ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?

0
408

✍️ ಶೌಕತ್ ಅಲಿ

ಸನ್ಮಾರ್ಗ ವಾರ್ತೆ

ಪ್ರವಾದಿ(ಸ) ಮದೀನಾದಲ್ಲಿ ಮಾಡಿದ ಘೋಷಣೆ ಮತ್ತು ಖಲೀಫರುಗಳ ನಡೆ

“ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.”

ಹಾಗೆಯೇ ದ್ವಿತೀಯ ಖಲೀಫಾ ಉಮರ್‌ರ ಈ ಪತ್ರದಲ್ಲೂ ಸಹಿಷ್ಣುತೆಯ ಅತ್ಯುಗ್ರ ಮಾದರಿಯಿದೆ.

“ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ ಉಮರ್, ಈಲಿಯಾದ ಜನರಿಗೆ ಬರೆದುಕೊಡುವ ಕರಾರು ಪತ್ರವಾಗಿದೆ. ಎಲ್ಲ ಪ್ರಾಣ, ಸೊತ್ತು, ಚರ್ಚ್, ಶಿಲುಬೆ ಹಾಗೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಅಂಶಗಳಿಗೂ ಭದ್ರತೆಯನ್ನು ಒದಗಿಸಲಾಗುವುದು. ಯಾರ ಚರ್ಚ್ ಗಳನ್ನೂ ನಿವಾಸವಾಗಿ ಬಳಸಬಾರದು ಅಥವಾ ನಾಶಗೊಳಿಸಬಾರದು. ಅವು ಅಥವಾ ಅವುಗಳಿಗೆ ಸಂಬಂಧಿಸಿದ  ಸೊತ್ತು ವಿತ್ತಗಳನ್ನು ಕಸಿಯಬಾರದು, ಹಾಗೆಯೇ ಅವರ ಸೊತ್ತು ಅಥವಾ ಶಿಲುಬೆಗಳನ್ನು ಸ್ವಾಧೀನಪಡಿಸಬಾರದು. ವಿಶ್ವಾಸದ ವಿಷಯದಲ್ಲಿ ಯಾರನ್ನೂ ಅಡ್ಡಿಪಡಿಸಬಾರದು, ಮತಾಂತರಕ್ಕೆ ಬಲಾತ್ಕರಿಸಬಾರದು. ಯಾರನ್ನೂ ಪೀಡಿಸಬಾರದು.”

ಪ್ರಥಮ ಖಲೀಫರಾದ ಹ. ಅಬೂಬಕರೊಡನೆ ರಾಷ್ಟ್ರದ ಕ್ರೈಸ್ತರು ತಮ್ಮ ನೂತನ ಚರ್ಚೊಂದನ್ನು ಉದ್ಘಾಟಿಸುವಂತೆ ವಿನಂತಿಸಿದರು. ನಿಮ್ಮ ಧರ್ಮಾಚಾರದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿದರೆ ಸಾಕೆಂದೂ ಪ್ರತ್ಯೇಕವಾಗಿ ತಿಳಿಸಿದ್ದರು. ಆಗ ಅಬೂಬಕರ್(ರ) ಹೀಗೆಂದರು: “ನಾನು ಉದ್ಘಾಟಿಸಿದರೆ ನನ್ನ ಕಾಲಾನಂತರ ನಿಜಸ್ಥಿತಿಯನ್ನು ಅರಿಯದವರು ಇದು ನಮ್ಮ ಖಲೀಫರು ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಅದು ಗಲಭೆಗೆ ಹೇತುವಾಗಬಹುದು.”

ಮಹಾನುಭಾವರಾದ ಉಮರ್ ಫಾರೂಕ್(ರ), ಫೆಲೆಸ್ತೀನ್‌ನಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯಶಾಹಿತ್ವವನ್ನು ಕೊನೆಗೊಳಿಸಿದ್ದರು. ಅವರು ಹಕ್ರ‍್ಯುಲೆಸ್‌ನ ದುರಾಡಳಿತವನ್ನು ಕೊನೆಗೊಳಿಸಿ ಅಲ್ಲಿನ ಜನರಿಗೆ ನೆಮ್ಮದಿ ನೀಡಿದ್ದರು. ಆದ್ದರಿಂದಲೇ ಅಲ್ಲಿಗೆ ಭೇಟಿ ನೀಡಿದ ಖಲೀಫರನ್ನು ಅಲ್ಲಿನ ಪ್ರಜೆಗಳು ಪ್ರೀತ್ಯಾದರಗಳಿಂದ ಸ್ವಾಗತಿಸಿದ್ದರು. ಸ್ಥಳೀಯ ಕ್ರೈಸ್ತ ಪುರೋಹಿತನಾಗಿದ್ದ ಸಫರ‍್ನಿಯಾಸ್ ಮತ್ತು ಪರಿವಾರವು ಅದರಲ್ಲಿ ಮುಂಚೂಣಿಯಲ್ಲಿತ್ತು. ಖಲೀಫರು ಅವರ ಜತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅದರಲ್ಲಿ ಚರ್ಚುಗಳೂ ಸೇರಿದ್ದವು. ಝುಹರ್ (ಮಧ್ಯಾಹ್ನ) ನಮಾಝ್‌ನ ವೇಳೆಯಾಯಿತು. ಈ ವಿಷಯವನ್ನು ತಿಳಿದ ಪೇಟ್ರಿಯಾರ್ಕಿಸ್,  ಉಮರ್ ಮತ್ತು ಸಂಗಡಿಗರೊಡನೆ ಅಲ್ಲಿನ ಚರ್ಚ್‌ನಲ್ಲಿ ನಮಾಝ್ ಮಾಡುವಂತೆ ವಿನಂತಿಸಿದರು. ಆದರೆ ಸಫರ‍್ನಿಯಾಸಿಯ ಈ ವಿನಂತಿಯನ್ನು ಖಲೀಫರು ಕೃತಜ್ಞತೆಯಿಂದ ತಿರಸ್ಕರಿಸಿದರು. ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು- “ನಾನು ಇಲ್ಲಿ ನಮಾಝ್  ಮಾಡಿದರೆ ಮುಂದೆ ಯರಾದರೂ ಅವಿವೇಕಿ ಮುಸ್ಲಿಮರು ಅದರ ವಾರೀಸು ಹಕ್ಕಿಗಾಗಿ ವಾದಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.” ಅಂತಹ ಅಕ್ರಮಕ್ಕೆ ಅವಕಾಶವಾಗಬಾರದೆಂಬ ಮುಂದಾಲೋಚನೆಯಿಂದ ಉಮರ್(ರ), ಚರ್ಚ್‌ನ ಹೊರಾಂಗಣದ ಖಾಲಿ ಸ್ಥಳದಲ್ಲಿ ಬಟ್ಟೆ ಹಾಸಿ ನಮಾಝ್ ಮಾಡಿದರು.

ಇನ್ನೊಂದು ಘಟನೆ  
ರಾಜ್ಯಪಾಲ ಅಮ್ರ್ ಬಿನ್ ಅಸ್‌ರು ಓರ್ವ ಕ್ರೈಸ್ತ ಮಹಿಳೆಯ ಮನೆಯನ್ನು ಬಲಾತ್ಕಾರದಿಂದ ಮಸೀದಿಗೆ ಸೇರಿಸಿದರು. ಆ ಕುರಿತು ಮಹಿಳೆಯು ಖಲೀಫಾ ಉಮರ್‌ರಿಗೆ ದೂರು ನೀಡಿದಳು. ದೂರು ದೊರೆತ ತಕ್ಷಣವೇ ಉಮರ್ ಫಾರೂಕ್‌ರು ರಾಜ್ಯಪಾಲರನ್ನು ಕರೆಸಿ ವಿಚಾರಣೆ ನಡೆಸಿದರು. ಪ್ರಕರಣವನ್ನು ನಿಜವೆಂದು ಒಪ್ಪಿಕೊಂಡು ರಾಜ್ಯಪಾಲರು ಅದಕ್ಕೆ ಪ್ರೇರಕವಾದ ಸಮಜಾಯಿಷಿ ನೀಡಿದರು.  ಮುಸ್ಲಿಮರ ಜನಸಂಖ್ಯೆ ಬಹಳಷ್ಟು ಹೆಚ್ಚಿತು. ಮಸೀದಿಯಲ್ಲಿ ಸ್ಥಳಾವಕಾಶ ಕಡಿಮೆಯಾಗಿ ತೊಂದರೆಯಾಯಿತು. ಮಸೀದಿಯನ್ನು ವಿಶಾಲಗೊಳಿಸಲು ತೀರ್ಮಾನಿಸಿದಾಗ ಸಮೀಪದಲ್ಲಿ ಆ ಮಹಿಳೆಯ ಮನೆಯಿತ್ತು. ಅದಕ್ಕೆ ನ್ಯಾಯೋಚಿತ ಬೆಲೆ ನೀಡುವೆವೆಂದು ತಿಳಿಸಿದರೂ ಆಕೆ ಮಾರಲು ಒಪ್ಪಲಿಲ್ಲ. ಆದ್ದರಿಂದ ಮನೆ ಕೆಡಹಿ ಮಸೀದಿಗೆ ಸೇರಿಸಬೇಕಾಯಿತು. ಅದರ ಬೆಲೆಯನ್ನು ಆಕೆ ಬಯಸಿದ ಕೂಡಲೇ ಪಡೆಯಲಿಕ್ಕಾಗಿ ಸಾರ್ವಜನಿಕ ಖಜಾನೆಯಲ್ಲಿರಿಸಿದ್ದೇನೆ.” ಸಾಮಾನ್ಯವಾಗಿ ಇದು ಇಂದಿನ ಕಾಲದಲ್ಲಿಯೂ ಎಲ್ಲೆಡೆ ರೂಢಿಯಲ್ಲಿರುವ ಕ್ರಮವಾಗಿದೆ. ಆದರೆ ಉಮರ್ ಫಾರೂಕ್‌ರ ಧೋರಣೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವರು ಅಮ್ರ್ ರ ವಿವರಣೆಯನ್ನು  ಸಂಪೂರ್ಣ ಆಲಿಸಿದ ಬಳಿಕ, ಮಸೀದಿಯ ಆ ಭಾಗವನ್ನು ಕೆಡಹಿ ಕ್ರೈಸ್ತ ಮಹಿಳೆಯ ಮನೆಯನ್ನು ಯಥಾಸ್ಥಾನದಲ್ಲಿ ಕಟ್ಟಿಸಿಕೊಡುವಂತೆ ಆದೇಶಿಸಿದರು. ಮಸೀದಿಯ ಭಾಗವನ್ನು ಕೆಡವಿ ಆ ಮಹಿಳೆಗೆ ಮನೆ ಮರಳಿಸಲಾಯಿತು.

ಕಅಬಾದ ಶುದ್ದೀಕರಣ
ಪ್ರವಾದಿ ಮುಹಮ್ಮದ್(ಸ)ರವರ ಕಾಲದಲ್ಲಿ ಖುರೈಷ್ ಮತ್ತು ಅರಬ್ ನೇತಾರರು ಇಬ್ರಾಹಿಮ್ ಧರ್ಮದ ಅನುಯಾಯಿಗಳು ಆಗಿದ್ದರು. ಅದರ ಜೊತೆ ಬಹುದೇವಾರಾಧನೆ ಅವರಲ್ಲಿ ವ್ಯಾಪಕವಾಗಿ ಬೇರೂರಿತ್ತು. ನಮಾಝ್ ಮತ್ತು ಹಜ್ಜ್ ಕರ್ಮಗಳು ಜಾಹಿಲಿಯ್ಯ ಕಾಲದಲ್ಲಿ ಅಸ್ತಿತ್ವದಲ್ಲಿತ್ತು. ಅದರಲ್ಲಿ ಬಹಳಷ್ಟು ಅನಾಚಾರಗಳು ಇತ್ತು. ಮಕ್ಕಾ ಮುಷ್ರಿಕರು ಅಲ್ಲಾಹನನ್ನೇ ಆಕಾಶ ಭೂಮಿಗಳ ಸೃಷ್ಟಿಕರ್ತ ಎನ್ನುತ್ತಿದ್ದರು. ಅದರ ಜೊತೆ ಇತರ ಸಣ್ಣ ಪುಟ್ಟ ದೇವರು ದೇವತೆಗಳನ್ನು ಸಹಭಾಗಿಗೊಳಿಸುತ್ತಿದ್ದರು. ಪ್ರವಾದಿ ಮುಹಮ್ಮದ್(ಸ) ಅವರ ಮನೆತನದಲ್ಲಿ ಹುಟ್ಟಿದರು ಮತ್ತು ಅವರನ್ನು ಸಂಸ್ಕರಿಸಿದರು ಅವರ ವಿಶ್ವಾಸವನ್ನು ಶುದ್ಧೀಕರಿಸಿದರು. ಏಕದೇವಾರಾಧನೆಯ ಕಲ್ಪನೆಯ  ಶಿಕ್ಷಣ ನೀಡಿ ಅವರಿಂದಲೇ ಏಕದೇವಾರಾಧನೆಯ ಕೇಂದ್ರ ಕಾಬಾವನ್ನು ಶುದ್ಧೀಕರಣಗೊಳಿಸಿದರು. ಅಲ್ಲಿ ಅವರಲ್ಲಿ ಅನ್ಯ ಧರ್ಮ ಎಂಬ  ಕಲ್ಪನೆ ಇರಲಿಲ್ಲ. ಯಹೂದಿ ನಸಾರಾ ಮಜೂಸಿಗಳು ಅನ್ಯಧರ್ಮ ಎಂಬ ಕಲ್ಪನೆ ಇತ್ತು. ಅನ್ಯಧರ್ಮದ ವಿಶ್ವಾಸಾಚಾರವನ್ನು ಪ್ರವಾದಿ ಮುಹಮ್ಮದ್(ಸ) ಬಹಳ ಗೌರವಿಸುತ್ತಿದ್ದರು ಮತ್ತು ಅವರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ‍್ಯ ನೀಡಿದ್ದರು.
ಪ್ರಖ್ಯಾತ ಲೇಖಕ ಮಾರ್ಟಿನ್ ಲಿಂಗ್ಸ್ ರವರು ಬರೆದ ಸೀರತ್ ಗ್ರಂಥ Muhammad: His Life Based on the earliest sources: Martin Lings  ಎಂಬ ಕೃತಿಯಲ್ಲಿ ಅವರು ಬರೆಯುತ್ತಾರೆ, (ಈ ಗ್ರಂಥ ಬರೆಯುವಾಗ ಅವರು  ಇನ್ನೂ ಇಸ್ಲಾಂ ಧರ್ಮ ಸ್ವೀಕರಿಸಿರಲಿಲ್ಲ).

ಕಾಬಾವನ್ನು ಶುದ್ಧಗೊಳಿಸುವಾಗ ಸಹಾಬಿಗಳು ಎರಡು ಮೂರ್ತಿಯನ್ನು ಪ್ರವಾದಿಯ ಸಮೀಪಕ್ಕೆ ತಂದರು. ಅದು ಮೇರಿ ಮತ್ತು ಬಾಲ  ಏಸುವಿನ ಮೂರ್ತಿ ಆಗಿತ್ತು. ಒಡೆಯ ಬೇಕೇ ಎಂದು ಸಹಾಬಿಗಳು ಪ್ರಶ್ನಿಸಿದರು. ಪ್ರವಾದಿ(ಸ) ರವರು ಅದನ್ನು ಒಡೆಯುವುದರಿಂದ ಸಹಾಬಿಗಳನ್ನು ತಡೆದರು. ಅದು ಅನ್ಯಧರ್ಮದ ಗೌರವಕ್ಕೆ ಕುಂದುಂಟು ಮಾಡುತ್ತದೆ. ಅದನ್ನು ಗೌರವಿಸುವ ಧರ್ಮೀಯರ ಮನ ನೋಯುತ್ತದೆ ಮತ್ತು ಅದನ್ನು ಕ್ರೈಸ್ತರಿಗೆ ಮರಳಿಸುವಂತೆ ಆಶಯ ವ್ಯಕ್ತ ಪಡಿಸಿದರು.”

ನಿಜವಾಗಿ ಇದು ಶಿರ್ಕ್ ಗೆ ಪ್ರೋತ್ಸಾಹವಲ್ಲ. ಬದಲಾಗಿ ಪ್ರವಾದಿ(ಸ) ಇತರ ಧರ್ಮದವರ ಪೂಜಾ ಕುರುಹುಗಳನ್ನು ಗೌರವಿಸುವ ಅಪ್ಪಟ ಧಾರ್ಮಿಕ ಸೌಹಾರ್ದವಾಗಿತ್ತು. ಕಾಬಾ ಎಂಬುದು ಸನಾತನ ಏಕದೇವಾರಾಧನೆಯ ಕೇಂದ್ರ ಮತ್ತು ಅದನ್ನು ಪ್ರವಾದಿ(ಸ) ಪುನಃ ಅದರ ನೈಜ ಸ್ಥಾನಕ್ಕೆ ತಂದು ನಿಲ್ಲಿಸಿದರು.

ಕಾಬಾ ತನ್ನ ಪಿತಾಮಹ ಇಬ್ರಾಹಿಮರು ಸ್ಥಾಪಿಸಿದ ಏಕದೇವಾರಾಧನೆಯ ಕೇಂದ್ರವಾಗಿತ್ತು. ಅದು ಪರ ಧರ್ಮದ ಕೇಂದ್ರವಾಗಿರಲಿಲ್ಲ. ಆದ್ದರಿಂದ ಅದನ್ನು ಆ ಜನತೆಯಿಂದಲೇ ಶುದ್ಧಗೊಳಿಸಿದರು. ಇದರ ಹೊರತುಪಡಿಸಿ ಯಾರದೇ ಪರ ಧರ್ಮೀಯರ ಪೂಜಾ ಕುರುಹುಗಳನ್ನು ಘಾಸಿಗೊಳಿಸಿದ ಒಂದೇ ಒಂದು ಉದಾಹರಣೆ ಪ್ರವಾದಿ(ಸ)ರವರ ಜೀವನದಲ್ಲಿ ಸಿಗುವುದಿಲ್ಲ.

ಆದರೆ ಕ್ಷೋಭೆ ಹರಡಲು ಕಪಟ ವಿಶ್ವಾಸಿಗಳು ಕಟ್ಟಿದ ಮಸ್ಜಿದುಝಿರಾರ್ ಎಂಬ ಮಸೀದಿಯನ್ನು ಪ್ರವಾದಿ(ಸ) ಕೆಡವಿ ನೆಲಸಮಗೊಳಿಸಿದರು.

ಪ್ರವಾದಿ ಮುಹಮ್ಮದ್(ಸ) ಮತ್ತು ಪರಧರ್ಮ ಸಹಿಷ್ಣುತೆ
ಪ್ರವಾದಿ(ಸ) ಮತ್ತು ಅವರ ಸಂಗಾತಿಗಳು ಅನ್ಯ ಧರ್ಮೀಯರಿಗೆ ರಕ್ಷಣೆ ನೀಡಿದಾಗ ಅವರ ವಿಶ್ವಾಸ ಮತ್ತು ಆರಾಧಾನಾ ಸ್ವಾತಂತ್ರ‍್ಯಕ್ಕೂ  ಭದ್ರತೆ ನೀಡಿದ್ದರು. ನಜ್ರಾನ್‌ನ ಕ್ರೈಸ್ತರ ನಿಯೋಗ ಪ್ರವಾದಿ(ಸ)ರವರನ್ನು ಮಸ್ಜಿದುನ್ನಬವಿಯಲ್ಲಿ ಬಂದು ಭೇಟಿ ಆಯಿತು. ಬಹಳ ಸಮಯಗಳನ್ನು ಅವರು ಜೀಸಸ್ ಬಗ್ಗೆ ಪ್ರವಾದಿ(ಸ) ರವರಲ್ಲಿ ಕೇಳಿ ತಿಳಿದುಕೊಂಡರು. ಆಗ ಅವರ ಪ್ರಾರ್ಥನೆಯ ಸಮಯವಾಯಿತು. ಪ್ರವಾದಿ(ಸ)ರವರು ಅವರಿಗೆ ಅವರ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿ ಅನುವು ಮಾಡಿಕೊಟ್ಟರು. ಅವರು ತಮ್ಮ ಪ್ರಾರ್ಥನೆಯನ್ನು  ಮುಗಿಸಿದರು. ಆ ಬಳಿಕ ಕ್ರೈಸ್ತರೊಡನೆ ಪ್ರವಾದಿವರ್ಯರು(ಸ) ಮಾಡಿಕೊಂಡ ಒಪ್ಪಂದದ ಶರ್ತದಲ್ಲಿ ಹೀಗಿದೆ: “ನಜ್ರಾನ್‌ನ ಕ್ರೈಸ್ತರಿಗೂ  ಅವರ ಸಂಗಡಿಗರಿಗೂ ಅಲ್ಲಾಹನ ಅಭಯ ಮತ್ತು ದೇವ ಪ್ರವಾದಿಯಾದ ಮುಹಮ್ಮದ್‌ರ ಕರ್ತವ್ಯ ಬದ್ಧ ಸಂರಕ್ಷಣೆಯಿದೆ. ಇದು ಅವರ ಪ್ರಾಣ, ಧರ್ಮ, ಆಸ್ತಿ, ಸಂಪತ್ತು ಇತ್ಯಾದಿಗಳಿಗೂ ಇಲ್ಲಿ ಉಪಸ್ಥಿತರಿರುವವರಿಗೂ ಇಲ್ಲದವರಿಗೂ ಅವರ ಒಂಟೆ ಮತ್ತು ಪ್ರತಿನಿಧಿ ತಂಡಗಳಿಗೂ ಶಿಲುಬೆ ಮತ್ತು ಚರ್ಚ್ ಗಳಂಥ ಧಾರ್ಮಿಕ ಸಂಕೇತಗಳಿಗೂ ಅನ್ವಯವಾಗುತ್ತದೆ. ಪ್ರಚಲಿತ ಸ್ಥಿತಿಯನ್ನು ಕಿಂಚಿತ್ತೂ ಬದಲಾಯಿಸುವುದಿಲ್ಲ. ಅವರ ಯಾವ ಹಕ್ಕುಗಳನ್ನೂ ಧಾರ್ಮಿಕ ಚಿಹ್ನೆಗಳನ್ನೂ ಬದಲಾಯಿಸುವುದಿಲ್ಲ. ಅವರ ಪಾದ್ರಿ, ಪುರೋಹಿತ ಅಥವಾ ಚರ್ಚ್ ಸೇವಕನನ್ನು ಸ್ಥಾನ ಭ್ರಷ್ಟಗೊಳಿಸುವುದಿಲ್ಲ.”

ಡಾ| ಮುಸ್ತಫ ಸ್ಸಬಾಯಿ ಹೀಗೆ ಬರೆದಿದ್ದಾರೆ. ಕ್ರೈಸ್ತರು ಅಮವಿ ಆಡಳಿತ ಕಾಲದಲ್ಲಿಯೇ ತಮ್ಮ ಧಾರ್ಮಿಕ ಆಚಾರ ಮತ್ತು ಉತ್ಸವಗಳನ್ನು  ಸಾರ್ವಜನಿಕ ಸ್ಥಳಗಳಲ್ಲಿ ನೆರವೇರಿಸುತ್ತಿದ್ದರು. ಶಿಲುಬೆ ಹೊತ್ತು ಮೆರವಣಿಗೆ ನಡೆಸುವುದು ಅವರ ರೂಢಿಯಾಗಿತ್ತು. ಧಾರ್ಮಿಕ ನಾಯಕರು ಸಾಂಪ್ರದಾಯಿಕ ಉಡುಪು ಧರಿಸಿ ಅದರಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಪೇಟ್ರಿಯಾರ್ಕಿಸ್ ಮೈಕೆಲ್ ಒಂದು ಬೃಹತ್ ಮೆರವಣಿಗೆಯೊಂದಿಗೆ ಅಲೆಕ್ಸಾಂಡ್ರಿಯಾ ನಗರಕ್ಕೆ ಆಗಮಿಸಿದರು. ಶಿಲುಬೆ, ಮೇಣದ ಬತ್ತಿ ಮತ್ತು ಬೈಬಲ್ ಹಿಡಿದವರು ಅದರ ಮುಂಚೂಣಿಯಲ್ಲಿದ್ದರು. ಭಕ್ತ ಜನರು ತಮ್ಮ ಪೇಟ್ರಿಯಾರ್ಕಿಸನ ಶ್ರೇಷ್ಠತೆಯನ್ನು ಗಟ್ಟಿಯಾಗಿ ಘೋಷಿಸುತ್ತಿದ್ದರು. ಈ ಘಟನೆ ಹಿಶಾಮ್ ಬಿನ್ ಅಬ್ದುಲ್ ಮಲಿಕ್‌ರ ಕಾಲದಲ್ಲಿ ನಡೆದಿತ್ತು.

“ಹಾರೂನ್ ರಶೀದ್‌ರ ಕಾಲದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಕ್ರೈಸ್ತರು ದೊಡ್ಡ ಶಿಲುಬೆಗಳನ್ನು ಹೊತ್ತು ಭಾರೀ ಮೆರವಣಿಗೆ ನಡೆಸಿದ್ದರು.”

ಕುರ್‌ಆನ್ ಹೇಳುತ್ತದೆ, ಅವರು ಅಲ್ಲಾಹನನ್ನು ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ. ಇದರಿಂದ  ಮುಂದುವರಿದು ಅವರು ಶಿರ್ಕ್ ಗಿಂತಲೂ ಮುಂದುವರಿದು ಅಜ್ಞಾನದಿಂದ ಅಲ್ಲಾಹನನ್ನು ತೆಗಳತೊಡಗುವರು. ನಾವು ಇದೇ  ರೀತಿಯಲ್ಲಿ ಪ್ರತಿಯೊಂದು ಸಮುದಾಯಕ್ಕೆ ಅದರ ಕರ್ಮಗಳನ್ನು ಚೆಲುವಾಗಿಸಿದ್ದೇವೆ. ನಂತರ ಎಲ್ಲರಿಗೂ ಅವರ ಪ್ರಭುವಿನ ಬಳಿಗೆ  ಮರಳಲಿಕ್ಕಿದೆ ಆಗ ಅವರೇನು ಮಾಡುತ್ತಿದ್ದ ರೆಂದು ಅವರಿಗೆ ತಿಳಿಸುವನು. (ಕುರ್‌ಆನ್ 6: 108)

ಪ್ರವಾದಿ ಮುಹಮ್ಮದ್(ಸ) ಕೊಟ್ಟ ಒಪ್ಪಂದ ಮಾದರಿ
ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು: “ಯಾರಾದರೂ, ಒಪ್ಪಂದ ಮಾಡಿಕೊಂಡ ಮುಸ್ಲಿಮೇತರನ ಹತ್ಯೆ ಮಾಡಿದರೆ, ಅವನು  ನಲ್ವತ್ತು ವರ್ಷ ಪ್ರಯಾಣಿಸಿ ಹೋಗಬೇಕಾದಷ್ಟು ದೂರದವರೆಗೂ ಹಬ್ಬುವಂತಹ ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರನು.” (ಅಬ್ದುಲ್ಲಾ ಬಿನ್ ಅಮ್ರ್ – ಬುಖಾರಿ)

ಮೇಲಿನ ಪ್ರವಾದಿ ವಚನದಲ್ಲಿ ಒಪ್ಪಂದಕ್ಕೆ `ಮುಆಹಿದ್’ ಎಂಬ ಪದವನ್ನು ಪ್ರಯೋಗಿಸಲಾಗಿದೆ. ಇದು ಪ್ರವಾದಿ ಮುಹಮ್ಮದ್(ಸ)  ಕಾಲದಲ್ಲಿ ಅವರಿಗೆ ಅಧಿಕಾರ ಪ್ರಾಪ್ತವಾದಾಗ ಆ ರಾಷ್ಟ್ರದಲ್ಲಿ ಪೌರರಾಗಿರುವ ವಿವಿಧ ಧರ್ಮಗಳ ಪೌರರು ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರು ಶಾಂತಿ ಮತ್ತು ಸೌಹಾರ್ದದ ಒಪ್ಪಂದ ಮಾಡಿಕೊಂಡ ಕರಾರುಬದ್ಧ ಪ್ರಜೆಗಳ ಕುರಿತು
ಹೇಳುವ ಪದವಾಗಿದೆ. ಮುಆಹಿದ್ ಎಂದರೆ ಒಪ್ಪಂದ ಬದ್ಧ ಎಂಬುದು ಇದರ ಅರ್ಥವಾಗಿದೆ.

ಉದಾ: ಈಗಿನ ಕಾಲದಲ್ಲಿ ಸಂವಿಧಾನದ ಮೂಲಕ ನಾವು ಒಪ್ಪಂದ ಮಾಡುತ್ತೇವೆ. ಒಮ್ಮೆ ಅಮೆರಿಕದಲ್ಲಿ ಎಲ್ಲೋ ಒಂದು ಕಡೆ ಯಾರೋ ಭಯೋತ್ಪಾದಕ ಕೃತ್ಯ ಎಸಗಿದರು ಎಂದು ಕ್ರೋಧದಿಂದ ಓರ್ವ ಒಪ್ಪಂದ ಬದ್ಧ ಅಮಾಯಕ ಸಿಖ್ ವ್ಯಕ್ತಿಯನ್ನು ಕಿಡಿಗೇಡಿಗಳು ಹಲ್ಲೆ  ಮಾಡಿ ಕೊಂದಿದ್ದರು. ಸಿಖ್ ಅಲ್ಲ ಯಾವುದೇ ಧರ್ಮದ ಅಮಾಯಕನ ಮೇಲೆ ಹಲ್ಲೆ ದೊಡ್ಡ ಅಪರಾಧವೇ..
ಇಸ್ಲಾಮಿನ ಉದ್ದೇಶ ಎಲ್ಲರ ಜೀವ ಸೊತ್ತುಗಳ ರಕ್ಷಣೆ. ಈ ರಕ್ಷಣೆಗಾಗಿ ಎಲ್ಲಿಯವರೆಗೆ ಇಸ್ಲಾಮ್ ಚಿಂತಿಸುತ್ತದೆ ಎಂದರೆ ಆ ಒಪ್ಪಂದ ಬದ್ದ ಸಮುದಾಯಕ್ಕೆ ಸೇನಾ ಹೋರಾಟದಲ್ಲಿ ಭಾಗಿ ಯಾಗುವುದಕ್ಕೆ ರಿಯಾಯತಿ ನೀಡಲಾಗಿದೆ. ಆದರೂ ಅವರ ಸೊತ್ತು ವಿತ್ತ  ಜೀವಗಳ ಧಾರ್ಮಿಕ ಅಸ್ಮಿತೆಗಳ ರಕ್ಷಣೆ ಮುಹಮ್ಮದ್(ಸ) ರವರ ಅನುಯಾಯಿಗಳಿಗೆ ಪರಮ ಕಡ್ಡಾಯವಾಗಿದೆ.

(ಲೇಖಕರು, ಎಸ್‌ಐಓ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ)