ವಾಲಾಮುಖಿಯಂತೆ ಹಬ್ಬಿತ್ತು. ಎಲ್ಲೋ ಅಲ್ಲೊಂದು ಇಲ್ಲೊಂದು ಕೋಮು ದಾವಾಗ್ನಿಯ ತಾಪ ತಾಗದ ಊರುಗಳಿದ್ದವು. ಅಂತಹ ಅಪರೂಪದ ಊರುಗಳಲ್ಲಿ ನನ್ನೂರು ಪಜೀರೂ ಒಂದು.

ಒಂದು ಸಂಜೆ ಪಕ್ಕದೂರಿನ ಕೆಲವು ದುಷ್ಕರ್ಮಿಗಳು ಪಜೀರಿನ ರಹ್ಮಾನಿಯಾ ಜುಮಾ ಮಸೀದಿಗೆ ದಾಳಿಗೈಯಲು ಪೆಟ್ರೋಲ್ ಬಾಂಬ್ ಸಹಿತ ಬರುವ ಸುದ್ಧಿ ಸಿಕ್ಕು ಪಜೀರಿನ ಹಿರಿಯರಾದ ಗಂಗಣ್ಣ ಆ ದುಷ್ಟಪಡೆಯನ್ನು ತಡೆಯಲು ಏಕಾಂಗಿಯಾಗಿ ಸಜ್ಜಾದರು‌. ಅವರು ಇನ್ನೇನು ಮಸೀದಿಯ ಸನಿಹ ತಲುಪಬೇಕೆಂದರೆ ಗಂಗಣ್ಣ ಅವರ ದಾರಿಗೆ ಅಡ್ಡಲಾಗಿ ರಸ್ತೆಯಲ್ಲಿ ಅಂಗಾತ ಮಲಗಿದರು. ” ನೀವು ನಮ್ಮ ಮಸೀದಿಗೆ ದಾಳಿ ಮಾಡಬೇಕೆಂದಿದ್ದರೆ ಅದಕ್ಕಿಂತ ಮುಂಚೆ ನನ್ನನ್ನು ಕೊಂದು ಮುಂದೆ ಸಾಗಿ” ಎಂದು ಸವಾಲು ಹಾಕಿದರು. ಆ ಹಿರಿಯನ ಸ್ಪಷ್ಟವಾದ ನೇರ ಮಾತು ಅವರನ್ನು ಅಧೀರನನ್ನಾಗಿಸಿತು. ಬಂದ ದಾರಿಗೆ ಸುಂಕವಿಲ್ಲ  ಅವರು ಹಿಂದಿರುಗಿದರು.

೨. ನನ್ನ ಕಛೇರಿಯಲ್ಲಿ ನನ್ನ ಜೊತೆ ಕೆಲಸ ಮಾಡುವ ಹೆಣ್ಮಗಳೊಬ್ಬಳ ಮನೆಯಲ್ಲಿ ಬಹಳ ಹಿಂದಿನಿಂದಲೂ ಪಾಲಿಸುತ್ತಾ ಬಂದ ಸಂಪ್ರದಾಯವೊಂದು ಇಂತಿದೆ.” ಮನೆಯ ಹಸು ಕರು ಹಾಕಿದರೆ ಅದರಿಂದ ಕರೆಯುವ ಮೊದಲ ಹಾಲು ಮತ್ತು ಬಾಳೆಹಣ್ಣುಗಳನ್ನು ಮದ್ರಸ ಮಕ್ಕಳಿಗೆ ಕುಡಿಯಲು ಕಾಣಿಕೆಯಾಗಿ ನೀಡುವುದು”

೩.ನನ್ನ ಕಛೇರಿಯಲ್ಲಿ ಕೆಲಸ ಮಾಡುವ ಇನ್ನೋರ್ವ ಹೆಣ್ಮಗಳ ಪತಿ ” ಕ್ಯಾನ್ಸರ್ ಪೀಡಿತನಾಗಿದ್ದ ತನ್ನ ಮುಸ್ಲಿಂ ಗೆಳೆಯನ ಜೀವ ಉಳಿಸುವ ಸಲುವಾಗಿ ವರ್ಷಾನುಗಟ್ಟಲೆ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಿದ್ದ. ಮಾತ್ರವಲ್ಲದೇ ಆ ಮುಸ್ಲಿಂ ಗೆಳೆಯನ ಮಾನಸಿಕ ಖಾಯಿಲೆ ಪೀಡಿತ ತಾಯಿಯ ಚಿಕಿತ್ಸೆಯ ಜವಾಬ್ದಾರಿಯನ್ನು  ಜನ್ಮದಾತೆಯ ಸೇವೆಯೆಂಬಂತೆ ಹೊತ್ತುಕೊಂಡಿದ್ದ” ಇದು ನಮ್ಮ ಅಕ್ಕ ಪಕ್ಕದ ಊರಲ್ಲೆಲ್ಲಾ ಜನಜನಿತವಾದ ಸುದ್ಧಿ.

೪. ನನ್ನ ಊರಿನಲ್ಲಿ ಊರವರೆಲ್ಲರಿಗೂ ಬೇಕಾಗಿದ್ದ ಸಮಾಜಮುಖಿ ಯುವಕ ಪ್ರವೀಣ ಇದ್ದಕ್ಕಿದ್ದಂತೆ ರಕ್ತದ ಕ್ಯಾನ್ಸರ್ ಪೀಡಿತನಾದ.ಚಿಕಿತ್ಸೆ ಪ್ರಾರಂಭಿಸುವ ಮುನ್ನ ವೈದ್ಯರು ಹಾಕಿದ್ದ ಮೊದಲ ಶರ್ತ” ಈ ಚಿಕಿತ್ಸೆ ಯಥೇಚ್ಛವಾಗಿ ರಕ್ತವನ್ನು ಬಯಸುತ್ತದೆ. ರಕ್ತದ ವ್ಯವಸ್ಥೆ ಮಾಡಲು ಸಾಧ್ಯವಿದ್ದರೆ ಮಾತ್ರ ನಾನು ಮುಂದುವರಿಯುವೆ.” ಆಗ ಅದಕ್ಕೆ ಸರಿಯೆಂದು ಮುಂದೆ ಬಂದು ” ಏನಾದರೂ ಮಾಡಿ ನಮಗೆ ನಮ್ಮ ಪ್ರವೀಣ ಮುಂಚಿನಂತಾಗಬೇಕು, ಅದಕ್ಕಾಗಿ ನಾವು ಎಂತಹದ್ದೇ ತ್ಯಾಗಕ್ಕೂ ಸಿದ್ಧ ಎಂದು ಮುಂದೆ ಬಂದವರು ಆತನ ಮುಸ್ಲಿಂ ಗೆಳೆಯರು. ಪ್ರವೀಣನಿಗೆ ಒಟ್ಟು ಮೂವತ್ತಮೂರು ಯುನಿಟ್ ರಕ್ತ ನೀಡಲಾಗಿತ್ತು. ಅದರಲ್ಲಿ ಇಪ್ಪತ್ತೆಂಟು ಯುನಿಟ್ ರಕ್ತವನ್ನು ಮುಸ್ಲಿಂ ಹುಡುಗರು ನೀಡಿದ್ದರು. ಆತ ಆಸ್ಪತ್ರೆಯಲ್ಲಿದ್ದಾಗ ಆತನೊಂದಿಗೆ ರಾತ್ರಿ ಹೊತ್ತು ಆತನ ಮನೆಯವರಿಗಿಂತ ಮುಸ್ಲಿಂ ಹುಡುಗರೇ ತಂಗಿದ್ದರು.ಆತನ ಚಿಕಿತ್ಸೆಗಾಗಿ ಮುಸ್ಲಿಮ್ ಹುಡುಗರು ಚಂದಾ ಎತ್ತಿ ಬಹಳಷ್ಟು ದುಡ್ಡು ಹೊಂದಿಸಿದ್ದರು. ಕೊನೆಗೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ.

೫. ನನ್ನ ಊರಿನ ಪೆರ್ಣ ಮುಗುಳಿತ್ತಾಯ ಪರಿವಾರ ದೈವಗಳ ವಾರ್ಷಿಕ ನೇಮಕ್ಕೆ ಊರಿನ ಮುಸ್ಲಿಂ ಕೃಷಿಕರು ತಮ್ಮ ಹಿರಿಯರು ತಲೆತಲಾಂತರಗಳಿಂದ ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ಸಿಯಾಳ, ವೀಳ್ಯದೆಲೆ, ಅಡಿಕೆ ಹಿಂಗಾರ ಇತ್ಯಾದಿಗಳನ್ನು ಕಾಣಿಕೆಯಾಗಿ ನೀಡುತ್ತಿದ್ದರು.

೬. ನನ್ನ ಗ್ರಾಮದಲ್ಲಿ ಮೊಸರುಕುಡಿಕೆ ಹಬ್ಬವನ್ನು ನಾಡಹಬ್ಬದಂತೆ ೧೯೯೮ ರ ವರೆಗೆ ಆಚರಿಸಲಾಗುತ್ತಿತ್ತು. ಅದರ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಮಸೀದಿಯ ವಾಣಿಜ್ಯ ಕಟ್ಟಡದಲ್ಲೇ ನಿರ್ಮಿಸಲಾಗುತ್ತಿತ್ತು. ಹಬ್ಬದ ತಯಾರಿ, ಮತ್ತಿತರ ಕೆಲಸದಲ್ಲಿ ಮುಸ್ಲಿಂ ಯುವಕರು ಹುರುಪಿನಿಂದ ಭಾಗವಹಿಸುತ್ತಿದ್ದರು.

೭.೨೦೦೬ ರ ಮಂಗಳೂರು ಕೋಮುಗಲಭೆಯ ಕಾಲ. ಮುಸ್ಲಿಮರಿಗೆ ಪವಿತ್ರ ರಮಝಾನ್ ಉಪವಾಸದ ಕಾಲ.ಗಲಭೆ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿತ್ತು. ಮಸೀದಿಯ ಬಾವಿಯಿಂದ ನೀರೆತ್ತುವ ಮೋಟಾರು ಪಂಪು ಏಕಾಏಕಿ ಕೆಟ್ಟು ಹೋಗಿತ್ತು. ಮಸೀದಿಯಲ್ಲಿ ನಮಾಝಿಗೆ ವುಝೂ (ಅಂಗಸ್ನಾನ) ಮಾಡಲು ನೀರು ತುಂಬಿಸುವ ತೊಟ್ಟಿಯೂ ಬತ್ತಿ ಹೋಗಿತ್ತು.ನೀರು ಸೇದೋಣವೆಂದರೆ ನೀರು ಪಾತಾಳದಲ್ಲಿತ್ತು.ನಾಲ್ಕು ಸಾವಿರ ಲೀಟರ್ ನೀರು ತುಂಬಿಸುವ ತೊಟ್ಟಿಯನ್ನು ತುಂಬಿಸುವುದು ಅದೂ ರಮಝಾನ್ ಉಪವಾಸ ಕಾಲದಲ್ಲಿ ಆಗುವ ಮಾತಲ್ಲ. ಮರುದಿನ ಶುಕ್ರವಾರ. ಅಂಗಸ್ನಾನಕ್ಕೆ ನೀರಿಲ್ಲ ಎಂದು ಮಸೀದಿ ಆಡಳಿತ ಸಮಿತಿಯವರು ಚಿಂತಾಕ್ರಾಂತರಾಗಿದ್ದ‌ ಸುದ್ಧಿ ಮಸೀದಿಯ ಪಕ್ಕದಲ್ಲೇ ಮನೆಯಿರುವ ಉಮೇಶಣ್ಣನಿಗೆ ತಿಳಿಯಿತು. ಉಮೇಶಣ್ಣ ಯಾರ ವಿನಂತಿ ಕೋರಿಕೆಗೂ ಕಾಯದೇ ಸ್ವತಃ ತನ್ನ ಮನೆಯ ವಿದ್ಯುತ್ ಉಪಯೋಗಿಸಿ ತನ್ನ ಕೊಳವೆ ಬಾವಿಯಿಂದ ನೀರೆತ್ತಿ ಮಸೀದಿಯ ತೊಟ್ಟಿ ತುಂಬಿಸಿದರು.

೮.ಪಜೀರು ರಹ್ಮಾನಿಯಾ ಜುಮಾ ಮಸೀದಿಯ ಪುನರ್ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ನೀರಿನ ಅಭಾವದಿಂದ ಕೆಲಸ ನಿಲ್ಲಿಸದೇ ನಿರ್ವಾಹವಿರಲಿಲ್ಲ. ಕೆಲಸ ಸ್ಥಗಿತಗೊಳಿಸಿದ ಸುದ್ಧಿ ಮಸೀದಿ ಪಕ್ಕವೇ ಮನೆಯಿರುವ ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಬಾಲಕೃಷ್ಣ ರಾವ್ ಅವರಿಗೆ ತಲುಪಿತು. ಅವರು ಮತ್ತು ಉಮೇಶಣ್ಣ ಮಸೀದಿ ಆಡಳಿತ ಸಮಿತಿಯವರನ್ನು ಸಂಪರ್ಕಿಸಿ ಕೆಲಸ ಮುಂದುವರೆಸಲು ಸೂಚಿಸಿದರು.ಕಾಮಗಾರಿ ಮುಗಿಯುವವರೆಗೂ ಇವರಿಬ್ಬರು ತಂತಮ್ಮ ಕೊಳವೆ ಬಾವಿಯಿಂದ ನೀರು ಒದಗಿಸಿದರು.

೯. ೩೦೦೬ ರ ಕೋಮುಗಲಭೆಯಿಂದ ಮಂಗಳೂರು ನಗರ ಹೊತ್ತಿ ಉರಿಯುತ್ತಿತ್ತು. ಮಂಗಳೂರಿನ ಜಪ್ಪು ಮುಹ್ಯುದ್ದೀನ್ ಜುಮಾ ಮಸೀದಿಗೆ ದಾಳಿ ಮಾಡಲು ದುಷ್ಕರ್ಮಿಗಳು ಶಸ್ತ್ರ ಸಜ್ಜಿತರಾಗಿ ಬಂದಿದ್ದರು. ಮಸೀದಿಯಲ್ಲಿ ಇಮಾಮ್ ಮತ್ತು ಇನ್ನೋರ್ವ ಮೌಲವಿ ಮಾತ್ರ ಇದ್ದರು. ಇಮಾಮರು ತಡಮಾಡದೇ ಪಕ್ಕದ ಆದಿಮಾಯೆ ಕ್ಷೇತ್ರದ ಧರ್ಮದರ್ಶಿ ದಯಾನಂದರಿಗೆ ಫೋನಾಯಿಸಿದರು. ಮಧ್ಯರಾತ್ರಿಯಾದರೂ ಒಂದಿನಿತೂ ತಡಮಾಡದೇ ದಯಾನಂದರು ಮಸೀದಿಯತ್ತ ಓಡೋಡಿ ಬಂದರು. ಇನ್ನೇನು ದುಷ್ಕರ್ಮಿಗಳು ದಾಳಿ ಮಾಡಬೇಕೆನ್ನುವಷ್ಟರಲ್ಲಿ ಮಸೀದಿ ತಲಪಿದ ದಯಾನಂದರು ದಾಳಿಕೋರರರಿಗೆ ಅಡ್ಡಲಾಗಿ ನಿಂತು ” ನೀವು ಮಸೀದಿಗೆ ದಾಳಿ ಮಾಡಬೇಕೆಂದಿದ್ದರೆ ಮೊದಲು ನಮ್ಮ ಕ್ಷೇತ್ರಕ್ಕೆ ದಾಳಿ ಮಾಡಿ ಎಂದು ಅಬ್ಬರಿಸಿದರು. ದುಷ್ಕರ್ಮಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದರು.

೧೦.ನನ್ನ ಪಕ್ಕದ ಮನೆಯ ಉರ್ಬಾನ್ ಎಂಬ ಕ್ರೈಸ್ತ ಸಹೋದರ ಬೆಳೆದ ಮಲ್ಲಿಗೆ ಹೂವನ್ನು  ಮುಸ್ಲಿಮನಾದ ನಾನು ಕಳೆದ ಮೂರು ವರ್ಷಗಳಿಂದ ನನ್ನ ಪಾಲಿಕ್ಲಿನಿಕ್ ಪಕ್ಕ ಹೂವಿನ ವ್ಯಾಪಾರ ಮಾಡುವ ರಾಜೇಶನಿಗೆ ಪ್ರತಿನಿತ್ಯ ತಲುಪಿಸುತ್ತೇನೆ.ನಾನು ಈ ಕೆಲಸವನ್ನು ದುಡ್ಡಿಗಾಗಿಯೋ ಸೌಹಾರ್ದತೆ ಎಂಬ ಕಾರಣಕ್ಕೋ ಮಾಡುತ್ತಿಲ್ಲ.ನಾನು ಹೇಗಿದ್ದರೂ ಪ್ರತಿನಿತ್ಯ ನನ್ನ ಕಸುಬಿಗೆ ಹೋಗಬೇಕು. ಒಂದಿಷ್ಟು ಹೂವು ನನ್ನ ವಾಹನಕ್ಕೆ ಭಾರವಾಗುವುದಿಲ್ಲ.

೧೧.ಇಂದಿಗೂ ನನ್ನೂರಿನ ಹಿರಿಯ ಮಹಿಳೆ ಪ್ರೇಮಕ್ಕ ನನ್ನ ಬೈಕಿಗೆ ಕೈ ತೋರಿಸಿ ಡ್ರಾಪ್ ಕೇಳುವುದಿದೆ. ಮಗಾ ಎಂದು ತುಳುವಿನಲ್ಲಿ ಕರೆಯುವ ಅವರಿಗೆ ಬೈಕಲ್ಲಿ ಡ್ರಾಪ್ ಕೊಡುವುದನ್ನು ನೋಡಿ ನಾನು ಮುಸ್ಲಿಂ ಅವರು ಹಿಂದೂ ಎಂದು ಯಾರೂ ತಗಾದೆ ತೆಗೆದದ್ದಿಲ್ಲ. ನನಗೆ ಅವರನ್ನು ಬೈಕಿನ ಹಿಂಬದಿ ಸೀಟಲ್ಲಿ ಕುಳ್ಳಿರಿಸಿ ಕೊಂಡೊಯ್ಯುವಾಗ ನಾನೋರ್ವ ಹಿಂದೂ ಮಹಿಳೆಯನ್ನು ಬೈಕಲ್ಲಿ ಕೂರಿಸಿ ಕೊಂಡೊಯ್ಯುತ್ತಿರುವೆ ಎಂದು ಯಾವತ್ತೂ ಅನ್ನಿಸಿದ್ದಿಲ್ಲ.

೧೨. ಇಂದಿಗೂ ನನ್ನ ಪಾಲಿಕ್ಲಿನಿಕಿಗೆ ಹಿಂದೂ ರೋಗಿಗಳನ್ನು ಅವರ ಓರಗೆಯ ಮುಸ್ಲಿಮರು, ಮುಸ್ಲಿಂ ರೋಗಿಗಳನ್ನು ಅವರ ಓರಗೆಯ ಹಿಂದೂಗಳು ಕರೆತರುವುದಿದೆ. ಹಿಂದೂ ವೃದ್ಧ ವೃದ್ಧೆಯರನ್ನು ಮುಸ್ಲಿಂ ಆಟೋ ಚಾಲಕರು, ಮುಸ್ಲಿಂ ವೃದ್ಧ ವೃದ್ಧೆಯರನ್ನು ಹಿಂದೂ ಆಟೋ ಚಾಲಕರು ಎತ್ತಿಕೊಂಡು ಬಂದ ಎಷ್ಟೋ ಘಟನೆಗಳನ್ನು ಕಂಡಾಗ ನನ್ನ ಹೃದಯ ತುಂಬಿ ನನಗರಿವಿಲ್ಲದೇ ಕಣ್ಣೀರು ಇಳಿಯುವುದಿದೆ.

೧೩. ಹಿಂದೂ ಹಿರಿಯರನ್ನು ಮುಸ್ಲಿಮ್ ಯುವಕರು, ಮುಸ್ಲಿಂ ಹಿರಿಯರನ್ನು ಹಿಂದೂ ಯುವಕರು ವಾಹನ ನಿಭಿಡ ರಸ್ತೆ ದಾಟಿಸುವುದನ್ನು ನಾನು ಅದೆಷ್ಟೋ ಬಾರಿ ನೋಡಿದ್ದೇನೆ. ಆಗೆಲ್ಲಾ ಇದು ನನ್ನ ಭಾರತ ಎಂದು ನಾನು ಮನದೊಳಗೆ ಸಂಭ್ರಮಿಸುವುದಿದೆ.

೧೪.ಬೇಕಿದ್ದರೆ ಮಂಗಳೂರಿನ ಯಾವುದಾದರೂ ಹೆಣ್ಮಕ್ಕಳ ಕಾಲೇಜಿನ ಬಳಿ ಸಂಜೆ ಕಾಲೇಜು ಬಿಡುವ ವೇಳೆ ಒಂದು ಹತ್ತು ನಿಮಿಷಗಳ ಕಾಲ ನಿಂತು ವೀಕ್ಷಿಸಿ. ಬುರ್ಖಾಧಾರಿ ವಿದ್ಯಾರ್ಥಿನಿಯರು ಮತ್ತು ಹಣೆಯಲ್ಲಿ ಬಿಂದಿಯಿಟ್ಟ ಹೆಣ್ಮಕ್ಕಳು ಕೈ ಕೈ ಹಿಡಿದು ನಡೆದಾಡುವುದು ಕಾಣಬಹುದು.

೧೫. ನೀವು ಮಂಗಳೂರಿನ ಯಾವುದೇ ಆಸ್ಪತ್ರೆಯ ಬ್ಲಡ್ ಬ್ಯಾಂಕಿಗೆ ಹೋಗಿ ಸುಮ್ಮನೆ ವಿಚಾರಿಸಿ ನೋಡಿ. “ಇಲ್ಲಿ ಅತೀ ಹೆಚ್ಚು ರಕ್ತದಾನ ಮಾಡುವವರು ಯಾವ ಸಮುದಾಯದವರೆಂದು…

ನಿಮಗೆ ಸಿಗುವ ಉತ್ತರ ಮುಸ್ಲಿಮರು ಎಂದಾಗಿರುತ್ತದೆ.

ಮುಸ್ಲಿಮರಲ್ಲಿರುವ ಎಸ್ಸೆಸ್ಸೆಫ್, ಎಸ್ಕೆ ಎಸ್ಸೆಸ್ಸೆಫ್, ಪಿ.ಎಫ್.ಐ,ಜಮಾಅತೇ ಇಸ್ಲಾಮೀ ಹಿಂದ್ ಮುಂತಾದ ಸಂಘಟನೆಗಳಲ್ಲಿ ಅನೇಕೆಡೆ ರಕ್ತದಾನಿಗಳದ್ದೇ ಒಂದು ತಂಡವಿದೆ. ನನಗೆ ತಿಳಿದ ಪ್ರಕಾರ ಈ ವರೆಗೆ ಯಾರೂ ಜಾತಿ, ಧರ್ಮ ನೋಡಿ ರಕ್ತದಾನ ಮಾಡಿದ್ದಿಲ್ಲ. ಯಾಕೆಂದರೆ ಪವಿತ್ರ ಖುರಾನಿನ ಬೋಧನೆ ಹೀಗಿದೆ. ” ಒಬ್ಬಾತ ಅನ್ಯಾಯವಾಗಿ ಒಬ್ಬ ವ್ಯಕ್ತಿಯನ್ನು ವಧಿಸಿದರೆ ಆತ ಸಂಪೂರ್ಣ ಮನುಕುಲವನ್ನು ವಧಿಸಿದಂತೆ, ಒಬ್ಬ ವ್ಯಕ್ತಿಯ ಪ್ರಾಣ ಉಳಿಸಿದರೆ ಸಂಪೂರ್ಣ ಮನುಕುಲದ ಪ್ರಾಣ ಉಳಿಸಿದಂತೆ”. ಆದುದರಿಂದ ಮುಸ್ಲಿಮರಿಗೆ ರಕ್ತದಾನ ಮಾಡುವುದು ಒಂದು ಪುಣ್ಯಕಾರ್ಯ.

೧೬.ಹಾವಿನ ಮೇಲೆ ತಮ್ಮ ನೆರಳು ಬಿದ್ದರೆ ಅಥವಾ ಆಕಸ್ಮಾತ್ತಾಗಿ ಹಾವು ತುಳಿದರೆ ಅದರಿಂದ ಅಪಾಯವಿದೆ ಎಂದು ಮುಗ್ಧವಾಗಿ ನಂಬುವ ಹಿಂದೂಗಳು ಮತ್ತು ಮುಸ್ಲಿಮರು ಮಸೀದಿಯ ಗುರುಗಳಲ್ಲಿ ಅಕ್ಕಿ ಮಂತ್ರಿಸಿ ಕೊಂಡು ಹೋಗಿ ತಮ್ಮ ಮನೆಯ ಸುತ್ತ ಹಾಕುತ್ತಾರೆ. ಅದಕ್ಕಾಗಿ ಹಿಂದೂಗಳು ಯಾವುದೇ ಹಿಂದೂ ಪುರೋಹಿತರ ಬಳಿ ಹೋಗುವ ಕ್ರಮ ತೀರಾ ಕಡಿಮೆ.ಇಂದಿಗೂ ನಮ್ಮ ಹಳ್ಳಿಗಳಲ್ಲಿ‌ ಮಸೀದಿಯ ಗುರುಗಳ ಬಳಿ ಅಕ್ಕಿ ಮಂತ್ರಿಸುವವರು ಎರಡೂ ಸಮುದಾಯದಲ್ಲಿದ್ದಾರೆ.

೧೭.ಮಂಗಳೂರಿನ ಸೈದಾನಿ ಬೀವಿ ದರ್ಗಾದ ಬಳಿ ಮುಂಜಾನೆಯ ಹೊತ್ತು ಸುಮ್ಮನೇ ಒಂದರ್ಧ ಗಂಟೆ ನಿಂತು ನೋಡಿ.ಅದೆಷ್ಟೋ ಬಸ್ ಕಂಡಕ್ಟರ್ ಗಳು ದರ್ಗಾದ ಹರಕೆ ಡಬ್ಬಿಗೆ ಹರಕೆ ಹಾಕುವುದು ಕಾಣಬಹುದು.

೧೮. ನಮ್ಮ ಮಂಗಳೂರಿನ ಪಕ್ಕದ ಕೇರಳ ಕರ್ನಾಟಕದ ಗಡಿಭಾಗದಲ್ಲಿರುವ “ಉದ್ಯಾವರ ಮಾಡ” ದೈವಸ್ಥಾನದ ವಾರ್ಷಿಕ ಜಾತ್ರೆಯ ಮೊದಲ ಆಮಂತ್ರಣ ಉದ್ಯಾವರ ಜುಮಾ ಮಸೀದಿಗೆ ಶುಕ್ರವಾರ ಜಮಾ ನಮಾಝಿನ ಬಳಿಕ ಬಂದು ನೀಡುವ ತಲೆತಲಾಂತರದಿಂದ ಬಂದ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

೧೯. ತಮ್ಮ ಮಕ್ಕಳಿಗೆ, ಜಾನುವಾರುಗಳಿಗೆ ಖಾಯಿಲೆ ಕಸಾಲೆ ಬಾಧಿಸಿದಾಗ ಮಸೀದಿಯ ಉಸ್ತಾದರುಗಳಿಂದ ನೂಲು ನೀರು ಮಂತ್ರಿಸಿ ಕೊಂಡೊಯ್ಯುವ ಹಿಂದೂ ಮಂದಿ ಇಂದಿಗೂ ನಮ್ಮ ಹಳ್ಳಿಗಳಲ್ಲಿದ್ದಾರೆ.

೨೦. ಶುಕ್ರವಾರ ಅದೆಷ್ಟೋ ಮಸೀದಿಗಳ ಗೇಟಿನ ಬಳಿ ಸಹಾಯ ಯಾಚಿಸುವ ಹಿಂದೂಗಳನ್ನು ನಾವು ಕಾಣಲು ಸಾಧ್ಯ. ಈ ವರೆಗೆ ಯಾವುದೇ ಮಸೀದಿಯ ವಠಾರದಲ್ಲಿ ಸಹಾಯ ಯಾಚಿಸಬಾರದೆಂದು ಮುಸ್ಲಿಮೇತರರಿಗೆ‌ ಅವಕಾಶ ನಿರಾಕರಿಸಿದ ಒಂದೇ ಒಂದು ನಿದರ್ಶನ ಕಾಣ ಸಿಗಲಾರದು.ಸಹಾಯ ಮಾಡುವವರ್ಯಾರೂ ಅವರ ಜಾತಿ ಧರ್ಮ ನೋಡಿ ಸಹಾಯ ನೀಡಿದ್ದು ನಾನರಿಯೆ.

ಎಲ್ಲವೂ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ…

ಇವ್ಯಾವುವನ್ನೂ ಇವರ್ಯಾರೂ ಸೆಕ್ಯುಲರ್ ಸಿದ್ಧಾಂತದ ಆಧಾರದಲ್ಲಿ ಮಾಡಿದ್ದಲ್ಲ. ಇವರೆಲ್ಲರಿಗೂ ಸಹಜವಾಗಿ ಹೇಗೆ ಬದುಕಬೇಕೆಂದು ಗೊತ್ತಿದೆ. ಆದರೆ ಎಲ್ಲರಿಗೂ ಜಾತ್ಯಾತೀತ ಸಿದ್ಧಾಂತ ಗೊತ್ತಿಲ್ಲ. ಬದುಕು ಸಹಜವಾದು ದು, ಸಿದ್ಧಾಂತ ಕಲಿತು ಒಪ್ಪಿಕೊಳ್ಳುವಂತಹದ್ದು. ಒಟ್ಟಿನಲ್ಲಿ ನಾನು ಈ ಮೇಲೆ ಉಲ್ಲೇಖಿಸಿರುವ ಪ್ರಸಂಗಗಳು ಬದುಕಿನ ಯಾತ್ರೆಯಲ್ಲಿ ಈ ಜನಕ್ಕೆ ಪ್ರತಿನಿತ್ಯದ ಚರ್ಯೆಗಳಷ್ಟೆ.ಇದು ನಿಜವಾದ ಭಾರತ.ಈ ದೇಶದ ಮಣ್ಣಿಗೆ ಅಂತಹ ವಿಶೇಷ ಗುಣವಿದೆ. ಅದು ಎಲ್ಲರನ್ನೂ ಪೊರೆಯುತ್ತದೆ.ಬಹುಶಃ ಭಾರತದಲ್ಲಿರುವಷ್ಟು ಧರ್ಮ ಜಾತಿ ಪಂಗಡಗಳು ಜಗತ್ತಿನಲ್ಲಿ ಎಲ್ಲೂ ಇಲ್ಲ.

ನೀವು ಪ್ರಶ್ನಿಸಬಹುದು ” ಹಿಂದಿನವರು ಜಗಳಾಡಲಿಲ್ಲವೇ…?” ಖಂಡಿತ ಹೊಡೆದಾಡಿದ್ದಾರೆ.. ಜಗಳ ಇಂದು ನಿನ್ನೆಯದಲ್ಲ, ಎಲ್ಲಾ ಜೀವಿಗಳೂ ತಮ್ಮ ಸಹ ಜೀವಿಗಳೊಡನೆ ಜಗಳಾಡುತ್ತವೆ. ಅವು ಭೂಮಿಯಲ್ಲಿ ಜೀವಜಾಲದ ಉಗಮ ಕಾಲದಿಂದಲೇ ಪ್ರಾರಂಭವಾಗಿದೆ.

ಹಿಂದೆ ಗೋಪಾಲ ಮತ್ತು ಗಫೂರನ ನಡುವಿನ ಜಗಳ ಅವರದ್ದೇ ಜಗಳಗಳಾಗಿ ಉಳಿಯುತ್ತಿತ್ತು.‌ ಅವರೀರ್ವರ ಜಾತಿ ಮತ್ತು ಧರ್ಮಕ್ಕೆ ಅವರ ಜಗಳದಲ್ಲಿ ಪಾಲಿರಲಿಲ್ಲ.

ನಾನು ಇಲ್ಲಿ ದಾಖಲಿಸಿದ ಪ್ರಸಂಗಗಳು ಹೊಸ ತಲೆಮಾರಿಗೆ ನೀತಿ ಭೋದಕ ಕಾಲ್ಪನಿಕ ಕತೆಯಂತೆ ಅನಿಸಿದರೆ ಆಶ್ಚರ್ಯವಿಲ್ಲ.

ಯಾಕೆಂದರೆ ಇಂದು ಒಂದೊಂದು ಧರ್ಮ ಮತ್ತು ಜಾತಿಗಳ ಜನ ಬೇರೆ ಬೇರೆ ಗುಂಪುಗಳಾಗಿ ಧ್ರುವೀಕರಣಗೊಳ್ಳುತ್ತಿದ್ದಾರೆ. ಅಂತಹ ಪ್ರಕ್ರಿಯೆ ಪ್ರಾಥಮಿಕ ಶಾಲಾ ಹಂತದಿಂದಲೇ ಪ್ರಾರಂಭವಾಗುತ್ತದೆ. ಜಾತಿಗೊಂದು ಧರ್ಮಕ್ಕೊಂದು ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಮಕ್ಕಳನ್ನು ಎಳೆಯ ಪ್ರಾಯದಲ್ಲೇ ಧರ್ಮ ಜಾತಿಗಳ ಕೋಟೆಯೊಳಗೆ ಬಂಧಿಸಲಾಗುತ್ತದೆ. ಆ ಮಕ್ಕಳಿಗೆ ತಮ್ಮ ಸುತ್ತ ಮುತ್ತಲ ಜಗತ್ತೆಂದರೆ ತಮ್ಮ ಧರ್ಮದ ಜನ ಮಾತ್ರ.ಆ ಮಕ್ಕಳಿಗೆ ಇನ್ನೊಂದು ವಿಶ್ವಾಸದ‌ ಜನರಿದ್ದರೆ ಅವರು ಅನ್ಯರು ಎಂಬ ಭಾವನೆ ಮೂಡದಿರಲು ಹೇಗೆ ಸಾಧ್ಯ?

ನಿಜವಾದ ಸೌಹಾರ್ದತೆಗೆ ಪತ್ರಿಕೆ ಮಾಧ್ಯಮಗಳ ಪ್ರಚಾರ ಅಗತ್ಯವಿಲ್ಲ ಯಾಕೆಂದರೆ ಅವರಿಗೆ ಅದು ಕೃತಕತೆ ಅಲ್ಲ. ಗಿಲೀಟು ಸೌಹಾರ್ದತೆಯ ಅಸ್ತಿತ್ವ ಇರುವುದೇ ಮಾಧ್ಯಮಗಳಲ್ಲಿ…

ಮಸೀದಿ ಒಡೆಯಲು ಮುಂದಿನ ಸಾಲಲ್ಲಿ ನಿಂತವರು‌ ಸೌಹಾರ್ದ ಇಫ್ತಾರ್ ಮಾಡುತ್ತಾರೆ, ಅಂತೆಯೇ ಮಂದಿರಗಳಿಗೆ ಕಲ್ಲು ಹೊಡೆಸಿಯೇ ಅಧಿಕಾರದ ಗದ್ದುಗೆಯೇರಿದವನು ಸೌಹಾರ್ದತೆಯ ಪಾಠ ಮಾಡುತ್ತಾನೆ. ಸೌಹಾರ್ದತೆ ಸಹಬಾಳ್ವೆ ಸಹಜ ಜೀವನ ಕ್ರಮವಾಗಬೇಕಿದೆ. ಅದನ್ನು ಅಚ್ಚಿನೊಳಗೆ ಹಾಕಿ ತಯಾರು ಮಾಡಲು ಸಾಧ್ಯವಿಲ್ಲ. ಸಹಬಾಳ್ವೆ ಸೌಹಾರ್ದತೆ ಮಾನವೀಯತೆಯ ಇನ್ನೊಂದು ಮುಖ