ನನ್ನನ್ನು ಬದಲಿಸಿದ ಮಗು

0
1437

ನನ್ನ ಪತ್ನಿ ಮೊದಲನೆಯ ಮಗನಿಗೆ ಜನ್ಮ ನೀಡಿದಾಗ ನನ್ನ ವಯಸ್ಸು ಇನ್ನೂ 30 ತುಂಬಿರಲಿಲ್ಲ. ಆ ರಾತ್ರಿ ನನಗೆ ಇಂದಿಗೂ ನೆನಪಿದೆ. ನಡು ರಾತ್ರಿಯ ವರೆಗೂ ನಾನು ನನ್ನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ತುಂಬಾ ಚೆನ್ನಾಗಿ ಮಿಮಿಕ್ರಿ ಮಾಡುತ್ತಿದ್ದ ನನಗೆ ಅವರನ್ನು ನಗಿಸುವುದೇ ಹವ್ಯಾಸವಾಗಿ ಹೋಗಿತ್ತು. ಒಬ್ಬ ವ್ಯಕ್ತಿಯ ಧ್ವನಿಯಂತೆ ನನ್ನ ಧ್ವನಿಯು ಪ್ರತಿಫಲಿಸುವ ವರೆಗೂ ನಾನು ಅನುಕರಣೆ ಮಾಡುತ್ತಲೇ ಇದ್ದೆ. ನನ್ನ ಅನುಕರಣೆಯಿಂದ ಅಪಹಾಸ್ಯಕ್ಕೂ ಮೂದಲಿಕೆಗೂ ನನ್ನ ಸ್ನೇಹಿತರು ಸೇರಿದಂತೆ ಯಾರೂ ಬಾಕಿಯಾಗಲಿಲ್ಲ. ಜನರು ನನ್ನ ಈ ಹವ್ಯಾಸದಿಂದ ಅಮಾನಕ್ಕೊಳಗಾಗದಿರಲಿಕ್ಕಾಗಿ ದೂರ ಸರಿಯಲಾರಂಭಿಸಿದರು.

ಆ ರಾತ್ರಿ ನಾನು ಓರ್ವ ಕುರುಡ ವ್ಯಕ್ತಿಯನ್ನು ಅಪಹಾಸ್ಯಕ್ಕೀಡು ಮಾಡಿದೆ. ಆತ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಆತನನ್ನು ಅಪಹಾಸ್ಯಕ್ಕೀಡು ಮಾಡಲು ನಾನು ಕಾಲು ಅಡ್ಡವಿಟ್ಟೆ. ಆತ ಎಡವಿ ಉರುಳಿ ಬಿದ್ದನು. ಕುರುಡ ವ್ಯಕ್ತಿ ಅತ್ತಿತ್ತ ತಡಕಾಡಿ ತನ್ನ ಕೋಲನ್ನೆತ್ತಿ ಕೊಂಡನಾದರೂ ಯಾರಿಗೂ ಏನನ್ನೂ ಹೇಳದೇ ಅಲ್ಲಿಂದ ಹೊರಟು ಹೋದನು. ನಾನು ನನ್ನ ಸ್ನೇಹಿತರೆದುರು ಆತನ ಹಾವಭಾವ ಪ್ರದರ್ಶಿಸಿ ಮನೆ ಸೇರಿಕೊಂಡೆ.

ನನ್ನ ಪತ್ನಿ ಬಾಗಿಲ ಬಳಿಯೇ ನನಗಾಗಿ ಕಾಯುತ್ತಿದ್ದಳು. ಆಕೆಯ ಪರಿಸ್ಥಿತಿಯು ಹದಗೆಟ್ಟಿತ್ತು. ಆಕೆ ಬಳಲುವ ಧ್ವನಿಯಲ್ಲಿ “ರಶೀದ್, ಎಲ್ಲಿದ್ದೀರಾ?” ಎಂದು ಹೇಳುತ್ತಿರುವುದು ನನ್ನ ಕಿವಿಗೆ ಬಿತ್ತು.
“ನಾನು ಚಂದ್ರ ಲೋಕದಲ್ಲಿದ್ದೇನೆ” ಎಂದು ಹೇಳುತ್ತಾ ನಾನು ಬಾಗಿಲೆದುರು ಬಂದೆನಾದರೂ ಆಕೆಯ ಕಣ್ಣುಗಳು ಹನಿಗೂಡಿರುವುದನ್ನು ಕಂಡು ತೆಪ್ಪಗಾದೆ.
“ರಶೀದ್, ನಾನು ಅಪಾರ ನೋವನ್ನು ಅನುಭವಿಸುತ್ತಿದ್ದೇನೆ. ಹೆರಿಗೆಯಾಗುತ್ತದೆಂದು ನನಗನ್ನಿಸುತ್ತದೆ” ಎಂದು ಆಕೆ ಉಸಿರುಗಟ್ಟಿ ಅತ್ತು ಬಿಟ್ಟಳು. ಆಕೆಯ ಆ ಮೌನ ರೋಧನ ನಾನು ನನ್ನ ಪತ್ನಿಯನ್ನು ಎಷ್ಟೊಂದು ನಿರ್ಲಕ್ಷಿಸಿದ್ದೇ ನೆಂಬುದನ್ನು ಸಾಬೀತು ಪಡಿಸಿ ಬಿಟ್ಟಿತು. ಆಕೆಗೆ ಒಂಭತ್ತು ತಿಂಗಳು ಪೂರ್ತಿಯಾಗುತ್ತಾ ಬರುತ್ತಿದೆ ಎಂಬುದು ನನ್ನರಿವಿಗೆ ಬಂದಿದ್ದರೂ ಕೂಡಾ ನಾನು ಮಾತ್ರ ನನ್ನ ಗೆಳೆಯರನ್ನು ನಗಿಸುವುದರಲ್ಲೇ ಕಾಲ ಕಳೆದೆ.

************************************************
ನಾನು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆಕೆಗೆ ಪ್ರಸವ ವೇದನೆ ಅಧಿಕವಾಯಿತು. ಅವಳನ್ನು ಲೇಬರ್ ರೂಮ್‍ಗೆ ಕರೆದುಕೊಂಡು ಹೋದರು. ಆಕೆಯ ಅಳು-ಆಕ್ರಂದನಗಳನ್ನು ಕೇಳುವಾಗ ಯಾವಾಗಲಾದರೂ ಒಮ್ಮೆ ಆಕೆ ಮಗುವಿಗೆ ಜನ್ಮ ನೀಡುವಳೋ ಎಂದು ನಾನು ಕೈಹೊಸಕಿಕೊಳ್ಳುತ್ತಾ ಭಯಭೀತ ನಾಗಿ ಅತ್ತಿತ್ತ ಅಲೆಯುತ್ತಿದ್ದೆ.
ಸ್ವಲ್ಪ ಹೊತ್ತಲ್ಲೇ ನಾನು ನನ್ನ ಫೋನ್ ನಂಬರ್ ಕೊಟ್ಟು ಹತ್ತಿರದಲ್ಲೇ ಇದ್ದ ಅಂಗಡಿಗೆ ತೆರಳಿದೆ. ಕೆಲವೇ ನಿಮಿಷಗಳಲ್ಲಿ ನನ್ನ ಫೋನ್‍ಗೆ ಶುಭಸುದ್ದಿಯ ಕರೆಬಂತು.
“ನಿಮ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನೀವು ಮೊದಲು ವೈದ್ಯರನ್ನು ಭೇಟಿಯಾಗಿ ತದನಂತರ ಪತ್ನಿಯ ಬಳಿಗೆ ಬರಬೇಕೆಂದು” ಅವರು ನನಗೆ ಸೂಚನೆಕೊಟ್ಟರು.
ನನಗೆ ಹೆದರಿಕೆ ಆಯ್ತು.

“ಯಾಕೆ? ನಾನು ಮೊದಲು ನನ್ನ ಮಗ ಸಲೀಮ್‍ನನ್ನು ನೋಡಲು ಇಚ್ಛಿಸುತ್ತೇನೆ” ಎಂದು ಹೇಳಿಯೇ ಬಿಟ್ಟೆ.
“ಇಲ್ಲ, ನೀವು ಮೊದಲು ಡಾಕ್ಟರರನ್ನು ಭೇಟಿ ಮಾಡಿ” ಎಂದು ಅವರು ಹೇಳಿದರು.
ಆಣತಿಯಂತೆ ನಾನು ಡಾಕ್ಟರ್ ಬಳಿ ತೆರಳಿದೆ.

ಅವರು ಅತೀವ ದುಃಖದಲ್ಲಿದ್ದರು. ನನ್ನ ಮಗನಿಗೆ ಕಣ್ಣಿನ ಸೋಂಕು ಬಾಧಿಸಿದ್ದು ಆತನಿಗೆ ದೃಷ್ಟಿಯೇ ಇಲ್ಲವೆಂಬುದನ್ನು ತಿಳಿದು ನಾನು ದಂಗಾಗಿ ಹೋದೆ. ಸ್ವಲ್ಪ ಹೊತ್ತಿಗೆ ಮುಂಚೆ ಕುರುಡನೊಬ್ಬನಿಗೆ ಅಡ್ಡಗಾಲಿಟ್ಟು ಬೀಳಿಸಿ ಗಹಗಹಿಸಿ ನಕ್ಕ ನನಗೆ ಯಾರೋ ಅಣಕಿಸಿ ನಗುತ್ತಿದ್ದಂತೆ ಭಾಸವಾಯ್ತು. ಸುಬ್‍ಹಾನಲ್ಲಾಹ್. “ನಿಮಗೆ ನಿಮ್ಮ ಕರ್ಮದ ಪ್ರತಿಫಲ ಲಭಿಸಿಯೇ ತೀರುವುದು” ಎಂದು ಕುರ್‍ಆನಿನ ಎಚ್ಚರಿಕೆ ನನಗೆ ನೆನಪಾಯ್ತು.

ನಾನು ದುಃಖಿತನಾಗಿದ್ದೆ. ಆದರೆ ನನ್ನ ಪತ್ನಿ ಕಿಂಚಿತ್ತೂ ದುಃಖಿತಳಾಗಿರಲಿಲ್ಲ. ಆಕೆ ಅಲ್ಲಾಹನ ತೀರ್ಮಾನದ ಕುರಿತು ಅಚಲ ವಿಶ್ವಾಸ ಹೊಂದಿ ದ್ದಳು. ಆಕೆ ಯಾವಾಗಲೂ ಹಾಗೆಯೇ ಇದ್ದಳು. ನಾನು ಇತರರನ್ನು ಪರಿಹಾಸ್ಯಗೈಯ್ಯು ವುದು ಕಂಡಾಗಲೆಲ್ಲ ಆಕೆ ನನ್ನನ್ನು ಸುಧಾರಿಸಲು ಮುಂದಾಗುತ್ತಿದ್ದಳು. ಹಲವು ಬಾರಿ ನನಗೆ ಸರಿ-ತಪ್ಪುಗಳ ಮಾರ್ಗದರ್ಶನ ನೀಡಿದಳಾದರೂ ಅವಳ ಉಪದೇಶಗಳು ಯಾವೂ ನನಗೆ ನಾಟಲಿಲ್ಲ.

ಆಕೆ ನನ್ನ ಈ ಅಣಕಿಸುವಿಕೆಯನ್ನು “ಪರದೂಷಣೆ” ಎಂದೇ ಕರೆಯುತ್ತಿದ್ದಳು. ‘ಬೆನ್ನ ಹಿಂದೆ ಮೂದಲಿಸುವವರ ಸಾಲಿನಲ್ಲಿ ನಾನಿರುವೆ ನೆಂದು ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದಳು’. ಇಷ್ಟಾದರೂ ನಾನು ನನ್ನ ಅಂಧ ಪುತ್ರ ಸಲೀಮ್‍ನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ. ಸಲೀಮ್ ನಮ್ಮ ಮನೆಯಲ್ಲಿ ಇಲ್ಲವೇನೋ ಎಂಬಂತೆ ಜೀವಿಸಲು ನಾನು ತೀರ್ಮಾನಿಸಿದೆ. ಆತ ಜೋರಾಗಿ ಅಳಲಾರಂಭಿಸಿದರೆ ನಾನು ಕೋಣೆಯಿಂದ ಹೊರ ತೆರಳಿ ಹಾಲ್‍ನಲ್ಲಿ ಮಲ ಗಿದೆ. ಆದರೆ ತನ್ನ ಪತ್ನಿ ಅವನನ್ನು ಅಪಾರವಾಗಿ ಪ್ರೀತಿಸಿದಳು. ನಾನು ಅವನನ್ನು ದ್ವೇಷಿಸಲಿಲ್ಲ. ಆದರೆ ಪ್ರೀತಿಯನ್ನು ಧಾರೆ ಎರೆಯಲಾಗದ ಅಸಹಾಯಕತೆಯಲ್ಲಿ ನಾನು ಮುಳುಗಿದೆ.

ಸಲೀಮ್ ತೆವಳಲಾರಂಭಿಸಿದಾಗ ನನ್ನ ಪತ್ನಿ ಅತಿ ಸಂತೋಷದಿಂದಿದ್ದಳು. ಆತ ಎರಡು ವರ್ಷ ಪ್ರಾಯದವನಾದಾಗ ನಡೆಯಲು ಪ್ರಯತ್ನಿಸುತ್ತಿದ್ದನಾದರೂ ಹಲವು ಬಾರಿ ಬಿದ್ದು ಬಿಡುತ್ತಿದ್ದನು. ತದನಂತರ ಆತನ ಒಂದು ಕಾಲು ದುರ್ಬಲವಾಗಿರುವುದರಿಂದ ನಡೆಯಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಬಹುದೆಂಬುದು ನಮಗೆ ತಿಳಿದು ಬಂತು. ಆತ ಅಲ್ಪ ಕುಂಟ ಎಂದರಿತ ನಂತರ ನಾನು ಆತನನ್ನು ಮತ್ತಷ್ಟು ಕಡೆಗಣಿಸಿದೆ. ಆದರೆ ನನ್ನ ಪತ್ನಿ ಅವನಿಗೆ ಪ್ರೀತಿಯ ಧಾರೆ ಎರೆಯುವುದರಲ್ಲಿ ಯಾವುದೇ ಕೊರತೆಯನ್ನುಂಟು ಮಾಡಲಿಲ್ಲ. ಖಾಲಿದ್ ಮತ್ತು ಉಮರ್ ಅವಳಿ ಮಕ್ಕಳ ಜನನಾನಂತರವೂ ಆಕೆ ಅವನನ್ನು ಅಷ್ಟೇ ಪ್ರೀತಿಸಿದಳು.

ವರ್ಷಗಳು ಉರುಳಿದವು……
ನನಗಿದ್ದ ಕೆಲವು ಸ್ನೇಹಿತರೊಡನೆ ನಾನು ಕಾಲ ಕಳೆಯಲಾರಂಭಿಸಿದೆ. ಅವರಿಗೆ ಇಷ್ಟವಾದಾಗ ನಗಿಸುವ ಗೊಂಬೆಯಂತೆ ಕೆಲವೊಮ್ಮೆ ಜೋಕರ್ ನಂತೆ ನಾನು ಭಾಸವಾದೆ. ನನ್ನ ಪತ್ನಿ ನನ್ನನ್ನು ಸುಧಾರಿಸುವ ಯಾವುದೇ ಅವಕಾಶಗಳನ್ನು ಬಿಟ್ಟು ಕೊಡಲಿಲ್ಲ. ಆಕೆ ನನಗಾಗಿ ಪ್ರಾರ್ಥಿಸುತ್ತಲೇ ಇದ್ದಳು. ಆಕೆ ನನ್ನ ಈ ಅಸಹಜ ವರ್ತನೆಯ ಕುರಿತು ಎಂದಿಗೂ ಕುಪಿತಳಾಗಲಿಲ್ಲ… ಆದರೆ ನಾನು ಸಲೀಮ್‍ನನ್ನು ಕಡೆಗಣಿಸಿ ಕೇವಲ ಅವನ ತಮ್ಮಂದಿರನ್ನು ಮಾತ್ರ ಮುದ್ದಿಸುವಾಗ ಆಕೆ ಸಲೀಮ್‍ನನ್ನು ಅಪ್ಪಿಹಿಡಿದು ಅತ್ತು ಬಿಡುತ್ತಿದ್ದಳು.

***********************************
ಸಲೀಮ್ ಅಲ್ಪ ಬೆಳೆದು ದೊಡ್ಡವನಾದಾಗ; ನನ್ನ ಪತ್ನಿ ಅವನನ್ನು ವಿಶಿಷ್ಟ ಕಲಿಕಾ ಶಾಲೆಗೆ ಸೇರಿಸಲು ತೀರ್ಮಾನಿಸಿದಳು. ಹೀಗೆ ವರ್ಷಗಳು ಗತಿಸಿದವು. ನಾನು ನನ್ನ ಕೆಲಸ, ಊಟ, ನಿದ್ದೆ ಹಾಗೂ ಗೆಳೆಯರೊಂದಿಗೆ ಸುತ್ತಾಡುವುದನ್ನು ಮುಂದುವರೆಸಿದೆ.
ಆದರೆ ಆ ದಿನ,
ಅಂದರೆ ಒಂದು ಶುಕ್ರವಾರ ನಾನು ಬೆಳಿಗ್ಗೆ ಏಳುವಾಗ 11 ಗಂಟೆಯಾಗಿತ್ತು. ಅದೊಂದು ರೀತಿಯಲ್ಲಿ ನಾನು ಅವತ್ತು ಬೇಗನೆ ಎದ್ದಿದ್ದೆ. ಯಾಕೆಂದರೆ ನನಗೆ ಆ ದಿನ ಮಧ್ಯಾಹ್ನದ ಭೋಜನಕೂಟಕ್ಕೆ ಆಹ್ವಾನವೊಂದು ಒದಗಿ ಬಂದಿತ್ತು. ನಾನು ಲಘು ಬಗೆಯಿಂದ ಸ್ನಾನ ಮಾಡಿ, ಬಟ್ಟೆ ಧರಿಸಿ ಇದ್ದ ಒಂದೆರಡು ಪಫ್ರ್ಯೂಮ್‍ಗಳನ್ನು ಹಾಕಿಕೊಂಡು ಕೋಣೆಯಿಂದ ಹೊರ ಬಂದೆ. ಇನ್ನೇನು ನಾನು ಹೊರಗಡಿ ಇಡಬೇಕು ಎನ್ನುವಾಗ ಸಲೀಮ್ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿರುವುದು ನನಗೆ ಕಂಡು ಬಂತು. ಆತ ಮಗುವಾಗಿದ್ದಾಗ ಅಳುತ್ತಿದ್ದ ದ್ದನ್ನು ಗಮನಿಸಿದ್ದ ನನಗೆ ಆತ ಬೆಳೆದು ಇಷ್ಟು ದೊಡ್ಡವನಾದ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಮೊದಲ ಬಾರಿಗೆ ಕಂಡಿದ್ದೆ. ನಾನು ಅವನ ಬಳಿ ಹೋಗಬೇಕೋ ಬೇಡವೋ ಎಂಬ ಚಿಂತೆ ನನ್ನನ್ನು ಆವರಿಸಿತು. ಇಲ್ಲ, ಅವನನ್ನು ಈ ಸ್ಥಿತಿಯಲ್ಲಿ ಬಿಟ್ಟು ನನಗೆ ಇಲ್ಲಿಂದ ತೆರಳಲಾಗು ವುದಿಲ್ಲ ಎಂಬುದು ನನಗೆ ಮನವರಿಕೆ ಆಯ್ತು.

“ಸಲೀಮ್, ಯಾಕೆ ಅಳ್ತಾ ಇದ್ದೀಯಾ?” ನಾನು ಕೇಳಿದೆ. ಆತ ನನ್ನ ಧ್ವನಿಯನ್ನು ಕೇಳು ತ್ತಿದ್ದಂತೆ ಒಮ್ಮೆಲೆ ಅಳುವನ್ನು ನಿಲ್ಲಿಸಿದ. ಆತ ಅತ್ತಿತ್ತ ಗಮನಿಸ ತೊಡಗಿದ.
ನಾನು “ಇವನಿಗೇನಾಯ್ತು?” ಎಂದು ಆಲೋಚಿಸುತ್ತಿದ್ದೆ.
ನೋಡು ನೋಡುತ್ತಿದ್ದಂತೆಯೇ ಸಲೀಮ್ ನನ್ನಿಂದ ದೂರ ಸರಿಯುತ್ತಿರುವುದು ನನಗೆ ಅನುಭವವಾಯ್ತು. ಆತ ಏನೂ ಹೇಳದೇ ಅಲ್ಲಿಂದ ಸರಿದು ಹೊರಡುತ್ತಿದ್ದರೆ ನನಗೆ
“ಈಗ ನೀವು ನನ್ನ ಬಗ್ಗೆ ಕಾಳಜಿ ವಹಿಸಲು ತೀರ್ಮಾನಿಸಿದಿರೋ? ಕಳೆದ ಹತ್ತು ವರ್ಷಗಳಿಂದ ನೀವೆಲ್ಲಿದ್ದಿರಿ?” ಎಂದು ಆತ ಅಣಕಿಸಿ ಕೇಳಿದಂತೆ ಭಾಸವಾಯ್ತು.
ಆತ ಗೋಡೆಯನ್ನು ಅತ್ತಿತ್ತ ಬಳಸಿ ಅವನ ಕೋಣೆ ಸೇರಿದ. ನಾನು ಆತನನ್ನು ಹಿಂಬಾಲಿಸಿದೆ.

ಮೊದಲು ಆತ ತಾನು ಏಕೆ ಅತ್ತೆನೆಂಬುದನ್ನು ಹೇಳಲು ಹಿಂಜರಿದ. ನಾನು ಆತ ಏಕೆ ಅಳು ತ್ತಿದ್ದಾನೆಂಬುದನ್ನು ತಿಳಿದವರಂತೆ ನಟಿಸಿ ಆತನನ್ನು ಸಮಾಧಾನ ಪಡಿಸಿದೆ. ತದ ನಂತರ ಆತ ಯಾಕೆ ಅಳುತ್ತಿದ್ದೆನೆಂಬುದನ್ನು ಹೇಳಿದ: ‘ಆತನನ್ನು ಸಹೋದರನಾದ ಉಮರ್ ಮಸೀದಿಗೆ ಕರೆದು ಕೊಂಡು ಹೋಗುತ್ತಿದ್ದ. ಆದರೆ ಇವತ್ತು ಶುಕ್ರವಾರ ವಾಗಿರುವುದರಿಂದ ಉಮರ್ ಎಂದಿನಂತೆ ತಡ ವಾಗಿಯೇ ತನ್ನನ್ನು ಮಸೀದಿಗೆ ಕರೆದುಕೊಂಡು ಹೋದರೆ ತನಗೆ ಮೊದಲ ಸಾಲಿನಲ್ಲಿ ನಿಂತು ನಮಾಝ್ ನಿರ್ವಹಿಸಲು ಸಾಧ್ಯವಾಗದು. ಅದ ಲ್ಲದೇ ಈ ಕುರಿತು ಅಮ್ಮನ ಬಳಿ ಹೇಳಲು ಹಲವು ಬಾರಿ ಕರೆದನಾದರೂ ಅಮ್ಮನಿಂದ ಯಾವುದೇ ಪ್ರತಿಕ್ರಿಯೆಗಳು ಬರಲಿಲ್ಲ. ಎಲ್ಲರೂ ತನ್ನನ್ನು ಒಂಟಿಯಾಗಿ ಬಿಟ್ಟು ತೆರಳಿದ್ದಾರೆಂದು ಭಾವಿಸಿ ಆತ ಅಳುತ್ತಿದ್ದ.’

ಆತನ ಅಳು ಇನ್ನೂ ಮುಂದುವರಿದಿತ್ತು. “ಅಯ್ಯೋ ಸಲೀಮ್! ಇಷ್ಟು ಸಣ್ಣ ವಿಷಯಕ್ಕೆ ನೀನು ಇಷ್ಟೊಂದು ಅಳುತ್ತಿದ್ದಿಯಲ್ಲ” ಎಂಬಂತೆ ನಾನು ನನ್ನ ಕೈಯನ್ನು ಮೆದುವಾಗಿ ಆತನ ಮುಖದ ಮೇಲೊತ್ತಿದೆ.

“ಓ ಸಲೀಮ್…” ನಾನು ಆತನನ್ನು ಮೊದಲ ಬಾರಿಗೆ ಹೆಸರೆತ್ತಿ ಕರೆದೆ.

ನಾನು ಯಾಕೆ ಆತನನ್ನು ಸಂತೈಸುತ್ತಿದ್ದೇ ನೆಂಬುದು ನನಗೇ ತಿಳಿಯಲಿಲ್ಲ.

“ಓ ಸಲೀಮ್…! ಅಳಬೇಡ… ಇವತ್ತು ನಿನ್ನನ್ನು ಮಸೀದಿಗೆ ಯಾರು ಕರೆದುಕೊಂಡು ಹೋಗುತ್ತಾರೆಂದು ನಿನಗೆ ಗೊತ್ತಿರಲಿಲ್ಲವೇ?” ಎಂದು ನಾನು ಪ್ರಶ್ನಿಸಿದೆ.

“ಉಮರ್ ಅಲ್ಲವೇ. ಅವನು ಎಲ್ಲಿದ್ದಾ ನೆಂಬುದು ನನಗೆ ತಿಳಿದಿರುತ್ತಿದ್ದರೆ…” ಎಂದು ಸಲೀಮ್ ಬಿಕ್ಕಿದನು.

“ಅಲ್ಲ ಸಲೀಮ್, ಇವತ್ತು ನಾನು ನಿನ್ನನ್ನು ಮಸೀದಿಗೆ ಕರೆದುಕೊಂಡು ಹೋಗುತ್ತೇನೆ” ಎಂದು ನಾನು ಹೇಳಿದೆ. ಸಲೀಮ್ ಒಮ್ಮೆಲೆ ಆಶ್ಚರ್ಯಕ್ಕೊಳ ಗಾದ. ಆತನಿಗೆ ನಂಬಲು
ಅಸಾಧ್ಯವಾಯ್ತು. ನಾನು ಆತನನ್ನು ಅಣಕಿಸುತ್ತಿದ್ದೇ ನೆಂದು ಆತ ಭಾವಿಸಿ ಇನ್ನೂ ಜೋರಾಗಿ ಅಳಲಾರಂಭಿಸಿದ. ನಾನು ಆತನ ಕಂಬನಿ ಯನ್ನು ಒರೆಸಿ ಆತನ ಕೈ ಹಿಡಿದು ಕಾರಿನ ಬಳಿ ಕರೆದುಕೊಂಡು ಬಂದೆ.

ಆತ ಕಾರಿನ ಬಳಿ ಬರುತ್ತಲೇ ಒಮ್ಮೆಲೆ ತಿರಸ್ಕಾರ ಭಾವ ತೋರಿದ. ತದನಂತರ “ಬಾಬಾ, ಮಸೀದಿ ಹತ್ತಿರದಲ್ಲಿಯೇ ಇದೆ. ನಾನು ಅಲಿ ್ಲಯವರೆಗೆ ನಡೆದು ಹೋಗಲು ಬಯಸುತ್ತೇನೆ. ಯಾಕೆಂದರೆ ನಾವು ನಡೆಯುವ ಪ್ರತಿಯೊಂದು ಹೆಜ್ಜೆಗೂ ಪ್ರತಿಫಲವಿದೆ” ಎಂದು ಸಲೀಮ್ ನನಗೆ ತಿಳಿಸಿದ.

ನಾನು ಕೊನೆಯ ಬಾರಿ ಯಾವಾಗ ಮಸೀದಿಗೆ ತೆರಳಿದ್ದೆನೆಂಬುದು ನನಗೇ ನೆನಪಿರಲಿಲ್ಲ. ಯಾವಾಗ ಅಲ್ಲಿ ಕೊನೆಯ ಬಾರಿ ನಮಾಝ್ ಮಾಡಿದ್ದೆ, ಯಾವಾಗ ಸುಜೂದ್ ಮಾಡಿದ್ದೆ ಎಂಬುದೂ ನನಗೆ ನೆನಪಾಗಲಿಲ್ಲ. ಹಲವು ವರ್ಷಗಳಿಂದ ನಾನು ಮಸೀದಿಯಿಂದ ದೂರವು ಳಿದುಕೊಂಡಿರುವು ದಕ್ಕಾಗಿ ಖೇದಿಸಿದೆ. ಮಸೀದಿಯಲ್ಲಿ ಅದಾಗಲೇ ನಮಾಝಿಗಳು ನೆರೆದಿದ್ದರು; ಆದರೂ ನಾನು ಸಲೀಮ್‍ಗಾಗಿ ಮೊದಲ ಸಾಲಿನಲ್ಲಿ ಜಾಗವಿರುವು ದನ್ನು ಗಮನಿಸಿ ಆತನನ್ನು ಅಲ್ಲಿ ನಿಲ್ಲಿಸಿದೆ. ನಾನು ಜುಮಾ ಖುತ್ಬಾ ಆಲಿಸಿದೆ. ಆತನ ಬಳಿ ಯಲ್ಲೇ ನಿಂತು ನಾನು ನಮಾಝ್ ನಿರ್ವಹಿಸಿದೆ. ನಮಾಝ್ ಮುಗಿದ ಬಳಿಕ ಸಲೀಮ್ ನನ್ನ ಬಳಿ ಕುರ್‍ಆನ್ ಕೇಳಿದ. ನನಗೆ ಆಶ್ಚರ್ಯವಾಯ್ತು.

“ಸಲೀಮ್ ಕುರುಡನಾಗಿರುವಾಗ ಅವನು ಹೇಗೆ ತಾನೇ ಕುರ್‍ಆನನ್ನು ನೋಡಿ ಓದ ಬಲ್ಲ?” ಎಂಬ ಪ್ರಶ್ನೆ ನನ್ನನ್ನು ಆವರಿಸಿತು.
ಮೊದಮೊದಲು ನಾನು ಆತನ ಬೇಡಿಕೆಯನ್ನು ಕಡೆಗಣಿಸಿದೆ. ಆದರೆ ಆತ ಇನ್ನೇನು ಮತ್ತೊಮ್ಮೆ ಅಳುತ್ತಾನೆಂಬುದು ಖಾತರಿಯಾದಾಗ ಕುರ್‍ಆನನ್ನು ಕೈಗೆತ್ತಿಕೊಂಡೆ.
ಆತ ನನಗೆ “ಅಲ್-ಕಾಫ್” ಸೂರಃವನ್ನು ತೆರೆಯಲು ತಿಳಿಸಿದ.

ನಾನು ಸೂರಃವನ್ನು ತೆರೆದು ಆತನ ಎದುರಿಗೆ ಕುರ್‍ಆನನ್ನು ಹಿಡಿದೆ. ಆತ ಓದಲಾರಂಭಿಸಿದ. ಯಾ ಅಲ್ಲಾಹ್! ಅವನು ಸಂಪೂರ್ಣ ಅಧ್ಯಾಯ ವನ್ನೇ ಕಂಠಪಾಠ ಮಾಡಿಕೊಂಡಿದ್ದ.
ನನಗಿದನ್ನು ಕಂಡು ನಾಚಿಕೆಯಾಯ್ತು. ನಾನು ಕುರ್‍ಆನನ್ನು ಎತ್ತಿಕೊಂಡು ನಡುಗುವ ತುಟಿಗಳಿಂದ ಓದಲಾರಂಭಿಸಿದೆ. ನಾನು ಓದುತ್ತಲೇ ಇದ್ದೆ, ಅಲ್ಲಾಹನಲ್ಲಿ ನನ್ನ ಪಾಪಗಳಿಗಾಗಿ ಕ್ಷಮೆಯಾಚಿಸಿ ಅಳಲಾರಂಭಿಸಿದೆ. ನನ್ನ ದುಃಖವು ಇಮ್ಮಡಿ ಯಾಗಿತ್ತು. ನಾನು ಅಳುತ್ತಿರುವುದನ್ನು ಗಮನಿಸಿದ ಸಲೀಮ್ ತನ್ನ ಪುಟ್ಟ ಕೈಗಳಿಂದ ನನ್ನ ಕಂಬನಿಯನ್ನು ಆಗಾಗ ಒರೆಸುತ್ತಿದ್ದನು. ನಾವಿ ಬ್ಬರೂ ಮನೆಗೆ ತೆರಳಿದೆವು. ನನ್ನ ಪತ್ನಿ ಅದಾ ಗಲೇ ಸಲೀಮ್‍ನ ಕುರಿತು ಚಿಂತಾಕ್ರಾಂತಳಾಗಿದ್ದಳು. ನಾನು ಸಲೀಮ್‍ನೊಂದಿಗೆ ಜುಮಾ ನಮಾಝ್ ನಿರ್ವಹಿಸಿದೆನೆಂಬುದನ್ನು ತಿಳಿದ ಕೂಡಲೇ ಆಕೆಯ ಆ ಚಿಂತೆಯು ಮಾಯವಾಗಿ ಒಮ್ಮೆಲೇ ಸಂತೋಷ ದಿಂದ ಆನಂದಭಾಷ್ಪ ಹರಿಯಿತು.

ಆ ದಿನದ ನಂತರ ನಾನು ಒಂದು ಹೊತ್ತಿನ ನಮಾಝ್‍ನ ಕುರಿತೂ ಆಲಸ್ಯತನ ತೋರಲಿಲ್ಲ. ನನ್ನ ಕೆಟ್ಟ ಸ್ನೇಹಿತರ ಸಹವಾಸ ತೊರೆದು ಮಸೀದಿಯಲ್ಲಿ ಕೆಲವು ಉತ್ತಮ ಗೆಳೆಯರನ್ನು ಪಡೆದುಕೊಂಡೆ. ನನಗೆ ಸತ್ಯವಿಶ್ವಾಸದ ರುಚಿಯು ಲಭಿಸಿತು. ಈ ಇಹಲೋಕದ ಮೋಡಿಗಳಿಂದ ಬದುಕುಳಿಯುವ ಮಾರ್ಗವನ್ನು ನಾನು ಕಂಡು ಕೊಂಡೆ. ನಾನು ಯಾವುದೇ ರೀತಿಯ ಪ್ರಭಾಷಣ ಗಳನ್ನು ತಪ್ಪಿಸಲಿಲ್ಲ. ಒಂದು ತಿಂಗಳಿನಲ್ಲಿಯೇ ವಿತ್ರ್ ನಮಾಝ್ ನಿರ್ವಹಿಸುವಾಗ ಹಲವು ಬಾರಿ ಸಂಪೂರ್ಣ ಕುರ್‍ಆನ್ ಪಠಿಸಿದೆ. ಇಷ್ಟು ವರ್ಷ ಗಳಿಂದ ಕರ್ಮಗಳನ್ನು ನಷ್ಟಕ್ಕೊಳಪಡಿಸಿದ ವ್ಯಕ್ತಿ ನಾನೋ? ಎಂಬ ಸಂಶಯ ನನ್ನನ್ನೂ ಆವರಿಸಿತು.

ಅಲ್ಲಾಹನ ಸ್ಮರಣೆಯಲ್ಲಿ ನನ್ನ ನಾಲಗೆಯನ್ನು ದೃಢಪಡಿಸಿಕೊಂಡೆ. ನಾನು ಇತರರನ್ನು ಮೂದಲಿ ಸಿದ್ದನ್ನು ಕ್ಷಮಿಸಿಬಿಡಲೆಂದು ಪ್ರಾರ್ಥಿಸುತ್ತಲೇ ಇದ್ದೆ. ಈ ನಡುವೆ ನಾನು ಕುಟುಂಬ ಸಂಬಂಧ ಗಳಲ್ಲಿ ಗಟ್ಟಿಗನಾದೆ. ನನ್ನ ಪತ್ನಿಯ ಕಣ್ಣಲ್ಲಿ ನನ್ನ ಭವಿಷ್ಯದ ಕುರಿತು ಕಾಣುತ್ತಿದ್ದ ದುಃಖದ ಛಾಯೆಯು ಇದೀಗ ಮಾಯವಾಗಿರುವುದನ್ನು ನಾನು ಗಮನಿಸಿದೆ. ನನ್ನ ಮಗ ಸಲೀಮ್‍ನ ಮುಖದಲ್ಲಿ ನಗುವು ಮಾಸಿ ಹೋಗದಂತೆ ನಾನು ಆತನನ್ನು ನೋಡಿಕೊಂಡೆ.

ಅಲ್ಲಾಹನ ಅನಂತ ಅನುಗ್ರಹಗಳಿಗೆ ನಾನು ಕೃತಜ್ಞತೆ ಸಲ್ಲಿಸಿದೆ. ಒಂದೊಮ್ಮೆ ದಾವಾ ಕಾರ್ಯ ಗಳಿಗಾಗಿ ಸ್ನೇಹಿತರು ನನ್ನನ್ನು ಆಹ್ವಾನಿ ಸಿದ್ದರು. ಕೆಲವು ತಿಂಗಳುಗಳ ಕಾಲ ಅವರು ಈ ಪ್ರಕ್ರಿಯೆಯಲ್ಲಿ ಊರೂರು ಸುತ್ತುತ್ತಿದ್ದರು. ಹಾಗಾಗಿ ನಾನು ನನ್ನ ಪತ್ನಿಯ ಬಳಿ ದಾವಾ ಕಾರ್ಯದ ವಿಷಯವನ್ನು ಪ್ರಸ್ತಾಪಿಸಿದೆ. ಆಕೆ ಸಂತೋಷದಿಂದ ನನ್ನನ್ನು ಬೀಳ್ಕೊಟ್ಟಳು.

ತದನಂತರ ನಾನು ಸಲೀಮ್‍ನ ಬಳಿ ತೆರಳಿ ಆತ ನಿಗೆ ಕೆಲವು ದಿನಗಳ ಕಾಲ ಸಂದೇಶ ಪ್ರಚಾರಕ್ಕೆ ಹೋಗುತ್ತಿರು ವುದನ್ನು ತಿಳಿಸಿದಾಗ ಆತ ನನ್ನನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಅಪ್ಪಿಹಿಡಿದು ನನ್ನ ಹಣೆಗೆ ಮುತ್ತಿಟ್ಟನು.

ನಾನು ಅಲ್ಲಾಹನ ಮೇಲೆ ಭಾರ ಹಾಕಿ ನನ್ನ ಪ್ರಯಾಣದತ್ತ ಮುಂದುವರೆದೆ. ಈ ನಡುವೆ ನನಗೆ ಸಮಯ ಲಭಿಸಿದಾಗಲೆಲ್ಲ ನನ್ನ ಪತ್ನಿ ಮಕ್ಕಳಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಅವರೊಂದಿಗೆ ಕಳೆದ ಆ ದಿನಗಳು ನನ್ನನ್ನು ಬಲವಾಗಿ ಕಾಡುತ್ತಿದ್ದವು. ಅವೆಲ್ಲದಕ್ಕಿಂತಲೂ ಹೆಚ್ಚಾಗಿ ನಾನು ಸಲೀಮ್‍ನನ್ನು ಅಪಾರವಾಗಿ ನೆನೆಸಿಕೊಳ್ಳುತ್ತಿದ್ದೆ. ಆತ ನನ್ನೊಂದಿಗೆ ಇದ್ದಂತೆ ನನಗೆ ಭಾಸವಾಗುತ್ತಿತ್ತು. ನಾನು ಅಲ್ಲಿಂದ ಬಂದಾಗಿನಿಂದಲೂ ಆತನೊಂದಿಗೆ ಒಮ್ಮೆಯೂ ಮಾತನಾಡಲು ಸಾಧ್ಯವಾಗಿರಲಿಲ್ಲ. “ಒಂದೋ ಆತ ಶಾಲೆಗೆ ಹೋಗಿದ್ದಾನೆ, ಮಸೀದಿಗೆ ಹೋಗಿದ್ದಾನೆ” ಎಂದು ನನ್ನ ಪತ್ನಿ ಹೇಳುತ್ತಿದ್ದಳು.

ನಾನು ಆಕೆಯ ಬಳಿ “ಅವನಿಗೆ ನನ್ನ ಕಡೆ ಯಿಂದು ಹಣೆಗೊಂದು ಮುತ್ತು ಕೊಟ್ಟು ಬಿಡು” ಎಂದು ಹೇಳುತ್ತಿದ್ದೆ. ಆಕೆ ಸಂತೋಷದಿಂದ ನಕ್ಕು ಬಿಡುತ್ತಿದ್ದಳು. ಆಕೆಯ ನಗು ನನಗೆ ಮುದ ನೀಡುತ್ತಿತ್ತು. ಆದರೆ ಅಲ್ಲಿಂದ ಮರಳುವ ಮುನ್ನ ನಾನು ಆಕೆಗೆ ಕರೆ ಮಾಡಿದಾಗ “ಸಲಿ ೀಮ್‍ಗೆ ನನ್ನ ಸಲಾಮ್ ಹೇಳು” ಎಂದೆ. ಆಕೆ ಪ್ರತ್ಯುತ್ತರವಾಗಿ “ಇನ್‍ಷಾ ಅಲ್ಲಾಹ್” ಎಂದಳೇ ಹೊರತು ನಗಲಿಲ್ಲ.

ಕೊನೆಗೆ ಒಂದು ದಿನ ನಾನು ಮರಳಿ ಮನೆಗೆ ಬಂದೆ. ನಾನು ಬಾಗಿಲು ಬಡಿಯುತ್ತಲೇ ಸಲೀಮ್ ಬಂದು ಬಾಗಿಲು ತೆರೆಯುವನೆಂದು ನಾನು ಬಯಸಿದ್ದೆ. ಆದರೆ ನನ್ನ ನಾಲ್ಕು ವರ್ಷದ ಪುತ್ರ ಖಾಲಿದ್ ಬಾಗಿಲನ್ನು ತೆರೆದನು. ನಾನು ಆತನನ್ನು ಎತ್ತಿಕೊಂಡು ಒಳನಡೆದೆ. ಆತ ಬಾಬಾ ಬಾಬಾ ಎನ್ನುತ್ತಿದ್ದ.
ನಾನು ಒಳ ಪ್ರವೇಶಿಸುವಾಗ ದುಃಖವು ಮಡುಗಟ್ಟಿದ ವಾತಾವರಣದಲ್ಲಿ ಪ್ರವೇಶಿಸುತ್ತಿದ್ದಂತೆ ಭಾಸವಾಯ್ತು.
ನಾನು ಅಲ್ಲಾಹನಲ್ಲಿ ಅಭಯ ಯಾಚಿಸಿ, ನನ್ನ ಪತ್ನಿಯ ಬಳಿ ತೆರಳಿದೆ. ಆಕೆಯ ಕಣ್ಣುಗಳಲ್ಲಿ ಕೆಲವು ವರ್ಷಗಳ ಹಿಂದೆ ಮಡುಗಟ್ಟಿದ್ದ ಆ ದುಃಖ ಮತ್ತೊಮ್ಮೆ ಮರಳಿರುವುದು ನನಗೆ ಗೋಚರಿಸಿತು.
“ನೀನೇಕೆ ದುಃಖಿತಳಾಗಿರುವೆ?” ನಾನು ಕೇಳಿದೆ.

ಆಕೆ “ಏನಿಲ್ಲ” ಎಂದಳು.

ಕೂಡಲೇ ನನಗೆ ಸಲೀಮ್‍ನ ನೆನಪಾಯ್ತು.

ನಾನು “ಸಲೀಮ್ ಎಲ್ಲಿದ್ದಾನೆ?” ಎಂದು ಪ್ರಶ್ನಿಸಿದೆ.

ಆಕೆ ತನ್ನ ತಲೆಯನ್ನು ಬಾಗಿಸಿದಳೇ ಹೊರತು
ಉತ್ತರಿಸಲಿಲ್ಲ.

ಆಗ ನನ್ನ ಪುಟ್ಟ ಮಗು ಖಾಲಿದ್ ಬಂದು “ಬಾಬಾ; ಸಲೀಮ್ ಅಲ್ಲಾಹನ ಬಳಿ, ಸ್ವರ್ಗಕ್ಕೆ ಹೋಗಿದ್ದಾನೆ” ಎಂದು ತೊದಲುತ್ತಾ ಹೇಳಿದುದು ನನ್ನ ಕಿವಿಯಲ್ಲಿ ಮಡುಗಟ್ಟಿತು.

ನನ್ನ ಪತ್ನಿಗೆ ಸಹಿಸಲಾಗಲಿಲ್ಲ. ಆಕೆ ಬಿಕ್ಕಿ ಬಿಕ್ಕಿ ಅಳುತ್ತಾ ಕೋಣೆ ಸೇರಿಕೊಂಡಳು. ಸಲೀಮ್ ನಾನು ಮರಳಿ ಬರುವ ಎರಡು ವಾರಗಳಿಗೆ ಮುನ್ನ ಜ್ವರ ಬಾಧೆಯಿಂದ ಬಳಲುತ್ತಿದ್ದನು. ಚಿಕಿತ್ಸೆಯು ಫಲಕಾರಿಯಾಗಲಿಲ್ಲ. ಜ್ವರದ ಬಾಧೆ ಯನ್ನು ಆ ಪುಟ್ಟ ಆತ್ಮವು ಸಹಿಸದೇ ಅಲ್ಲಾಹನ ಸನ್ನಿಧಿಗೆ ತಲುಪಿತು. ಸಂಭವಿಸಿದೆಲ್ಲವೂ ಅಲ್ಲಾಹನ ಪರೀಕ್ಷೆ ಎಂಬಂತೆ ನನಗೆ ಭಾಸವಾಯ್ತು. ಆತನ ಆ ಪುಟ್ಟ ಕೈಗಳು ನನ್ನ ಕಂಬನಿಗಳನ್ನು ಒರೆಸು ತ್ತಿರುವಂತೆ ನನಗೆ ಭಾಸವಾಯ್ತು. ಆತ ನಾನು ಅಳದಿರುವಂತೆ ಸಂತೈಸಲು ತನ್ನ ಕರಗಳನ್ನು ಚಾಚಿ ಆಲಿಂಗಿಸಿಕೊಂಡ ಅನುಭವವಾಯ್ತು. ನಾನು ಸಲೀಮ್‍ನೊಂದಿಗೆ ಎಷ್ಟೊಂದು ಕ್ರೂರವಾಗಿ ವರ್ತಿಸಿದೆ. ಆತ ಕುರುಡನೂ ಕುಂಟನೂ ಆಗಿದ್ದ. ಆದರೆ ಆತ ಕುರುಡನಾಗಿರಲಿಲ್ಲ. ನಾನೇ ಕುರುಡು ನಾಗಿದ್ದೆ. ಯಾಕೆಂದರೆ ಕೆಟ್ಟ ಸ್ನೇಹಿತರ ಸಹವಾಸ ದಿಂದ ನನಗೆ ಆತನನ್ನು ನೋಡಲು, ಮುದ್ದಿಸಲು, ಆತನನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಆತ ಕುಂಟನೂ ಆಗಿರಲಿಲ್ಲ. ಯಾಕೆಂದರೆ ಆತ ನೇರ ಮಾರ್ಗದಲ್ಲಿ ಅಚಲನಾಗಿದ್ದ; ತಪ್ಪು ದಾರಿಯನ್ನು ಹಿಡಿದಿದ್ದ ನಾನೇ ಕುಂಟುನಾಗಿದ್ದೆ.

“ಅಲ್ಲಾಹನು ಅಪಾರ ಕರುಣಾಮಯಿಯಾಗಿ ದ್ದಾನೆ” ಎಂದು ಸಲೀಮ್ ಹೇಳುತ್ತಿದ್ದುದು ನನಗೆ ನೆನಪಾಯ್ತು.
ಸಲೀಮ್ ಈ ಜಗತ್ತಿಗೆ ಬಂದಾಗ ನಾನು ಆತನು ಇಲ್ಲವೇನೋ ಎಂಬಂತೆ ವರ್ತಿಸಿ ಆತನನ್ನು ಕಡೆಗಣಿಸಿದ್ದೆ. ಆದರೆ, ಅದೇ ಸಲೀಮ್ ನನ್ನ ಇತರ ಮಕ್ಕಳಿಗಿಂತಲೂ ಅತಿ ಪ್ರೀತಿ ಪಾತ್ರನಾದುದು ನನಗೆ ನೆನಪಾಯ್ತು.

ನಾನು ಬಿಕ್ಕಿ ಬಿಕ್ಕಿ ಅತ್ತೆ. ಆತನ ಆ ನೆನಪು ಗಳು ನನ್ನ ಮನದಲ್ಲಿ ಹಸಿಯಾಗಿಯೇ ಉಳಿದವು.
ನಾನು ಈಗಲೂ ದುಃಖಿತನಾಗಿಯೇ ಇದ್ದೇನೆ.
“ಹೇಗೆ ತಾನೇ ನಾನು ದುಃಖಿತನಾಗಿರದಿರಲು ಸಾಧ್ಯ?” ಅಲ್ಲಾಹನು ಸಲೀಮ್‍ನಿಂದ ನನಗೆ ಮಾರ್ಗದರ್ಶನ ನೀಡಿರುವಾಗ ಹೇಗೆ ತಾನೇ ನಾನು ಆತನನ್ನು ಮರೆಯಲು ಸಾಧ್ಯ.
“ಯಾ ಅಲ್ಲಾಹ್ ನನ್ನ ಮಗನ ಮೇಲೆ ಕರುಣೆ ತೋರು”.

[ಶೈಖ್ ಖಾಲಿದ್ ರಶೀದ್ ಎಂಬವರ ಜೀವನದಲ್ಲಿ ಸಂಭವಿಸಿದ ನೈಜ ಘಟನೆ.]
ಕೃಪೆ: ಯಂಗ್ ಮುಸ್ಲಿಮ್ ಡೈಜೆಸ್ಟ್
ಅನು: ಬಿಂತಿ ಯಾಸೀನ್