ಸನ್ಮಾರ್ಗ ವಾರ್ತೆ
ಮಸ್ಕತ್, ಜ.11: ಒಮನ್ ಆಡಳಿತಗಾರ ಸುಲ್ತಾನ್ ಖಾಬುಸ್ ಬಿನ್ ಸಈದ್ ನಿಧನರಾದರು. ಅರಬ್ ಜಗತ್ತಿನಲ್ಲಿ ಅತಿಹೆಚ್ಚು ಕಾಲ ದೇಶದ ನಾಯಕತ್ವ ವಹಿಸಿದ ಜನಪ್ರಿಯ ಆಡಳಿತಗಾರನಾದ ಅವರಿಗೆ 79 ವರ್ಷ ವಯಸ್ಸಾಗಿತ್ತು. ರೋಗದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಅವರು ನಿಧನರಾದರೆಂದು ದಿವಾನ್ ಆಫ ರಾಯಲ್ ಕೋರ್ಟು ತಿಳಿಸಿದೆ. ಶನಿವಾರ ಬೆಳಗೆ ಅವರು ನಿಧನರಾದ ಸುದ್ದಿಯನ್ನು ಅಧಿಕೃತವಾಗಿ ಮಾಧ್ಯಮಗಳು ಪ್ರಕಟಿಸಿವೆ. ಅವರು ಐವತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರು.
ಸುಲ್ತಾನ್ರ ಸಾವಿನಿಂದಾಗಿ ಒಮನ್ನಲ್ಲಿ ಮೂರು ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ದೇಶಾದ್ಯಂತ ನಲ್ವತ್ತು ದಿನಗಳ ಶೋಕಾಚರಣೆ ನಡೆಯಲಿದೆ ಎಂದು ದಿವಾನ್ ಆಫ್ ರಾಯಲ್ ಕೋರ್ಟು ತಿಳಿಸಿದೆ. ಶೋಕಾಚರಣೆಯ ಪ್ರಯುಕ್ತ ಸರಕಾರಿ ಕಚೇರಿ ಸಹಿತ ರಾಷ್ಟ್ರಧ್ವಜ ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಸುಲ್ತಾನರಿಗೆ ಮಕ್ಕಳಿಲ್ಲ. ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದ ಉನ್ನತ ಡಿಫೆನ್ಸ್ ಕೌನ್ಸಿಲ್, ರಾಯಲ್ ಫ್ಯಾಮಿಲಿ ಕೌನ್ಸಿಲ್ ಜಂಟಿ ಸಭೆ ಸೇರಿದೆ. ಮೂರು ದಿವಸಗಳೊಳಗೆ ರಾಯಲ್ ಫ್ಯಾಮಿಲಿ ಕೌನ್ಸಿಲ್ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿದೆ. ಅರಬ್ ಜಗತ್ತಿನ ಶಾಂತಿಗಾಗಿ ಅಪಾರ ಕೊಡುಗೆ ನೀಡಿದ ಸುಲ್ತಾನರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸಹಿತ ಹಲವಾರು ಜಾಗತಿಕ ನಾಯಕರು ಶೋಕ ಸಂದೇಶ ಕಳುಹಿಸಿದ್ದಾರೆ.












