ಸನ್ಮಾರ್ಗ ವಾರ್ತೆ
ನವದೆಹಲಿ: ಕಾಲ್ನಡಿಗೆಯ ಮೂಲಕ ಹಜ್ಜ್ ಯಾತ್ರೆ ನಿರ್ವಹಿಸಲೆಂದು ಹೊರಟಿದ್ದ ಕೇರಳದ ಶಿಹಾಬ್ ಚೊಟ್ಟೂರುರವರಿಗೆ ಕೊನೆಗೂ ಪಾಕಿಸ್ತಾನದ ಮೂಲಕ ಹಾದು ಇತರ ದೇಶಗಳಿಗೆ ಪ್ರಯಾಣಿಸಲು ಟ್ರಾನ್ಸಿಟ್ ವೀಸಾ ಲಭಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಶಿಹಾಬ್ ತಮ್ಮ ಅಧಿಕೃತ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ರಾನ್ಸಿಟ್ ವೀಸಾ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳು ಒಂಬತ್ತು ದಿನಗಳ ಕಾಲ ಪಂಜಾಬ್‌ನ ಅಮೃತಸರದ ಖಾಸಾದಲ್ಲಿರುವ ಆಫೀಯಾ ಕಿಡ್ಸ್ ಸ್ಕೂಲ್‌ನಲ್ಲಿ ಶಿಹಾಬ್ ಬೀಡು ಬಿಟ್ಟಿದ್ದರು. ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ಇತರ ದೇಶಗಳ ಮೂಲಕ ಹಾದು ಹೋಗಲು ಬೇಕಾಗುವ ಟ್ರಾನ್ಸಿಟ್ ವೀಸಾ ಲಭಿಸಿರಲಿಲ್ಲ. ಇದೀಗ ಅವರಿಗೆ ವೀಸಾ ಲಭಿಸಿದ್ದು ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದಾರೆ.
ಹಜ್ಜ್ ನಿರ್ವಹಿಸುವುದಕ್ಕಾಗಿ ಕಳೆದ ವರ್ಷ ಜೂನ್ ಎರಡರಂದು ಅವರು ಕೇರಳದಿಂದ ಕಾಲ್ನಡಿಗೆಯ ಮೂಲಕ ಮಕ್ಕಾದೆಡೆಗೆ ಯಾತ್ರೆ ಪ್ರಾರಂಭಿಸಿದ್ದರು. ಆದರೆ ಟ್ರಾನ್ಸಿಟ್ ವೀಸಾದ ಕೆಲವು ದಾಖಲೆ ಪತ್ರಗಳು ಲಭಿಸದ ಕಾರಣದಿಂದಾಗಿ ಈ ಯಾತ್ರೆ ಅಮೃತಸರದಲ್ಲಿ ಸ್ಥಗಿತಗೊಂಡಿತ್ತು. ತನಗೆ ಪಾಕಿಸ್ತಾನದ ಮೂಲಕ ಇರಾನ್ ಪ್ರವೇಶಿಸಬೇಕಾಗಿದ್ದು ಅದಕ್ಕಾಗಿ ಟ್ರಾನ್ಸಿಟ್ ವೀಸಾದ ಅಗತ್ಯವಿದೆ. ಟೂರಿಸ್ಟ್ ವೀಸಾ ಯಾವಾಗ ಬೇಕಾದರೂ ಲಭ್ಯವಿತ್ತು. ಆದರೆ, ಟ್ರಾನ್ಸಿಟ್ ವೀಸಾಗೆ ಬೇಕಾಗಿ ಇಷ್ಟು ಸಮಯ ಕಾಯಬೇಕಾಯಿತು ಎಂದವರು ಹೇಳಿದ್ದಾರೆ.
ಒಟ್ಟು 8,640 ಕಿ.ಮೀ ಯಾತ್ರೆಯಲ್ಲಿ ಶಿಹಾಬ್ ಈಗಾಗಲೇ 3,300 ಕಿ.ಮೀ.(40%) ಪ್ರಯಾಣ ಪೂರ್ಣಗೊಳಿಸಿದ್ದಾರೆ.











