ಆರೋಪ ನಿರಾಕರಿಸಿದ ನ್ಯೂಸ್ ಕ್ಲಿಕ್; ದಾಳಿ, ಬಂಧನ ಪೂರ್ವ ಯೋಜಿತ

0
188

ಸನ್ಮಾರ್ಗ ವಾರ್ತೆ

ನವದೆಹಲಿ: ಚೀನಾ ಪರ ಸುದ್ದಿಗಳನ್ನು ಹರಡಲು ಹಣಕಾಸಿನ ನೆರವು ಪಡೆದ ಆರೋಪವನ್ನು ಮಾಧ್ಯಮ ಸಂಸ್ಥೆ ನ್ಯೂಸ್ ಕ್ಲಿಕ್ ನಿರಾಕರಿಸಿದೆ. ನ್ಯೂಸ್ ಕ್ಲಿಕ್ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದೆ. ಚೀನಾದ ಹಿತಾಸಕ್ತಿಗಳಿಗೆ ಅನುಗುಣವಾಗಿ ಸುದ್ದಿ ನೀಡಲಾಗಿಲ್ಲ. ಪ್ರಕಟಿತ ಲೇಖನಗಳು ಸಾರ್ವಜನಿಕ ಡೊಮೇನ್‌ನಲ್ಲಿವೆ ಮತ್ತು ಚೀನಾದ ಆಸಕ್ತಿಯ ಯಾವುದೇ ಲೇಖನ ಅಥವಾ ವೀಡಿಯೊವನ್ನು ಸೂಚಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ನ್ಯೂಸ್ ಕ್ಲಿಕ್ ಹೇಳಿದೆ.

ಕಳೆದ ಒಂದು ತಿಂಗಳಿನಿಂದ ಸಂಸ್ಥೆಯ ಪತ್ರಕರ್ತರ ಮೇಲೆ ಪೊಲೀಸರು ನಿಗಾ ಇರಿಸಲಾಗಿದೆ. ಹಾಗಾಗಿ ಸದ್ಯದ ದಾಳಿಯು ಉನ್ನತ ರಾಜಕೀಯ ನಾಯಕತ್ವದ ಅರಿವಿನಿಂದಲೇ ನಡೆದಿದೆ ಎಂದು ನ್ಯೂಸ್ ಕ್ಲಿಕ್ ಆರೋಪಿಸಿದೆ.

ಅಧಿಕಾರಿಗಳು ಎಫ್‌ಐಆರ್‌ನ ಪ್ರತಿ ಅಥವಾ ಅಪರಾಧಗಳ ವಿವರಗಳನ್ನು ನೀಡಿಲ್ಲ. ಕ್ರಮಗಳನ್ನು ಪಾಲಿಸದೇ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯೂಸ್ ಕ್ಲಿಕ್ ಮಾಹಿತಿ ನೀಡಿದೆ. ಏತನ್ಮಧ್ಯೆ, ನ್ಯೂಸ್ ಕ್ಲಿಕ್‌ನ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಇಂದು ಬೆಳಗ್ಗೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ಘಟನೆಗೆ ಸಂಬಂಧಿಸಿದ 37 ಹಿರಿಯ ಪತ್ರಕರ್ತರ ಮನೆಗಳು ಸೇರಿದಂತೆ 30 ಕೇಂದ್ರಗಳಲ್ಲಿ ದಾಳಿ ಮತ್ತು ವಿಚಾರಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಒಂಬತ್ತು ಮಂದಿ ಮಹಿಳೆಯರಿದ್ದಾರೆ. ಮೊಬೈಲ್ ಫೋನ್, ಲ್ಯಾಪ್ ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ವಿಶೇಷ ಘಟಕದ ಪ್ರಧಾನ ಕಚೇರಿಗೆ ಕರೆತರಲಾಗಿದೆ.