ಆನ್ ಲೈನ್ ಮೋಸದಾಟ: ಮೊಬೈಲ್ ಖರೀದಿ ನಂತರ ನಡೆದಿದ್ದೇನು?

0
44

ಸನ್ಮಾರ್ಗ ವಾರ್ತೆ

ಮಂಗಳೂರು: ಆನ್ ಲೈನ್ ಖರೀದಿ. ಮೋಸದಾಟ, ಕೊನೆಗೂ ನ್ಯಾಯ. ಹೌದು. ಆನ್‌ಲೈನ್‌ ಮೂಲಕ 55 ಸಾವಿರದ ಮೊಬೈಲ್‌ ಖರೀದಿಸಿ ಮೋಸ ಹೋಗಿದ್ದ ಗ್ರಾಹಕರೊಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಪರಿಹಾರ ದೊರಕಿಸಿಕೊಟ್ಟಿದೆ. ಅಲ್ಲದೇ ನೊಂದ ಗ್ರಾಹಕನಿಗೆ ವೆಚ್ಚ ಮಾಡಿದ ಮೊತ್ತದ ಜತೆ ಪರಿಹಾರ, ಇತರ ಖರ್ಚು ಹಾಗೂ ವೆಚ್ಚವಾಗಿ 15 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಿ ಎಂದು ವಂಚನೆ ಆರೋಪಕ್ಕೆ ಗುರಿಯಾದ ಸಂಸ್ಥೆಗೆ ಆದೇಶಿಸಿ ಸೂಚನೆ ನೀಡಿದೆ.

ಸುರತ್ಕಲ್‌ ಬಾಳದ ಎಂಆರ್‌ಪಿಎಲ್‌ ಬಳಿಯ ಸಾಫ್ಟ್ ವೇರ್ ಎಂಜಿನಿಯರ್‌ ಹರ್ಷ ಮೆಂಟೆ ಎಂಬುವವರು ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ 55 ಸಾವಿರ ಪಾವತಿಸಿ ಮೊಬೈಲ್‌ ಗೆ ಬುಕ್ ಮಾಡಿದ್ದರು. 2020ರ ಜೂನ್‌ 17 ರಂದು ಬಂದ ಪಾರ್ಸೆಲ್‌ ನಲ್ಲಿ ಕೇವಲ ಚಾರ್ಜರ್‌ ಮತ್ತು ಇಯರ್‌ಫೋನ್‌ ಮಾತ್ರ ಇತ್ತು. ಆ ಕೂಡಲೇ ಸಂಬಂಧಪಟ್ಟ ಆನ್‌ ಲೈನ್‌ ವ್ಯಾಪಾರ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ 5 ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವ ಭರವಸೆ ನೀಡಿದ್ದರು. ಸುಮಾರು 6 ತಿಂಗಳವರೆಗೆ ಮೇಲಿಂದ ಮೇಲೆ ಕರೆ ಮಾಡಿದರೂ ಸ್ಪಂದಿಸದಿದ್ದಾಗ ಗ್ರಾಹಕ ಆಯೋಗದ ದ.ಕ. ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿದರು. ಬಳಿಕ 2022ರ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ದೂರು ಸಲ್ಲಿಸಿದರು. ಪ್ರಕರಣ ಕೈಗೆತ್ತಿಕೊಂಡ ಆಯೋಗದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದೆ. ದೂರುದಾರರಿಗೆ ನಷ್ಟವಾಗಿರುವ 55 ಸಾವಿರ ರೂ. ಮೊತ್ತದ ಜತೆಗೆ 2022ರ ಅಕ್ಟೋಬರ್‌ 12 ರಿಂದ ಅನ್ವಯವಾಗುವಂತೆ ಪಾವತಿಯ ದಿನಾಂಕದವರೆಗೆ ವಾರ್ಷಿಕ ಶೇಕಡಾ 8 ರ ಬಡ್ಡಿ ಹಾಗೂ ಖರ್ಚು-ವೆಚ್ಚ ಸೇರಿ ಹೆಚ್ಚುವರಿ 15 ಸಾವಿರ ರೂಪಾಯಿ ಪಾವತಿಸುವಂತೆ ಆನ್‌ಲೈನ್‌ ಸಂಸ್ಥೆಗೆ ಸೂಚನೆ ನೀಡುವ ಆದೇಶ ನೀಡಿದೆ.