‘ಅಲ್ ಖೈದಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಕುರಿತು ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ’: 1 ವರ್ಷದ ಬಳಿಕ ಮೌಲಾನಾರಿಗೆ ಜಾಮೀನು ನೀಡಿದ ಹೈಕೋರ್ಟ್

0
241

ಸನ್ಮಾರ್ಗ ವಾರ್ತೆ

ಜಾರ್ಖಂಡ್: ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(UAPA)ಅಡಿಯಲ್ಲಿ ಒಂದು ವರ್ಷದಿಂದ ಜೈಲಿನಲ್ಲಿರಿಸಲಾಗಿದ್ದ ಮುಹಮ್ಮದ್ ಕಲಿಮುದ್ದೀನ್ ಮುಜಾಹಿರಿ ಎಂಬ ಮೌಲಾನಾರಿಗೆ ನವೆಂಬರ್ 3ರ ಮಂಗಳವಾರ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ.

ಜಾರ್ಖಂಡ್ ಹೈಕೋರ್ಟ್ ತನ್ನ ಆದೇಶದಲ್ಲಿ, “ಅಲ್-ಖೈದಾ ಸಂಘಟನೆಯ ಯಾವುದೇ ಚಟುವಟಿಕೆಗಳಲ್ಲಿ ಅರ್ಜಿದಾರರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗಿಲ್ಲ ಅಲ್ಲದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾವುದೇ ಸಂಸ್ಥೆಯಿಂದ ಈ ಅರ್ಜಿದಾರರಿಗೆ ಹಣ ಲಭಿಸಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖಾ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.” ಎಂದು ಲೈವ್ ಲಾ ವರದಿ ಮಾಡಿದೆ.

ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಅವರನ್ನು 2019 ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಇಬ್ಬರು ಸಹ-ಸಂಚುಕೋರರಾದ ​​ಅಹ್ಮದ್ ಮಸೂದ್ ಅಕ್ರಮ್ ಮತ್ತು ಅಬ್ದುಲ್ ರಹಮಾನ್ ಕಟ್ಕಿಯನ್ನು ಸಚ್ಚಿ ಮದರಸಾದಲ್ಲಿರುವ ಅವರ ಮನೆಯಲ್ಲಿ ಭೇಟಿಯಾದರು ಮತ್ತು ತರುವಾಯ ‘ಜಿಹಾದಿಯಾಗಿ ರಾಷ್ಟ್ರ ವಿರೋಧಿ ಕೆಲಸ’ ಮಾಡಲು ಗುಜರಾತಿನಿಂದ ಹಣವನ್ನು ಪಡೆದರು ಎಂದು ಮುಜಾಹಿರಿ ವಿರುದ್ಧ ಆರೋಪಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

2019 ರಲ್ಲಿ ಆಗಿನ ಹೆಚ್ಚುವರಿ ಮಹಾನಿರ್ದೇಶಕ ಎಂ.ಎಲ್. ಮೀನಾ, “ಕಲಿಮುದ್ದೀನ್ ಅಲ್ ಖೈದಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಅವರನ್ನು ಟಾಟನಗರ ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದೆ. ಅವರು ಭಾರತೀಯ ಉಪಖಂಡದಲ್ಲಿ ಜಿಹಾದ್‌ಗಾಗಿ ಯುವಕರನ್ನು ಸಿದ್ಧಪಡಿಸುತ್ತಿದ್ದರು ಮತ್ತು ಪ್ರೇರೇಪಿಸುತ್ತಿದ್ದರು” ಎಂದು ಹೇಳಿದ್ದರು.