ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಎತ್ತಿರುವ ಪ್ರಶ್ನೆ

0
928

ಶವಪೆಟ್ಟಿಗೆ ಹಗರಣವನ್ನು ಬಯಲಿಗೆಳೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ತೆಹಲ್ಕಾ ಪತ್ರಿಕೆಯು ಆ ಬಳಿಕ ಎದುರಿಸಿದ ಸವಾಲುಗಳೇನು ಮತ್ತು ಆ ಸವಾಲುಗಳು ಯಾರಿಂದ ಎದುರಾದುವು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಕುಟುಕು ಕಾರ್ಯಾಚರಣೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಒದಗಿಸಿದ್ದು ಇದೇ ತೆಹಲ್ಕಾ. ಕೇಂದ್ರದಲ್ಲಿ ಆಗ ವಾಜಪೇಯಿ ನೇತೃತ್ವದ ಸರಕಾರವಿತ್ತು. ಶವಪೆಟ್ಟಿಗೆ ಹಗರಣವು ಕೇಂದ್ರ ಸರಕಾರದ ವರ್ಚಸ್ಸಿಗೆ ಧಕ್ಕೆ ತರಲು ಪ್ರಾರಂಭಿಸಿದಾಗ ಅದು ತೆಹಲ್ಕಾದ ವಿರುದ್ಧ ನಿಂತಿತು. ವಿವಿಧ ಕೇಸುಗಳನ್ನು ಜಡಿಯುವ ಮೂಲಕ ಪತ್ರಿಕೆಯ ಸಂಪಾದಕರು ಮತ್ತು ಇತರರನ್ನು ಕೋರ್ಟು-ಕಚೇರಿ ಎಂದು ಅಲೆಯುವಂತೆ ಮಾಡಿತು. ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸಿತು. ವ್ಯವಸ್ಥೆಯ ಕಿರುಕುಳ ಮತ್ತು ಒತ್ತಡವನ್ನು ಎದುರಿಸಲು ಸಾಧ್ಯವಾಗದೇ ತೆಹಲ್ಕಾ ಒದ್ದಾಡಿದ್ದು ಈಗ ಇತಿಹಾಸ. ಇದೀಗ

ಅಂಥದ್ದೇ ಒತ್ತಡ ತಂತ್ರವನ್ನು ಮಾಧ್ಯಮಗಳ ಮೇಲೆ ಹೇರಲು ಮೋದಿ ನೇತೃತ್ವದ ಕೇಂದ್ರ ಸರಕಾರ ಹೊರಟಂತಿದೆ. ದಿ ಕ್ವಿಂಟ್ ಮತ್ತು ದಿ ನ್ಯೂಸ್ ಮಿನಿಟ್ ಎಂಬೆರಡು ಇಂಟರ್ ನೆಟ್ ಪತ್ರಿಕೆ (ನ್ಯೂಸ್ ಪೋರ್ಟಲ್)ಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ದಿ ಕ್ವಿಂಟ್ ಮತ್ತು ನೆಟ್‍ವರ್ಕ್ 18 ಗ್ರೂಪ್‍ನ ಸ್ಥಾಪಕ ರಾಘವ್ ಬಹಲ್‍ರ ಮನೆಯ ಮೇಲೂ ದಾಳಿ ನಡೆದಿದೆ. ಈ ಮೊದಲು ಎನ್‍ಡಿಟಿವಿಯ ಮೇಲೂ ಇಂಥದ್ದೇ ದಾಳಿ ನಡೆದಿತ್ತು. ಅಂದಹಾಗೆ, ಈ ದಾಳಿಗಳ ಉದ್ದೇಶ ತೆರಿಗೆ ತಪಾಸಣೆಯಲ್ಲ ಎಂದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ದಾಳಿಯ ಸ್ವರೂಪದಲ್ಲೇ ಇದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್ ಮತ್ತು ಎನ್‍ಡಿಟಿವಿ ಈ ಮೂರೂ ಸರಕಾರದ ಹೊಗಳುಭಟ ಪಟ್ಟಿಯಿಂದ ಹೊರಗಿರುವವು. ಕಾವಲು ನಾಯಿಯ ಸ್ವಭಾವವನ್ನು ಇನ್ನೂ ಉಳಿಸಿಕೊಂಡ ಕೀರ್ತಿ ಇವಕ್ಕಿದೆ. ಕೇಂದ್ರ ಸರಕಾರದ ಧೋರಣೆಗಳನ್ನು ಆಗಾಗ ಪ್ರಶ್ನಿಸುತ್ತಾ, ಟೀಕಿಸುತ್ತಾ ಮತ್ತು ವಿಮರ್ಶಿಸುತ್ತಾ ಇವು ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿವೆ ಮತ್ತು ಪ್ರಕಟಿಸುತ್ತಿವೆ. ಒಂದುವೇಳೆ, ಆದಾಯ ತೆರಿಗೆ ಇಲಾಖೆಯ ದಾಳಿಗೂ ಕೇಂದ್ರ ಸರಕಾರಕ್ಕೂ ಸಂಬಂಧ ಇಲ್ಲ ಎಂದಾಗಿದ್ದರೆ ಕೇಂದ್ರ ಸರಕಾರದ ಪ್ರಬಲ ಟೀಕಾಕಾರನಾಗಿ ಗುರುತಿಸಿಕೊಂಡಿರುವ ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳೇ ಯಾಕೆ ದಾಳಿಗೆ ಈಡಾಗುತ್ತಿವೆ? ಬಿಜೆಪಿಯನ್ನು ವಿರೋಧಿಸುವ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಸಾರ್ವಜನಿಕವಾಗಿ ಅವುಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಇಂಥ ದಾಳಿಗಳ ಉದ್ದೇಶ ಎಂದಲ್ಲದೇ ಇದನ್ನು ಬೇರೆ ಹೇಗೆ ವ್ಯಾಖ್ಯಾನಿಸಬಹುದು? ಇತ್ತೀಚೆಗೆ,

ತ್ರಿಪುರದಲ್ಲಿ ಇಂಥದ್ದೇ ಇನ್ನೊಂದು ಕ್ರೌರ್ಯ ನಡೆಯಿತು. ಸಿಪಿಎಂ ಮುಖವಾಣಿಯಾದ ದೇಶೆರ್ ಕಥಾ ಎಂಬ ದೈನಿಕದ ಪರವಾನಿಗೆಯನ್ನು ರದ್ದುಪಡಿಸಲಾಯಿತು. ತಾಂತ್ರಿಕ ಕಾರಣವನ್ನು ಮುಂದಿಟ್ಟು ಈ ಸಾಯಿಸುವ ಆಟ ನಡೆಯಿತು. ನಿಜವಾಗಿ, ಈ ಸಾವಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಕೈವಾಡವಿದೆ ಎಂದು ಹೇಳುವುದಕ್ಕೆ ಸಾಕ್ಷ್ಯಗಳ ಅಗತ್ಯವೇ ಇಲ್ಲ.

ಇತ್ತೀಚೆಗೆ ಈ ಪತ್ರಿಕೆಯ ಸಂಪಾದಕರನ್ನು ಬದಲಾಯಿಸಲಾಗಿತ್ತು. ಮಾತ್ರವಲ್ಲ, ಈ ಬದಲಾವಣೆಯನ್ನು ಭಾರತೀಯ ಸುದ್ದಿ ಮಾಧ್ಯಮಗಳ ನೋಂದಣಿ ವಿಭಾಗದ ಗಮನಕ್ಕೂ ತರಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಈ ವಿವರಗಳನ್ನು ವರ್ಗಾಯಿಸುವಲ್ಲಿ ಉದಾಸೀನ ತೋರಿದರು. ಅದರಿಂದಾಗಿ ಪತ್ರಿಕೆಯ ಆಡಳಿತ ಮಂಡಳಿ ಮಾಡಿದ ಬದಲಾವಣೆಯು ಜಿಲ್ಲಾಧಿಕಾರಿ ಕಚೇರಿಗೆ ತಲುಪಬೇಕಾದ ಸಮಯದಲ್ಲಿ ತಲುಪಲಿಲ್ಲ. ಇದರಿಂದಾಗಿ ಪತ್ರಿಕೆಯಲ್ಲಿ ಒಂದು ವಿವರ ಮತ್ತು ನೋಂದಣಿ ಕಚೇರಿಯಲ್ಲಿ ಇನ್ನೊಂದು ವಿವರ ಎಂಬಂತಾಯಿತು. ಇದೇ ಕಾರಣವನ್ನು ಮುಂದಿಟ್ಟು ಪತ್ರಿಕೆಯ ಪರವಾನಿಗೆಯನ್ನೇ ರದ್ದುಪಡಿಸಲಾಯಿತು. ನಿಜವಾಗಿ, ಇಲ್ಲಿ ಎರಡು ಸಂಗತಿಗಳಿವೆ. ಪ್ರಮಾದ ಆಗಿರುವುದು ಸಿಬಂದಿಗಳಿಂದ. ಇದಕ್ಕಾಗಿ ಪತ್ರಿಕೆಗೆ ಶಿಕ್ಷೆ ನೀಡುವುದು ತಪ್ಪು. ಎರಡನೆಯ ಸಂಗತಿ ಏನೆಂದರೆ, ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡದೇ ಇರುವುದು. ಪತ್ರಿಕೆಯೊಂದು ತನ್ನ ಸಂಪಾದಕನನ್ನು ಬದಲಿಸಿಕೊಳ್ಳುವುದು ಅಭೂತಪೂರ್ವ ಬೆಳವಣಿಗೆ ಏನಲ್ಲ. ಮಾಧ್ಯಮ ಜಗತ್ತಿನಲ್ಲಿ ಇದು ಸಾಮಾನ್ಯ. ಅದನ್ನು ಸಂದರ್ಭಕ್ಕೆ ತಕ್ಕಂತೆ ಸಂಬಂಧಿತ ಕಚೇರಿಗೆ ತಿಳಿಸಿ ಆ ಬದಲಾವಣೆಯನ್ನು ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಜಾಹೀರುಗೊಳಿಸುವುದು ರೂಢಿ. ಒಂದು ವೇಳೆ, ದಶೇರ್ ಕಥಾ ಪತ್ರಿಕೆಯು ಈ ವಿಷಯದಲ್ಲಿ ವಿಫಲವಾಗಿದೆ ಎಂದೇ ವಾದಿಸಿದರೂ ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ನೀಡಬಹುದಲ್ಲವೇ?

ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವಂತೆಯೇ ತನಗೆ ಶರಣಾಗದ ಮಾಧ್ಯಮ ಸಂಸ್ಥೆಗಳನ್ನು ಬಲವಂತದಿಂದ ಶರಣಾಗಿಸುವ ಕೃತ್ಯಕ್ಕೆ ಬಿಜೆಪಿ ಮುಂದಾಗಿದೆಯೇ ಅನ್ನುವ ಪ್ರಶ್ನೆಯನ್ನು ಈ ಬೆಳವಣಿಗೆಗಳು ಮತ್ತೊಮ್ಮೆ ಬಲವಾಗಿ ಎತ್ತಿವೆ. ಈ ದೇಶದ ಮುಖ್ಯವಾಹಿನಿಯ ಹಿಂದಿ ಮತ್ತು ಇಂಗ್ಲಿಷ್ ನ್ಯೂಸ್ ಚಾನೆಲ್‍ಗಳನ್ನು ಕೇಂದ್ರ ಸರಕಾರ ಈಗಾಗಲೇ ಕೊಂಡುಕೊಂಡಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಎ.ಬಿ.ಪಿ. ಎಂಬ ಪ್ರಮುಖ ಹಿಂದಿ ನ್ಯೂಸ್ ಚಾನೆಲ್‍ನ ಹಿರಿಯ ಪತ್ರಕರ್ತರು ಇಂಥದ್ದೇ ಆರೋಪವನ್ನು ಹೊರಿಸಿ ಚಾನೆಲ್‍ನಿಂದ ಹೊರಬಂದರು. ಪ್ರಜಾತಂತ್ರದ ಅಳಿವು-ಉಳಿವು ಮಾಧ್ಯಮವನ್ನು ಅವಲಂಬಿಸಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಇವತ್ತಿನ ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ದಿಗಿಲಾಗುತ್ತದೆ. ನಿಜವಾಗಿ,

ಬೋಫೋರ್ಸ್ ಹಗರಣವನ್ನು ಜನರ ಇಶ್ಯೂವಾಗಿ ಪರಿವರ್ತಿಸಿದ್ದೇ ಮಾಧ್ಯಮಗಳು. ಬೋಫೋರ್ಸ್ ಹಗರಣದ ಇಂಚು ಇಂಚನ್ನೂ ಅವು ಜನರ ಎದುರಿಟ್ಟವು. ಪರಿಣಾಮ ಏನಾಯಿತೆಂದರೆ, ಆಡಳಿತ ಪಕ್ಷವನ್ನೇ ಜನರು ತಿರಸ್ಕರಿಸಿದರು. 3 ದಶಕಗಳ ಹಿಂದೆಯೇ ಭಾರತೀಯ ಮಾಧ್ಯಮಗಳು ಇಷ್ಟು ಜಾಗೃತ ಮನೋಭಾವವನ್ನು ತೋರಿಸಿವೆಯೆಂದರೆ, ಇವತ್ತು ಹೇಗಿರಬೇಕಿತ್ತು? ಅಂದಿಗಿಂತ ಎಲ್ಲ ರೀತಿಯಲ್ಲೂ ಇವತ್ತು ದೇಶ ಮುಂದುವರಿದಿದೆ. ಮಾಧ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳು ಉಂಟಾಗಿವೆ. ಮಾಧ್ಯಮ ಕ್ಷೇತ್ರದ ಹೊಣೆಗಾರಿಕೆಗಳು ಏನೇನು ಅನ್ನುವುದನ್ನು ಅಂದಿಗಿಂತ ಹೆಚ್ಚು ಇಂದು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಆದರೂ ರಫೇಲ್‍ನ ಬಗ್ಗೆ ಯಾವ ಪ್ರಮುಖ ಮಾಧ್ಯಮಗಳೂ ಬೋಫೋರ್ಸ್‍ನ ರೀತಿಯಲ್ಲಿ ಆಳಕ್ಕಿಳಿದು ಚರ್ಚಿಸಿಲ್ಲ. ಟಿ.ವಿ. ಚಾನೆಲ್‍ಗಳು ಆ ಬಗ್ಗೆ ಕುತೂಹಲವನ್ನೇ ವ್ಯಕ್ತಪಡಿಸುತ್ತಿಲ್ಲ. ಒಂದು ರೀತಿಯಲ್ಲಿ, ಮೂರು ದಶಕಗಳ ಹಿಂದೆ ಮಾಧ್ಯಮ ಕ್ಷೇತ್ರದಲ್ಲಿ ಯಾವ ಜಾಗೃತಿ ಮನೋಭಾವವಿತ್ತೋ ಅದು ಇವತ್ತು ವ್ಯಕ್ತವಾಗುತ್ತಿಲ್ಲ. ಬರಬರುತ್ತಾ ಭಾರತೀಯ ಮಾಧ್ಯಮ ರಂಗವು ಪ್ರಭುತ್ವದ ಅಡಿಯಾಳಾಗುವುದಕ್ಕೆ ಒಗ್ಗಿಕೊಳ್ಳುತ್ತಾ ಹೋಗತೊಡಗಿತೇ? ಕಾವಲು ನಾಯಿಯ ಹೊಣೆಗಾರಿಕೆಯಿಂದ ಜಿ ಹುಜೂರ್ ಮನಸ್ಥಿತಿಗೆ ಹೊರಳಿಕೊಂಡಿತೇ? ಪ್ರಭುತ್ವ ಮತ್ತು ಮಾಧ್ಯಮ ಕ್ಷೇತ್ರದ ನಡುವೆ ರಾಜಿ ಮನೋಭಾವ ಸೃಷ್ಟಿಯಾಯಿತೇ?

ದೇಶದ ಮಾಧ್ಯಮ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳು ಈ ಬಗೆಯ ಪ್ರಶ್ನೆಗಳಿಗೆ ಪ್ರತಿದಿನ ಇಂಬು ನೀಡುತ್ತಲೇ ಇವೆ. ಪ್ರಭುತ್ವವು ಮಾಧ್ಯಮ ರಂಗವನ್ನು ಕೊಂಡುಕೊಳ್ಳುವುದಕ್ಕೆ ಮತ್ತು ಒಪ್ಪದವುಗಳನ್ನು ದಮನಿಸುವುದಕ್ಕೆ ಮುಂದಾಗುತ್ತಿದೆ ಎಂಬುದು ದಿನೇ ದಿನೇ ನಿಚ್ಚಳವಾಗುತ್ತಿದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಇದಕ್ಕೆ ತಾಜಾ ಉದಾಹರಣೆ ಅಷ್ಟೇ.