ಎನ್‍ಪಿಆರ್ ವಿವಾದ: ಮಂಜೇಶ್ವರ ನಗರಸಭಾ ಕಾರ್ಯದರ್ಶಿ ಕಚೇರಿಗೆ ದಾಳಿ

0
1170

ಸನ್ಮಾರ್ಗ ವಾರ್ತೆ

ಕೇರಳ, ಜ. 28: ಕೇರಳದ ಮಂಜೇಶ್ವರದಲ್ಲಿ ಎನ್‍ಪಿಆರ್ ಮಾಹಿತಿ ಸಂಗ್ರಹಕ್ಕಾಗಿ ಅಧ್ಯಾಪಕರನ್ನು ಒದಗಿಸುವಂತೆ ಆಹ್ವಾನಿಸಿ ಪತ್ರ ಬರೆದದ್ದನ್ನು ಪ್ರತಿಭಟಿಸಿ ಮಂಜೇಶ್ವರದ ನಗರಭಾ ಕಾರ್ಯದರ್ಶಿ ಕಚೇರಿಯಲ್ಲಿ ಯೂತ್ ಲೀಗ್ ದಾಂಧಲೆ ಮಾಡಿದೆ. ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಫೈಲುಗಳನ್ನು ಚೆಲ್ಲಲಾಗಿದೆ. ನಗರಸಭೆಗೆ ವಿವಿಧ ಸಂಘಟನೆಗಳು ಜಾಥಾ ಘೋಷಿಸಿವೆ. ನಗರಸಭಾ ಕಾರ್ಯದರ್ಶಿಯ ಕ್ರಮದ ವಿರುದ್ಧ ಭಾರೀ ಪ್ರತಿಭಟನೆ ಎದ್ದು ನಿಂತಿದೆ. ಎನ್‍ಪಿಆರ್ ಮಾಹಿತಿ ಸಂಗ್ರಹಕ್ಕಾಗಿ ಅಧ್ಯಾಪಕರನ್ನು ಒದಗಿಸುವಂತೆ ನಗರ ಸಭೆಯಿಂದ ಪ್ರಧಾನ ಅಧ್ಯಾಪಕರಿಗೆ ಪತ್ರ ಬರೆಯಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಅಧೀನದ ಸೆನ್ಸಸ್ ನಿರ್ದೇಶನಾಲಯದಿಂದ ಲಭಿಸಿದ ಆದೇಶದ ಪ್ರತಿಯನ್ನು ನಗರಸಭಾ ಕಾರ್ಯದರ್ಶಿ 17 ಶಾಲೆಗಳಿಗೆ ಕಳುಹಿಸಿದ್ದರು. 2021ರ ಸೆನ್ಸಸ್ ಪ್ರಕ್ರಿಯೆಗೆ ಅಧಿಕಾರಿಗಳನ್ನು ನೇಮಿಸುವ ಸಲುವಾಗಿ ಮಾಹಿತಿ ನೀಡಬೇಕೆಂದು ಪತ್ರದಲ್ಲಿ ಕಾರ್ಯದರ್ಶಿ ತಿಳಿಸಿದ್ದರು.

ಜೊತೆಗೆ ಆದೇಶದಲ್ಲಿ ಎನ್‍ಪಿಆರ್ ನವೀಕರಣ ಎಂದೂ ಇದೆ. ಎನ್‍ಪಿಆರ್ ಜಾರಿ ಮಾಡುವುದಿಲ್ಲ ಎಂದು ಕೇರಳ ಸಚಿವ ಸಂಪುಟ ಜನವರಿ 20ಕ್ಕೆ ತೀರ್ಮಾನಿಸಿತ್ತು. ಮರುದಿವಸ 21ಕ್ಕೆ ಕಾರ್ಯದರ್ಶಿ ಹದಿನೇಳು ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದರು.