ಸನ್ಮಾರ್ಗದಲ್ಲಿ ಪ್ರಕಟವಾದ ಆ ಮುಸ್ಲಿಮೇತರ ವಿದ್ಯಾರ್ಥಿನಿಯ ಫೋಟೋವನ್ನು ಸ್ಮರಿಸುತ್ತಾ…

0
1043

ಸ್ವಾಲಿಹಾ ಸಾದಿ

ಇತ್ತೀಚೆಗೆ ಪ್ರವಾದಿ ಮುಹಮ್ಮದ್(ಸ) ರ ಭಾಷಣವನ್ನು ಪ್ರಬಂಧವನ್ನು ಬರೆದು ಬಹುಮಾನವನ್ನು ಗಿಟ್ಟಿಸಿಕೊಂಡ ಮುಸ್ಲಿಮೇತರ ವಿದ್ಯಾರ್ಥಿಗಳ ಫೋಟೋವನ್ನು”ಸನ್ಮಾರ್ಗ” ದಲ್ಲಿ ನೋಡಿದಾಗ 9ನೇ ತರಗತಿಯಲ್ಲಿ ಕಲಿತಂತಹ ಸಮಾಜ ಪಠ್ಯ ಪುಸ್ತಕವನ್ನು ನೆನಪಿಸುವಂತಾಯಿತು. ಅದರ ಒಂದು ಪಾಠದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅಲ್ಪ-ಸ್ವಲ್ಪ ಕಲಿಯುವುದರ ಜೊತೆಗೆ ಪ್ರವಾದಿ ಮುಹಮ್ಮದ್ ಇಸ್ಲಾಂ ಧರ್ಮದ ಸಂಸ್ಥಾಪಕರು ಎಂದು ಬರೆದಿತ್ತು. ಜೊತೆಗೆ ಕಲಿಯುತ್ತಿದ್ದ ಮುಸ್ಲಿಮೇತರ ಸಹಪಾಠಿಗಳ ಜೊತೆ ಮೊಹಮ್ಮದರು ಪ್ರವಾದಿಗಳು, ಇಸ್ಲಾಂ ಧರ್ಮದ ಸ್ಥಾಪಕರಲ್ಲ ಎಂದು ನಾವು ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಹೇಳಿ ಕೊಟ್ಟಿದ್ದೆವು. ಅಲ್ಲಾಹನ ಮತ್ತು ಪ್ರವಾದಿಗಳ ಬಗ್ಗೆ ಅಂದು ಅವರ ಸಣ್ಣ ಮನಸ್ಸಿನ ಸಣ್ಣ ಪ್ರಶ್ನೆಗಳಿಗೆ 9ನೇ ತರಗತಿಗೆ ಸೀಮಿತವಾಗಿದ್ದ ನಮ್ಮ ಸಣ್ಣ ಜ್ಞಾನದೊಂದಿಗೆ ಅವರ ಸಂಶಯವನ್ನು ನಿವಾರಿಸುತ್ತಿದೆವು.

ಸರಿಯಾದ ಅವಲೋಕನವಿಲ್ಲದೆ, ತಿದ್ದುಪಡಿಗಳಿಲ್ಲದೆ ತಯಾರಿಸಲ್ಪಡುವ ಪಠ್ಯಪುಸ್ತಕಗಳಿಂದ ತಪ್ಪನ್ನು ಕಲಿಯಬೇಕಾಗುತ್ತದೆ. ಪರಸ್ಪರ ಧರ್ಮವನ್ನು ಸರಿಯಾಗಿ ತಿಳಿದು ಗೌರವಿಸುವುದನ್ನು ಶಾಲಾ ದಿನಗಳಲ್ಲೇ ಕಲಿಯಬೇಕಾದುದು ಅಗತ್ಯವಾಗಿದೆ. ಇಸ್ಲಾಂ ಧರ್ಮದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ,ಅದೇ ರೀತಿ ಪ್ರವಾದಿ ಮುಹಮ್ಮದ್(ಸ) ರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಬಾಂಧವರಿಗೆ ಪರಿಚಯಿಸುವ ಕೆಲಸವನ್ನು ಹಿಂದಿನಿಂದಲೂ ಜಮಾಅತೆ ಇಸ್ಲಾಮೀ ಹಿಂದ್ ನಡೆಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಪ್ರವಾದಿ ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ವ್ಯಕ್ತಿತ್ವದ ಬಗ್ಗೆ ತರಗತಿಗಳನ್ನು ,ಭಾಷಣ ಪ್ರಬಂಧ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಾಪಕರಿಗೆ ನಡೆಸುತ್ತಾ ಬರುತ್ತಿದೆ.

ನವೆಂಬರ್ ತಿಂಗಳಲ್ಲಿ ನಡೆದ ” ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ” ಸೀರತ್ ಅಭಿಯಾನದ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಸನ್ಮಾರ್ಗದಲ್ಲಿ ನೋಡಿದಾಗ , ಇಸ್ಲಾಂ ಧರ್ಮದ ಬಗ್ಗೆ ಪ್ರವಾದಿ ವ್ಯಕ್ತಿತ್ವದ ಬಗ್ಗೆ ಮಾತನಾಡಿ ಬಹುಮಾನವನ್ನು ಗಿಟ್ಟಿಸಿಕೊಂಡ ಮುಸ್ಲಿಮೇತರ ಹುಡುಗಿಯೊಬ್ಬಳು ಬಹುಮಾನವನ್ನು ಸ್ವೀಕರಿಸುವ ಫೋಟೋವನ್ನು ನೋಡಿದಾಗ ಖಂಡಿತವಾಗಿಯೂ ಬಹಳ ಸಂತೋಷವಾಗುತ್ತದೆ.

ಶಾಲಾ ಕಾಲೇಜು ದಿನಗಳಲ್ಲಿ ಸಿಕ್ಕಂತಹ ಉತ್ತಮ ಪಾಠ ಸಂಸ್ಕೃತಿ ,ಪ್ರೀತಿಯ ಗೆಳೆಯ/ ಗೆಳತಿಯರು ,ನೆಚ್ಚಿನ ಅಧ್ಯಾಪಕರು ಅಧ್ಯಾಪಕಿಯರು ಎಲ್ಲರೂ ಜೀವನದುದ್ದಕ್ಕೂ ನಮ್ಮಲ್ಲಿ ಪ್ರಭಾವ ಬೀರುತ್ತ ಸಾಗುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಮನೆಯ ಉತ್ತಮ ವಾತಾವರಣ ಸಮಾಜಕ್ಕೆ ಒಬ್ಬ ಉತ್ತಮ ವ್ಯಕ್ತಿಯನ್ನು ನೀಡುತ್ತದೆ. ಪ್ರೈಮರಿ ಹೈಸ್ಕೂಲುಗಳಲ್ಲಿ ಆಗಲಿ ನಂತರ ಕಲಿತ ದಿನಗಳಲ್ಲಾದರೂ ಗೆಳೆಯ ಗೆಳತಿಯರನ್ನು ಹೊಂದುವಾಗ ಯಾರು ಸ್ವಧರ್ಮೀಯರ ನ್ನು ಹುಡುಕಿಕೊಂಡು ಹೋಗುವುದಿಲ್ಲ. ಕ್ರಿಸ್ಮಸ್ ನ ಕೇಕನ್ನು, ದೀಪಾವಳಿಗೆ ಗೆಳತಿಯರು ತರುವ ಲಡ್ಡು ಹೋಳಿಗೆಯನ್ನು ,ಪೆರ್ನಾಲ್ ನ ಬಿರಿಯಾನಿ ಯನ್ನು ಹಂಚಿ ತಿಂದದ್ದನ್ನು ಎಳೆಯ ವಯಸ್ಸಿನಲ್ಲಿ ನೋಡಿದ್ದೇವೆಯೇ ಹೊರತು, ಆ ಧರ್ಮದ್ದು ನನಗೆ ಬೇಡ ಎಂದದ್ದಿಲ್ಲ. ಇಬ್ಬರು ಹಣೆಗೆ ಬಿಂದಿ ಹಾಕಿದ ಹೆಣ್ಣು ಮಕ್ಕಳ ಮಧ್ಯೆ ಇಬ್ಬರು ತಲೆಗೆ ಶಾಲು ಹಾಕಿದ ಹೆಣ್ಣು ಮಕ್ಕಳು ಅನ್ಯೋನ್ಯವಾಗಿ ಕಲಿಯುತ್ತಿದ್ದ ಸಮಯದಲ್ಲಿ ಒಂದು ಧರ್ಮವನ್ನು ಇನ್ನೊಂದು ಧರ್ಮವು ಹಿಯಾಳಿಸಿದ್ದನ್ನು ಕಂಡಿಲ್ಲ. ಮುಸ್ಲಿಂ ಅಧ್ಯಾಪಕರು ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುವಾಗ, ಹಿಂದು ಅಧ್ಯಾಪಕರು ಹೈದರಲಿ ಟಿಪ್ಪು ಸುಲ್ತಾನರ ವೀರ ಶೂರ ಪರಾಕ್ರಮಗಳನ್ನು ವಿವರಿಸುವಾಗ ಇವರೆಲ್ಲ ಧರ್ಮ ನಿಂದಕರೆಂದೋ, ದೇಶದ್ರೋಹಿಗಳೆಂದೋ ಎಲ್ಲೂ ಕಲಿಸಿಲ್ಲ.

ಬಾಲ್ಯದಲ್ಲಿ ಕೇವಲ ಒಂದೇ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತದ ಕಥೆಗಳನ್ನು ನೋಡಲು ಆ ಸಮಯಕ್ಕಾಗಿ ಮುಸ್ಲಿಂ ಮಕ್ಕಳೆಲ್ಲರೂ ಯಾವ ರೀತಿ ಕಾಯುತ್ತಿದ್ದರೋ, ಅದೇ ರೀತಿ ಟಿಪ್ಪುಸುಲ್ತಾನನ ಧಾರಾವಾಹಿಯನ್ನು ಅಷ್ಟೇ ಉತ್ಸಾಹದಿಂದಲೇ ಇತರ ಧರ್ಮದ ಮಕ್ಕಳು ನೋಡುತ್ತಿದ್ದರು. ಟಿಪ್ಪು ಸುಲ್ತಾನ್ ಧಾರವಾಹಿ ಪ್ರಾರಂಭವಾಗುವಾಗ ಬರುವ ಆ ಸುಂದರ ಕಹಳೆಯ ಸಂಗೀತದ ಇಂಪು ಇಂದಿಗೂ ಎಲ್ಲರ ಕಿವಿಯಲ್ಲೂ ಗುಯಿಂಗುಟ್ಟು ತ್ತಿರ ಬಹುದು. ಮಿಮಿಕ್ರಿ ಗಳಲ್ಲೂ ಶಾಲಾ ನಾಟಕಗಳಲ್ಲೂ ಅದೇ ಸಂಗೀತವನ್ನು ಎಷ್ಟೋ ಬಾರಿ ಬಳಸಿದ್ದು ಇದೆ. ನಾಡಿಗಾಗಿ ಎಲ್ಲವನ್ನೂ ಅರ್ಪಿಸಿದ ಟಿಪ್ಪುವಿನಂತಹ ಶ್ರೇಷ್ಠ ವ್ಯಕ್ತಿತ್ವ ವನ್ನು ಕೇವಲ ಧರ್ಮದ ಹೆಸರಿನಲ್ಲಿ ದೇಶದ್ರೋಹಿಯನ್ನಾಗಿಸುವ, ದೇವರನ್ನು, ಪ್ರವಾದಿಗಳನ್ನು ನಿಂದಿಸುವ, ದೇವರು ದೇವತೆಗಳನ್ನು ವ್ಯಂಗ್ಯವಾಗಿಸುವ, ಯೇಸುವಿನ ಪ್ರತಿಮೆಯನ್ನು ಪುಡಿಗಟ್ಟುವವರೇ ಸಮಾಜಘಾತುಕರು,. ನಿಜವಾದ ದೇಶದ್ರೋಹಿಗಳು.

ಇತರರನ್ನು ಗೌರವದಿಂದ ಪ್ರೀತಿಯಿಂದ ಕಾಣುವ, ಸೌಹಾರ್ದತೆಯಿಂದ ಬೆರೆಯುವ ವ್ಯಕ್ತಿಗೆ ಸಮಾಜದಿಂದ ಗೌರವ ಸಿಗುತ್ತದೆ. ಇತರ ಧರ್ಮವನ್ನು ಧರ್ಮದ ಶ್ರೇಷ್ಟ ವ್ಯಕ್ತಿತ್ವವನ್ನು ಒಂದು ಸಮುದಾಯವನ್ನು ನಿಂದಿಸುವವರು ನಂತರ ತಾವೇ ಎಲ್ಲರಿಂದಲೂ ನಿಂದನೆಗೆ ಒಳಗಾಗುತ್ತಾರೆ.