ಗಲ್ಫ್ ನಿಂದ ಊರಿಗೆ ಬರುವ ಅನಿವಾಸಿಗರೇ; ಸಾಲಗಾರರಾಗಿ ಹಿಂತಿರುಗಬೇಡಿ

0
2389

ಖದೀಜ ನುಸ್ರತ್ ಅಬು ಧಾಬಿ

ಇಸ್ಲಾಮ್ ಧರ್ಮವು ಸಾಲವನ್ನು ಅತ್ಯಂತ ಗಂಭೀರ ವಿಷಯವಾಗಿ ಪರಿಗಣಿಸುತ್ತದೆ. ಅಗತ್ಯವಿರುವವರಿಗೆ ಸಾಲ ನೀಡುವುದನ್ನು ಪ್ರೋತ್ಸಾಹಿಸುತ್ತದೆ. ಸಾಲ ಪಡೆಯುವುದು ಅನುವದನೀಯವಾದರೂ ಸಾಲ ಪಡೆಯುವುದನ್ನು ನಿರುತ್ತೇಜಿಸಲಾಗಿರುತ್ತದೆ. ಸಾಲವೆಂಬುದು ವಿನಾಶಕಾರಿಯಾಗಿದೆ. ಸಾಧ್ಯವಾದಷ್ಟು ಅದರಿಂದ ದೂರ ಉಳಿಯುವುದು ಉತ್ತಮ. ಪ್ರವಾದಿ ಮುಹಮ್ಮದ್(ಸ) ಯಾವಾಗಲೂ ಸಾಲದಿಂದ ಅಭಯ ಯಾಚಿಸುತ್ತಿದ್ದರು. ಮರಣ ಹೊಂದಿದವನ ಸಾಲ ಸಂದಾಯ ಮಾಡಿದ ನಂತರವೇ ಅವನ ಸೊತ್ತು ವಿತರಣೆ ಮಾಡಬೇಕೆಂದು ಪವಿತ್ರ ಕುರ್ ಆನ್ ನಲ್ಲಿ ಆಜ್ಞಾಪಿಸಲಾಗಿದೆ. ಪವಿತ್ರ ಕುರ್ ಆನ್ ನಲ್ಲಿ ಅತ್ಯಂತ ದೊಡ್ಡ ಸೂಕ್ತ(ಆಯತುದ್ದೈನ್) ನಮಾಝ್, ಝಕಾತ್ ನಂತಹ ಕಡ್ಡಾಯ ಕರ್ಮದ ಕುರಿತಾಗಿ ಚರ್ಚಿಸುವುದಿಲ್ಲ. ಬದಲಾಗಿ ಸಾಲದ ವಿಷಯವನ್ನು ಚರ್ಚಿಸುತ್ತದೆ.

ಸಾಲಗಾರನಾಗಿ ಮೃತನಾದ ಒಬ್ಬ ವ್ಯಕ್ತಿಯ ಮೃತದೇಹವನ್ನು ತರಲಾದಾಗ ಪ್ರವಾದಿ(ಸ)ಈ ರೀತಿ ವಿಚಾರಿಸುತ್ತಿದ್ದರು: ಅವನು ತನ್ನ ಸಾಲ ತೀರಿಸುವಷ್ಟು ಸೊತ್ತನ್ನು ಬಿಟ್ಟಗಲಿದ್ದಾನೆಯೇ? ಜನರು ಹೌದೆಂದರೆ ಪ್ರವಾದಿ(ಸ) ಆ ವ್ಯಕ್ತಿಯ ಜನಾಝ ನಮಾಝ್ ನಿರ್ವಹಿಸುತ್ತಿದ್ದರು. ಜನರು ಇಲ್ಲವೆಂದರೆ “ನೀವು ಅವನ ಜನಾಝ ನಮಾಝ್ ನಿರ್ವಹಿಸಿ” ಎಂದು ಹೇಳುತ್ತಿದ್ದರು. ಇಸ್ಲಾಮ್ ನಲ್ಲಿ ಅತ್ಯಂತ ಉತ್ತಮ ಸ್ಥಾನಮಾನ ಇರುವುದು ಹುತಾತ್ಮರಿಗೆ. ಆದರೆ ಓರ್ವ ಹುತಾತ್ಮನ ಸಾಲದ ಹೊರತು ಎಲ್ಲಾ ಪಾಪಗಳು ಕ್ಷಮಿಸಲ್ಪಡುವುದು ಎಂದು ಹದೀಸ್ ಗಳಿಂದ ತಿಳಿದು ಬರುತ್ತದೆ.

ಪ್ರವಾದಿ(ಸ) ಹೇಳಿರುವರು:

“ಸತ್ಯ ವಿಶ್ವಾಸಿಯ ಪ್ರಾಣವು ಅವನ ಸಾಲದ ಜತೆ ತೂಗಾಡುತ್ತಿರುತ್ತದೆ- ಅದು ಅವನ ಕಡೆಯಿಂದ ಸಂದಾಯ ಮಾಡಲ್ಪಡುವ ತನಕ.”

ದೈನಂದಿನ ಜೀವನದ ಅವಶ್ಯಕತೆಗಳಿಗೆ ಪಡೆಯುವ ಸಾಲದ ವ್ಯವಹಾರದ ಕುರಿತಾಗಿ ಉಪಯುಕ್ತವಾದ, ಸುರಕ್ಷಿತ ಹಾಗೂ ನ್ಯಾಯಪೂರ್ಣ ನೀತಿ ನಿರ್ದೇಶಗಳನ್ನು ಇಸ್ಲಾಮ್ ಧರ್ಮವು ನೀಡಿತ್ತದೆ. ಐಶಾರಾಮದ ಜೀವನ ನಡೆಸಲು ಸಾಲ ಪಡೆಯುವುದು ಅಗತ್ಯವೋ ಅನಗತ್ಯವೋ ಎಂದು ಯೋಚಿಸದ, ಸಾಲದ ವ್ಯವಹಾರಗಳು ಹೆಚ್ಚುತ್ತಿರುವ ಮತ್ತು ಜನರು ಸಾಲ ನೀಡಲು ಹೆದರುತ್ತಿರುವಂತಹ ಒಂದು ಕಾಲಘಟ್ಟದಲ್ಲಿ ನಾವು ವಾಸಿಸುತ್ತಿದ್ದೇವೆ. ಸಾಲನೀಡುವ ಪುಣ್ಯಫಲವು ದಾನಕ್ಕಿಂತ ಕಡಿಮೆಯಿಲ್ಲ ಹೆಚ್ಚೇ ಇರುವುದು. ಅಲ್ಲಾಹನು ಯಾರಿಗೆ ಅಗತ್ಯಕ್ಕಿಂತ ಹೆಚ್ಚು ಸಂಪತ್ತು ದಯಪಾಲಿಸಿರುವನೋ ಅವರು ಅಪೇಕ್ಷಿತರಿಗೆ ಸಹಾಯ ಮಾಡಬೇಕು. ಸಾಲ ನೀಡುವುದೂ ಅದರ ಒಂದು ರೂಪವಾಗಿದೆ. ಸಾಲಗಾರನ ಜೊತೆ ಅತ್ಯಂತ ಸಭ್ಯ ಮತ್ತು ನಮ್ರತೆಯ ವ್ಯವಹಾರ ಕೈಗೊಳ್ಳಬೇಕು. ರಹಸ್ಯವಾಗಿ ಸಾಲದ ವ್ಯವಹಾರ ಮಾಡಬೇಡಿರಿ.ಇಬ್ಬರು ಪುರುಷರನ್ನು ಸಾಕ್ಷಿಯಾಗಿರಿಸಿಕೊಳ್ಳಬೇಕು. ಇಬ್ಬರು ಪುರುಷರು ಸಿಗದಿದ್ದರೆ ಒಬ್ಬ ಪುರುಷನೂ, ಇಬ್ಬರು ಸ್ತ್ರೀಯರೂ ಇರಬೇಕು. ಸಾಲ ನೀಡುವಾಗ ಮರುಪಾವತಿಯ ಅವಧಿಯನ್ನು ನಿಶ್ಚಯಿಸಬೇಕು. ತನ್ನಿಂದ ಮರುಪಾವತಿ ಮಾಡಲು ಸಾಧ್ಯವಿಲ್ಲದ ಯಾವುದೇ ಸಾಲಗಳನ್ನು ಮಾಡಬೇಡಿರಿ. ಸಾಲವಿದ್ದರೆ ಮನೆಯವರಿಗೆ ಅದರ ಬಗ್ಗೆ ತಿಳಿಸಬೇಕು. ಅದನ್ನು ಡೈರಿಯಲ್ಲಿ ಬರೆದಿಡಬೇಕು. ಸಾಲಗಾರನು ಕಾಸಿಲ್ಲದವನಾಗಿದ್ದರೆ ಸಮಯಾವಕಾಶ ನೀಡುವುದು ಅಥವಾ ಸಾಲ ಮನ್ನಾ ಮಾಡುವುದು ಪುಣ್ಯಕರ್ಮವಾಗಿರುತ್ತದೆ.

“ನಿಮ್ಮ ಸಾಲಗಾರನು ‘ಕಾಸಿಲ್ಲದವನಾದರೆ’ ಅವನಿಗೆ ಸುಸ್ಥಿತಿಯುಂಟಾಗುವ ತನಕ ಸಮಯಾವಕಾಶ ಕೊಡಿರಿ ಮತ್ತು ನೀವು ದಾನರೂಪದಲ್ಲಿ ಸಾಲವನ್ನೇ ಬಿಟ್ಟುಕೊಟ್ಟರೆ ಅದು ನಿಮ್ಮ ಮಟ್ಟಿಗೆ ಇನ್ನಷ್ಟು ಉತ್ತಮವಾಗಿರುವುದು, ನೀವು ಅರಿತವರೇ ಆಗಿದ್ದರೆ.” (ಅಲ್ ಬಕರಃ: 280)

ಪ್ರವಾದಿ(ಸ) ಹೇಳಿರುವರು:

“ಒಬ್ಬನು ಕಾಸಿಲ್ಲದವನಿಗೆ ಅವಧಿ ನೀಡಿದರೆ ಅಥವಾ ತನ್ನ ಸಾಲವನ್ನು ಮನ್ನಾ ಮಾಡಿದರೆ ಅಲ್ಲಾಹನು ತನ್ನ ನೆರಳಲ್ಲಿ ಸ್ಥಳಾವಕಾಶ ನೀಡುವನು.”

“ಒಬ್ಬನ ಮೇಲೆ ಇನ್ನೊಬ್ಬನ ಸಾಲವಿದ್ದು ಅವನು ಆತನಿಂದ ವಸೂಲಿ ಮಾಡಲು ತಡಮಾಡಿದರೆ ಅವನಿಗೆ (ಅವನು ಕೊಟ್ಟ ಅವಧಿಯ) ಪ್ರತಿಯೊಂದು ದಿನಕ್ಕೆ ಪ್ರತಿಯಾಗಿ ದಾನದ ಪುಣ್ಯ ಸಿಗುವುದು.”

ಸಾಲವನ್ನು ಮರುಪಾವತಿಸುವ ಸಾಮರ್ಥ್ಯವಿದ್ದೂ ತಡ ಮಾಡುವುದು ಮತ್ತು ಮೀನಮೇಷ ಎಣಿಸುವುದು ದೊಡ್ಡ ಅನ್ಯಾಯವಾಗಿದೆ. ಒಬ್ಬನು ಜನರಿಂದ ಸಾಲ ಪಡೆದಿದ್ದು, ಅದನ್ನು ಮರುಪಾವತಿಸುವ ಸಂಕಲ್ಪ ಹೊಂದಿದ್ದು ಯಾವುದೋ ಕಾರಣದಿಂದ ಅವನಿಗೆ ಅದನ್ನು ಮರುಪಾವಸತಿಸಲು ಸಾಧ್ಯವಾಗದಿದ್ದರೆ ಅವನ ಪರವಾಗಿ ಅಲ್ಲಾಹನು ಮರುಪಾವತಿ ಮಾಡುವನು ಎಂದು ಹದೀಸ್ ಗ್ರಂಥಗಳಿಂದ ತಿಳಿದು ಬರುತ್ತದೆ. ಕ್ರೆಡಿಟ್ ಕಾರ್ಡ್ ಬಳಸುವವರು ನೀವು ಖರೀದಿಸಿದಷ್ಟು ಮೊತ್ತವನ್ನು ವ್ಯವಸ್ಥೆ ಮಾಡಿರಿ. ಮರಣವು ಯಾವ ಸಂದರ್ಭದಲ್ಲಿ ಬರುತ್ತದೆಂದು ಯಾರಿಗೂ ತಿಳಿದಿಲ್ಲ. ಮನೆ ವಿವಾಹಕ್ಕೆಂದು ಲಕ್ಷಾಂತರ ಖರ್ಚು ಮಾಡಿದರೂ, ದೇಶ ವಿದೇಶ ತಿರುಗಾಡಿದರೂ, ಹಜ್ಜ್ ಉಮ್ರಾ ಹೋದರೂ ಸಾಲ ಮರಳಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸದವರಿದ್ದಾರೆ.

ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು, ಹೊಸ ಮಾಡೆಲ್ ವಾಹನ ಅಥವಾ ಮನೆ ಉಪಯೋಗಿ ವಸ್ತು ಖರೀದಿಸಲು, ಉಡುಗೊರೆ ನೀಡಲು, ಚಿನ್ನ ಖರೀದಿಸಲು, ಔತಣ ಕೂಟಗಳನ್ನು ಏರ್ಪಡಿಸಲು, ಜನರ ಮಧ್ಯೆ ನಾನೊಬ್ಬ ಶ್ರೀಮಂತನೆಂದು ಸಾಭೀತುಪಡಿಸಲು ಸಾಲ ಪಡೆಯಬೇಡಿರಿ. ಇಂತಹವರಿಗೆ ಸಾಲ ನೀಡಿ ಪ್ರೋತ್ಸಾಹಿಸಬೇಡಿರಿ. ಮೂರು ಆರು ತಿಂಗಳಿನಲ್ಲಿ ಮರಳಿಸುತ್ತೇನೆಂದು ನಂತರ ಮರುಪಾವತಿಸಲು ವಿಫಲರಾಗುತ್ತಾರೆ. ನಂತರ ಹಣವನ್ನು ಮತ್ತು ಸಂಬಂಧವನ್ನು ಕಳೆದುಕೊಳ್ಳುತ್ತೇವೆ. ಗಲ್ಫ್ ನಿಂದ ಊರಿಗೆ ಬಂದು ಕೇವಲ ಎರಡು ತಿಂಗಳು ರಜೆ ಕಳೆಯಲಿಕ್ಕಾಗಿ ಅಥವಾ ವಿವಾಹಕ್ಕೆ ಖರ್ಚು ಮಾಡಿ ಸಾಲಗಾರರಾಗಬೇಡಿರಿ. ಹೆಣ್ಣು ಮಕ್ಕಳ ವಿವಾಹಕ್ಕೆ ಸಾಲ ಮಾಡಿ ಚಿನ್ನ ಖರೀದಿಸಬೇಡಿರಿ. ನಂತರ ಆ ಮನೆಯಲ್ಲಿರುವ ಉಳಿದ ಮಕ್ಕಳ ವಿದ್ಯಾಭ್ಯಾಸ ಹಾಗೂ ಮೂಲಭೂತ ಖರ್ಚುಗಳ ಪೂರೈಕೆಗೆ ಅದು ಅಡ್ಡಿಯಾಗುತ್ತದೆ. ಭವಿಷ್ಯದ ಬಗ್ಗೆ ಆಲೋಚಿಸಿರಿ.

ಸಾಲ ನೀಡುವಾಗ ಜನರ ಅಗತ್ಯ ಅನಗತ್ಯ ಪರಿಶೀಲಿಸಿರಿ. ಹಸಿದವರಿಗೆ, ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ನೀಡಲು ಸಾಧ್ಯವಾಗದವರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಉದ್ಯೋಗ ಕಳೆದುಕೊಂಡವರು, ತಮ್ಮ ಹೆಣ್ಣು ಮಕ್ಕಳ ವಿವಾಹಕ್ಕೆ ಖರ್ಚು ಮಾಡಲು ನಿರ್ಬಂಧಿತರಾದ ಬಡ ಹೆತ್ತವರು ಇತ್ಯಾದಿ ಅಗತ್ಯಗಳನ್ನು ನೋಡಿ ಸಾಲ ನೀಡಿರಿ.

ಕೈಯಲ್ಲಿ ನಗದು ಹಣ ಹಿಡಿದುಕೊಂಡು ಖರ್ಚು ಮಾಡುವುದು ಒಬ್ಬನ ಆರ್ಥಿಕ ಯಶಸ್ಸಾಗಿರುತ್ತದೆ. ಬ್ಯಾಂಕ್ ನವರ ಮನೆಯ ಲೋನ್, ವಾಹನ ಲೋನ್ ನ ಮೋಹನ ವಾಗ್ದಾನಗಳಿಗೆ ಬಲಿಯಾಗಬೇಡಿರಿ. ಎಲ್ಲದಕ್ಕೂ ಸಾಲ ಮಾಡಿ ಖರ್ಚು ಮಾಡಿ ನಂತರ ಏನೂ ಇಲ್ಲದಾಗ ಮನೆಯನ್ನೇ ಮಾರುವಂತಹ ಪರಿಸ್ಥಿತಿಗೆ ತಲುಪಬೇಡಿರಿ. ಒಮ್ಮೆ ಸಾಲವನ್ನು ಸಮಯಕ್ಕೆ ಸಂದಾಯ ಮಾಡದಿದ್ದರೆ ಅಥವಾ ಎಲ್ಲ ದುಂದು ವೆಚ್ಚ ಮಾಡುತ್ತಲಿದ್ದರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಯಾರೂ ಸಹಾಯ ಮಾಡಲಾರರು ಎಂದು ನಾವು ಅರಿತಿರಬೇಕು.

ಸಾಲವು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ. ಸಾಲವಿಲ್ಲದೇ ಜೀವಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಅಲ್ಲಾಹನು ನಮಗೆ ನೀಡಿದುದರಲ್ಲಿ ನಮಗೆ ಸಾಧ್ಯವಿರುವ ಆಹಾರ, ಮನೆ, ವಾಹನದಲ್ಲಿ ನಾವು ಸಂಪೂರ್ಣವಾಗಿ ಸಂತೃಪ್ತರಾಗಬೇಕು. ಹಣವು ಎಲ್ಲವೂ ಅಲ್ಲ. ಅಲ್ಲಾಹನೊಂದಿಗೆ ಉತ್ತಮ ಸಂಬಂಧವಿರಿಸುವವರಿಗೆ ಮಾತ್ರ ಸಂತೃಪ್ತರಾಗಲು ಸಾಧ್ಯ.