ನೋ ಮೋದಿ ನೋ ಮೌದೂದಿ ಎಂಬ ಘೋಷಣೆ ಯಾಕೆ ಮೊಳಗಿತ್ತೆಂದರೆ…-ಸಂದರ್ಶನ

0
860

1982 ಅಕ್ಟೋಬರ್ 19ರಂದು ಹುಟ್ಟಿದ ಎಸ್.ಐ.ಓ. (ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ) ಕ್ಯಾಂಪಸ್ ಕೇಂದ್ರಿತ ಚಟುವಟಿಕೆಗಳನ್ನು ನಡೆಸುತ್ತಿರುವ ಭಾರತದ ವಿದ್ಯಾರ್ಥಿ ಸಂಘಟನೆ. ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಮಟ್ಟ- ಹೀಗೆ ಹೊಣೆಗಾರಿಕೆಯನ್ನು ವಿಭಜಿಸಿಕೊಂಡು ಪ್ರಜಾತಂತ್ರ ರೂಪದಲ್ಲಿ ಕೆಲಸ ಮಾಡುತ್ತಿರುವ ಎಸ್.ಐ.ಓ. ದೇಶದಾದ್ಯಂತ ಚಟುವಟಿಕೆಯಲ್ಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೊಸ ಅಧ್ಯಕ್ಷ ರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. 2019 ಮತ್ತು 20ರ ಅವಧಿಗೆ ಈ ಬಾರಿ ಲಬೀದ್ ಶಾಫಿ ಆಲಿಯಾ ಇವರು ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯವರು.  ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಬಿ.ಎಡ್. ಪದವಿಯನ್ನು ಪಡೆದಿರುವ ಇವರು ಆಲಿಯಾ ಅರಬಿಕ್ ಕಾಲೇಜಿನಿಂದ ಫಝೀಲತ್ (ಪದವಿ) ಪಡೆದಿರುತ್ತಾರೆ. ಇವರೊಂದಿಗೆ ಸನ್ಮಾರ್ಗ ಉಪ ಸಂಪಾದಕರಾದ ಸಲೀಮ್ ಬೋಳಂಗಡಿ ನಡೆಸಿದ ಸಂದರ್ಶನ ಇಲ್ಲಿದೆ. – ಸಂ.

?ನಿಮ್ಮ ಮುಂದೆ ಎರಡು ವರ್ಷಗಳಿವೆ. ಏನು ನಿಮ್ಮ ಕನಸುಗಳು?

√ಎರಡು ವರ್ಷಗಳಿಗೆ ಅದರದ್ದೇ ಆದ ಸಲಹಾ ಸಮಿತಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಸಲಹಾ ಸಮಿತಿ ಸಭೆಯಲ್ಲಿ ನಮ್ಮ ಕಾರ್ಯಯೋಜನೆ ಗಳ ಬಗ್ಗೆ ಚರ್ಚಿಸಿ ನಿರ್ಧಾರ ತಾಳುತ್ತೇವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಕೋಮು ವಾದವು ವೈಭವೀಕರಣಗೊಂಡಿದೆ. ಈ ಕೋಮುವಾದಿ ಅಜೆಂಡಾಗಳಿಗೆ ಬಲಿ ಯಾಗದಂತೆ ವಿದ್ಯಾರ್ಥಿಗಳನ್ನು ತಡೆದು ಕ್ರಿಯಾತ್ಮಕವಾಗಿ ಸೃಜನಾತ್ಮಕವಾಗಿ ಅವರಲ್ಲಿ ಸದ್ಭಾವನೆ ಬೆಳೆಸುವಂತಹ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿಯೇ ಒಂದು ಪಾಲಿಸಿಯನ್ನೂ ಈ ಬಾರಿ ತಯಾರಿಸಿದ್ದೇವೆ. ಕ್ಯಾಂಪಸ್‍ಗಳಲ್ಲಿಯೂ ಭೀತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ. ವೇಮುಲಾ ಅಥವಾ ನಜೀಬ್ ಪ್ರಕರಣವನ್ನು ಇದಕ್ಕೆ ಉದಾಹರಿಸಬಹುದು. ಇಂತಹ ಕಡೆಗಳಲ್ಲಿ ವಿದ್ಯಾರ್ಥಿ ಅಲೆಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ಈಗಿನ ವಿದ್ಯಾರ್ಥಿಗಳು ಅನೇಕ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಧಾರ್ಮಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳೂ ಇವೆ. ಕಳೆದ ವರ್ಷ ಈ ವಿಚಾರದಲ್ಲೊಂದು ಪಾಲಿಸಿಯ ಆಧಾರದಲ್ಲಿ ಬಹಳಷ್ಟು ಕೆಲಸ ಮಾಡಿದ್ದೆವು. ವಿದ್ಯಾರ್ಥಿಗಳಲ್ಲಿ ಸ್ವಉದ್ಯೋಗದ ಕಂಪೆನಿಯನ್ನು ತೆರೆಯುವ ಮಟ್ಟಕ್ಕೆ ಅವರಿಗೆ ಪ್ರೇರಣೆ ನೀಡಿದ್ದೇವೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಈ ಪ್ರಯತ್ನ ನಡೆಸಿದ್ದೆವು. ಅದನ್ನು ಈ ಬಾರಿಯು ಮುಂದುವರಿಸುವ ಯೋಜನೆಯಿದೆ.

? ವಿದ್ಯಾರ್ಥಿಗಳು ಎಸ್.ಐ.ಓ.ವನ್ನೇ ಆರಿಸಿಕೊಳ್ಳಬೇಕೆಂದು ನೀವು ಏಕೆ ಬಯಸುತ್ತೀರಿ? ಎಸ್.ಐ.ಓ.ನಲ್ಲಿ ಏನಿದೆ?

√ ಪ್ರಥಮವಾಗಿ ಎಸ್.ಐ.ಓ. ಸಂವಿಧಾನಾತ್ಮಕವಾದ ರೂಪುರೇಷೆಯನ್ನು ಹಾಕಿಕೊಂಡಿದೆ. ಸಮಾಜಕ್ಕೆ ಉತ್ತಮ ಸನ್ನಡತೆಯ ವಿದ್ಯಾರ್ಥಿಗಳನ್ನು ನೀಡುವುದು ಎಸ್‍ಓನ ಗುರಿ. ನಮ್ಮ ದೇಶ ದೊಂದಿಗೆ ಮತ್ತು ಸಮಾಜದೊಂದಿಗೆ ಕಳಕಳಿಯಿರುವ ವಿದ್ಯಾರ್ಥಿ ಸಮೂಹವನ್ನು ಸೃಷ್ಟಿಸುವುದೂ ನಮ್ಮ ಗುರಿ. ದೈವಿಕ ಮಾರ್ಗ ದರ್ಶನದನುಸಾರ ಕ್ರಿಯಾತ್ಮಕವಾಗಿ ವಿದ್ಯಾರ್ಥಿಗಳನ್ನು ಬೆಳೆಸ ಬೇಕೆಂಬುದು ಎಸ್.ಐ.ಓ.ನ ಇರಾದೆ. ಇಂತಹ ವಿದ್ಯಾರ್ಥಿಗಳು ಸಮಾಜಕ್ಕೂ ಮಾದರಿಯಾಗುತ್ತಾರೆ. ಹೀಗೆ ಅವರಿಗೆ ಉತ್ತಮ ತರಬೇತಿ ನೀಡಿ ಸಂಘಟನಾತ್ಮಕವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತೇವೆ. ಮತ್ತೊಂದು ವಿಚಾರ- ನಮ್ಮ ಎಸ್.ಐ.ಓ.ನಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯಿರುವ ಯಾವುದೇ ಕಾರ್ಯಕರ್ತರು ಈ ವರೆಗೂ ಬಂದಿಲ್ಲವೆಂದು ಹೆಮ್ಮೆಯಿಂದ ಹೇಳಿಕೊಳ್ಳ ಬಹುದಾಗಿದೆ. ಹೀಗೆ ಸಂಘಟನಾತ್ಮಕವಾಗಿ ದೇಶಕ್ಕೆ ಮಾದರಿಯೋಗ್ಯ ವಿದ್ಯಾರ್ಥಿಗಳ ಸೃಷ್ಟಿಗೆ ನಾವು ಪ್ರಯತ್ನಿಸುತ್ತಿದ್ದೇವೆ.

? ನೀವು ಈ ರೀತಿ ಸಂಘಟಿಸುವುದು ಕೋಮು ಒಗ್ಗೂಡುವಿಕೆಯಂತಾಗುವುದಿಲ್ಲವೇ? ಹಾಗಂತ ತಪ್ಪು ಭಾವನೆ ಬರುವುದಲ್ಲವೇ?

√ ಮುಸ್ಲಿಮ್ ಸಮೂಹವು ಯಾವುದೇ ಒಂದು ಸಂಘಟನೆ ಕಟ್ಟಿದ್ದಾಗಲೂ ಮೊದಲು ಈ ಆರೋಪವನ್ನು ಮಾಡಲಾಗುತ್ತದೆ. ಮುಸ್ಲಿಮರು ಒಗ್ಗಟ್ಟಾಗುತ್ತಿದ್ದಾರೆ. ಅವರು ಅದರ ವಿಷಯದ ಬಗ್ಗೆ ಮಾತ್ರ ಚರ್ಚಿಸುತ್ತಾರೆ. ದಲಿತರಲ್ಲಿಯೂ ಇಂತಹ ಸಂಘಟನೆ, ಚಳವಳಿಗಳಿವೆ. ಇಂದು ಪ್ರತೀ ಸಮುದಾಯದಲ್ಲಿ ಇಂತಹ ಸಂಘಟನೆಗಳು ಕಾಣುತ್ತಿವೆ. ಇದೊಂದು ವ್ಯರ್ಥ ಆರೋಪವಾಗಿದೆ. ಎಸ್.ಐ.ಓ. ಈ ದೇಶದಲ್ಲಿ ಎಂದಿಗೂ ಕೋಮುದ್ವೇಷ ಹುಟ್ಟಿಸುವಂತಹ ಕೆಲಸ ಮಾಡಿಲ್ಲ. ಎಸ್.ಐ.ಓ.ನ ಎಲ್ಲ ಕಾರ್ಯಕ್ರಮಗಳೂ ಎಲ್ಲ ಧರ್ಮದವರ ಹಿತವನ್ನು ಬಯಸಿಯೇ ಇರುತ್ತದೆ. ಎಸ್.ಐ.ಓ. ಯಾವತ್ತೂ ಎಲ್ಲ ಜನರ ಸಮಸ್ಯೆಯನ್ನು ಪರಿಗಣಿಸಿದೆಯೇ ಹೊರತು ಕೇವಲ ಮುಸ್ಲಿಮ್ ಸಮುದಾಯದ ಸಮಸ್ಯೆಯೆಂದು ಪರಿಗಣಿಸಿಲ್ಲ. ಮುಸ್ಲಿಮ್ ಸಮುದಾಯದಂತೆ ಇತರ ಸಮುದಾಯಗಳ ಸಮಸ್ಯೆಗಳಿಗೂ ನಾವು ಸ್ಪಂದಿಸಿದ್ದೇವೆ.

?ಎಸ್.ಐ.ಓ.ನ ಚಟುವಟಿಕೆ ಎಲ್ಲಿ ಮತ್ತು ಹೇಗಿದೆ?

√ ಎಸ್.ಐ.ಓ. ಬಹುದೊಡ್ಡ ಮಟ್ಟಕ್ಕೆ ಇಂದು ಬೆಳೆದು ನಿಂತಿದೆ. ಉತ್ತರ ಭಾರತದಲ್ಲೂ ಎಸ್.ಐ.ಓ.ನ ಸಂಘಟನಾ ಚಟುವಟಿಕೆ ಬಲಿಷ್ಠವಾಗಿದೆ. ಅಸ್ಸಾಮ್, ಮಣಿಪುರ, ಮೇಘಾ ಲಯಗಳಿಗೂ ಎಸ್.ಐ.ಓ. ವ್ಯಾಪಿಸಿದೆ. ದಕ್ಷಿಣದಲ್ಲಿ ಅಂಡ ಮಾನ್ ವರೆಗೂ ನಮ್ಮ ಕಾರ್ಯಚಟುವಟಿಕೆ ವ್ಯಾಪಿಸಿದೆ. ದೇಶದ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ರಾಜ್ಯಗಳಲ್ಲಿ ಅದು ತನ್ನ ಕಾರ್ಯ ಚಟುವಟಿಕೆಯನ್ನು ನಡೆಸು ತ್ತಿದೆ. ನಮ್ಮ ಸದಸ್ಯರು ಅದಕ್ಕಾಗಿ ಸಕ್ರಿಯವಾಗಿ ರಂಗದಲ್ಲಿ ದ್ದಾರೆ. ಎಸ್.ಐ.ಓ. ಒಂದು ಸೋಶಿಯಲ್ ಮೂವ್‍ಮೆಂಟ್ ಆಗಿ ಬದಲಾಗಿದೆ. ಎಸ್.ಐ.ಓ. ಇಂದು ಬಹಳಷ್ಟು ಕ್ಯಾಂಪಸ್ ಗಳಲ್ಲಿ ಸಕ್ರಿಯವಾಗಿದೆ.

?ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೀರಿ. ಈ ಎರಡು ಸಾಧನೆ ಏನು?

√ ಕ್ಯಾಂಪಸ್‍ಗಳಲ್ಲಿ ಎಸ್.ಐ.ಓ. ಇಂದು ಚರ್ಚಾ ವಿಷಯವಾಗಿದೆ. ಜೆ.ಎನ್.ಯು, ಅಲೀಘಡ ವಿಶ್ವವಿದ್ಯಾನಿಲಯ ಗಳಲ್ಲಿಯೂ ಎಸ್.ಐ.ಓ. ಚರ್ಚಾ ವಿಷಯವಾಗಿದೆ. ಅಲ್ಲಿ ಎಸ್.ಐ.ಓ. ಪ್ರಗತಿ ಕಂಡಿದೆ. ಹೈದರಾಬಾದ್‍ನ ವಿಶ್ವವಿದ್ಯಾನಿಲಯ ದಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಐ.ಓ. ಪ್ರಮುಖ ಪಾತ್ರ ವಹಿಸಿದೆ. ಅಲ್ಲಿ ನೋ ಮೌದೂದಿ ನೋ ಮೋದಿ ಎಂಬ ಘೋಷಣೆಯೂ ಕೇಳಿಬಂದಿತ್ತು. ಮೌದೂದಿಯವರ ರಾಜಕೀಯ ನಿಲುವುಗಳು ಅಲ್ಲಿ ಚರ್ಚಾ ವಿಷಯವಾಗಿದ್ದಿತ್ತು. ಚುನಾವಣೆಯಲ್ಲಿ ನಾವು ತಳೆಯುವ ನಿರ್ಧಾರಗಳು ಪರಿ ಣಾಮಕಾರಿಯಾಗಿರುತ್ತವೆ. ಕ್ಯಾಂಪಸ್‍ನಲ್ಲಿರುವ ಚರ್ಚಾ ವಿಷಯಗಳಲ್ಲಿ ಭಾಗಿಯಾಗುವುದು ಮಾತ್ರವಲ್ಲ ಹೊಸ ಹೊಸ ಚರ್ಚಾ ವಿಷಯಗಳನ್ನು ನಾವು ಹುಟ್ಟು ಹಾಕುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವ ಹಂತಕ್ಕೆ ಇದನ್ನು ಬೆಳೆಸಬೇಕು. ಅನೇಕ ಕಡೆ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. ಅಲೀಘಡ ಮತ್ತಿತರ ಕಡೆಗಳಲ್ಲಿ ಕ್ಯಾಬಿನೆಟ್ ಮೆಂಬರ್ ಸ್ಥಾನಕ್ಕೆ ನಾವು ಏರಿದ್ದೇವೆ. ಅಧ್ಯಕ್ಷೀಯ ಚುನಾವಣೆಯಲ್ಲೂ ಸ್ಪರ್ಧಿಸುವ ಯೋಜನೆ ಹಾಕಿಕೊಂಡಿದ್ದೇವೆ. ಜಾಮಿಯಾ ಮಿಲ್ಲಿಯಾದಲ್ಲಿ ಚುನಾವಣೆಯನ್ನು ನಿಷೇಧಿಸಲಾಗಿದೆ. ಅಲ್ಲಿ ಹೊಸ ಮೂವ್‍ಮೆಂಟ್ ತಯಾರಿಸುವ ಯೋಜನೆಯಲ್ಲಿದ್ದೇವೆ. ಅಲ್ಲಿ ದಲಿತ್ ಮೂವ್‍ಮೆಂಟ್ ಜೊತೆ ಸೇರಿ ಹೆಚ್ಚು ಸಕ್ರಿಯವಾಗುತ್ತದೆ. ಅಲ್ಲಿ ಎ.ಬಿ.ವಿ.ಪಿ.ಯು ಚುನಾವಣೆಯಲ್ಲಿ ಗೆದ್ದು ಅಧಿಕಾರದಲ್ಲಿದೆ. ಈ ಬಾರಿ ಮುಸ್ಲಿಮ್- ದಲಿತರನ್ನು ಒಟ್ಟು ಸೇರಿಸಿ ಚುನಾವಣೆ ಎದುರಿಸುವ ಯೋಜನೆಯಿದೆ.

?ಯುವ ಸಮೂಹಕ್ಕೆ ಈಗ ಯಾವುದರ ಅಗತ್ಯವಿದೆ? ಯಾವುದರ ಕೊರತೆಯಿದೆ?

√ ಯುವ ಸಮೂಹಕ್ಕೆ ಇಂದು ಸರಿಯಾದ ಶಿಕ್ಷಣದ ಕೊರತೆಯಿದೆಯೆಂಬುದು ನನ್ನ ಅಭಿಪ್ರಾಯ. ಇಂದಿನ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಬೆಳಗಿಸುವ ಮಟ್ಟದಲ್ಲಿಲ್ಲ. ಮಾತ್ರವಲ್ಲ ಎಲ್ಲವೂ ಅವರ ಪ್ರತಿಭೆಗಳ ವಿರುದ್ಧವಾಗಿರುತ್ತದೆ. ಉದಾಹರಣೆಗೆ ಮೌಲಾನಾ ಅಝಾದ್ ಫೆಲೋಶಿಪ್ ಅನ್ನು ಕಳೆದ ಎರಡು ವರ್ಷಗಳಿಂದ ಬಿಡುಗಡೆಗೊಳಿಸಿಲ್ಲ. ಈಗ ಅದರ ನೋಟಿಫಿಕೇಶನ್ ಬಂದಿದೆ. ನೆಟ್ ಪಾಸಾದವರಿಗೆ ಮಾತ್ರವೆಂಬ ನಿಯಮ ಮಾಡಲಾಗಿದೆ. ಈ ಹಿಂದೆ ಇಂತಹ ನಿಯಮ ಇರಲಿಲ್ಲ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿ ವೃದ್ಧಿಗಾಗಿ ಸರಕಾರದಿಂದ ಯಾವುದೇ ರೀತಿಯ ಪ್ರಯತ್ನ ನಡೆಯುತ್ತಿಲ್ಲ. ಈ ಶಿಕ್ಷಣ ವ್ಯವಸ್ಥೆಯನ್ನು ಪುನರವಲೋಕನ ಮಾಡುವಂತಹ ಹಂತಕ್ಕೆ ಪರಿಸ್ಥಿತಿ ತಲುಪಿದೆ. ವಿದ್ಯಾರ್ಥಿಗಳಿಗೆ ಸಮರ್ಪಕವಾದ ಮಾರ್ಗರ್ಶನ ಸಿಗುತ್ತಿಲ್ಲ. ಗುರಿಯಿಲ್ಲದ ಒಂದು ಜೀವನ ಪದ್ಧತಿಯಾಗಿ ಯುವ ತಲೆಮಾರು ಮುಂದೆ ಸಾಗುತ್ತಿದೆ. ಫೇಕ್ ನ್ಯೂಸ್‍ನ ಯುಗದಲ್ಲಿ ನಾವಿದ್ದೇವೆ. ಯಾವುದು ಸುಳ್ಳು ಯಾವುದು ಸತ್ಯವೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ. ನಮ್ಮ ಶಿಕ್ಷಣದ ಗುರಿ ಇದು. ಈ ದೇಶಕ್ಕೆ ನಾವೇನಾದರೂ ಕೊಡುಗೆ ನೀಡಬೇಕು. ಅಭಿವೃದ್ಧಿಯಲ್ಲಿ ನಮ್ಮ ಪಾತ್ರವೇನು ಎಂಬ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಅಜ್ಞರಾಗಿದ್ದಾರೆ. ಅವರನ್ನು ಈ ನಿಟ್ಟಿನಲ್ಲಿಯೂ ಸುಶಿಕ್ಷಿತರಾಗಿಸಬೇಕು.

? ಈ ದೇಶದ ಉತ್ತರಾಧಿಕಾರಿಗಳೆಂಬ ನೆಲೆಯಲ್ಲಿ ಯುವ ಸಮೂಹವನ್ನು ಹೇಗೆ ಮತ್ತು ಯಾವುದರ ಆಧಾರದಲ್ಲಿ ಕಟ್ಟ ಬಯಸುತ್ತೀರಿ?

√ ಎಸ್.ಐ.ಓ. ದೈವಿಕ ಮಾರ್ಗದರ್ಶನದ ಆಧಾರದಲ್ಲಿ ಯುವ ಸಮೂಹವನ್ನು ಕಟ್ಟ ಬಯಸುತ್ತದೆ. ಇದು ಎಸ್‍ಐಓನ ಧ್ಯೇಯವಾಗಿದೆ. ಇಸ್ಲಾಮಿನ ಬಗ್ಗೆಯಿರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ ಇಸ್ಲಾಮಿನ ಮಾನವೀಯ ಮೌಲ್ಯಗಳನ್ನು ಅಂದರೆ ಸಾಮಾಜಿಕ ನ್ಯಾಯ, ಇಸ್ಲಾಮಿನ ಸಮತ್ವದ ಕುರಿತು ಜನರಿಗೆ ತಿಳಿಯಪಡಿಸಬೇಕು. ಇಂತಹ ಚರ್ಚೆಗಳು ಕ್ಯಾಂಪಸ್‍ಗಳಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಲಿಬರಲ್‍ಗಳು ನಮ್ಮನ್ನು ಮೂಲಭೂತವಾದಿಗಳೆಂದು ಕರೆಯುತ್ತಾರೆ. ಅಂತಹವರಲ್ಲಿರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕು. ದೈವಿಕ ಮಾರ್ಗದರ್ಶನದನುಸಾರ ಅದನ್ನು ಮಾಡಬೇಕು.

? ವೇಮುಲಾ ಪ್ರಕರಣದ ಬಳಿಕ ಎಸ್.ಐ.ಓ. ಎಡರಂಗದತ್ತ ವಾಲುತ್ತಿದೆಯೆಂದು ಕೆಲವರು ಆರೋಪಿಸಿದ್ದಾರಲ್ಲವೇ?

√ ಇದು ಶುದ್ಧ ತಪ್ಪುಕಲ್ಪನೆಯಾಗಿದೆ. ಎಡಪಂಥೀಯರನ್ನು ಅತ್ಯಂತ ಹೆಚ್ಚು ವಿಮರ್ಶಿಸಿದ ವಿದ್ಯಾರ್ಥಿ ಸಂಘಟನೆ ಎಸ್.ಐ.ಓ. ಆಗಿದೆ. ಜೆ.ಎನ್.ಯು.ವಿನಲ್ಲಿ ನೋ ಮೋದಿ ನೋ ಮೌದೂದಿ ಎಂಬ ಘೋಷಣೆಯನ್ನು ನಮ್ಮ ವಿರುದ್ಧ ಎಡಪಂಥೀಯರು ಕೂಗಿದ್ದರು. ಅದನ್ನು ನಾವು ಚಾಲೆಂಜ್ ಆಗಿ ಸ್ವೀಕರಿಸಿ ಹೋರಾಡಿದ್ದೆವು. ಅಭಿಮನ್ಯು ಕೊಲೆಯ ಸಂದರ್ಭದಲ್ಲಿಯೂ ನಾವು ಫ್ರೆಟರ್ನಿಟಿ ಮೂವ್‍ಮೆಂಟ್ ಜೊತೆ ಸಕ್ರಿಯವಾಗಿ ರಂಗಕ್ಕಿಳಿದಿದ್ದೆವು. ಆದ್ದರಿಂದ ಅವರಿಂದ ಪ್ರೇರಿತರಾಗಿ ನಾವು ಬಹಳಷ್ಟು ಕೆಲಸ ಮಾಡಿದ್ದೇವೆಂಬುದು ತಪ್ಪುಕಲ್ಪನೆಯಾಗಿದೆ.

? ನಿಮ್ಮ ಸಂದೇಶವೇನು?

√ ನಮ್ಮ ವಿದ್ಯಾರ್ಥಿಗಳು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾ ರಂಗಗಳಲ್ಲಿ ಬಹಳ ಹಿಂದೆ ಇದ್ದಾರೆ. ಈ ಎಲ್ಲಾ ರಂಗ ಗಳ ಜೊತೆಗೆ ವೈಜ್ಞಾನಿಕ ರಂಗದಲ್ಲೂ ಬಹಳ ಮುಂದೆ ಬರಬೇಕಾದ ಅಗತ್ಯವಿದೆ. ಸಂಶೋಧನಾತ್ಮಕ ರಂಗಗಳಲ್ಲೂ ಮುಸ್ಲಿಮ್ ಸಮುದಾಯ ಬಹಳಷ್ಟು ಪ್ರಗತಿ ಕಾಣಬೇಕಾದ ಅಗತ್ಯವಿದೆ. ಹಾಗೆಯೇ ಮಾಧ್ಯಮ ರಂಗದಲ್ಲೂ ತಮ್ಮ ಚಾಪನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯು ತ್ತಲೇ ಇರಬೇಕು. ಯುವ ಜನಾಂಗವನ್ನು ಹೀಗೆ ಪ್ರಬುದ್ಧ ಗೊಳಿಸುವ ಪ್ರಯತ್ನವಾಗಬೇಕು.