ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕಳೆದ 40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವೊಂದರ ಹೃದಯದ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ನಾಲ್ಕುವರೆ ಗಂಟೆಗಳ ಒಳಗೆ ಬೆಂಗಳೂರಿಗೆ ತಲುಪಿಸಲಾಯಿತು.
ಮಂಗಳೂರಿನಿಂದ ಬೆಳಗ್ಗೆ 11.50ಕ್ಕೆ ಬಿ.ಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಲುಪಿಸಲಾಯಿತು.
ತೀವ್ರ ನಿಗಾ ಘಟಕದಲ್ಲಿದ್ದ ಸೈಫುಲ್ ಅಝ್ಮಾನ್ ಎಂಬ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಿಸುವ ಹೊಣೆಯನ್ನು ಕೆಎಂಸಿಸಿ ಸಂಸ್ಥೆಯ ಆ್ಯಂಬುಲೆನ್ಸ್ ವಹಿಸಿತ್ತು. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ಸೋಷಿಯಲ್ ಮೀಡಿಯಾದ ಮೂಲಕ ಮಾಹಿತಿ ನೀಡಲಾಗಿತ್ತು. ಆ್ಯಂಬುಲೆನ್ಸ್ನ ಡ್ರೈವರ್ ಆಗಿ ಕೆಎಂಸಿಸಿ ಯ ಹನೀಫ್ ಅವರು ಸಹಕರಿಸಿದರು.
ಮಾನವೀಯ ಸ್ಪಂದನೆ:
ಪೊಲೀಸ್ ಇಲಾಖೆ, ಸೋಷಿಯಲ್ ಮೀಡಿಯಾಗಳ ಮಾಹಿತಿಯನುಸಾರ ಮಂಗಳೂರಿನಿಂದ ಹೊರಟ ಆ್ಯಂಬುಲೆನ್ಸ್ ಗೆ ಬೆಂಗಳೂರಿನುದ್ದಕ್ಕೂ ಸಾರ್ವಜನಿಕರು ಝೀರೋ ಟ್ರಾಫಿಕ್ ಗೆ ಸಹಕಾರ ನೀಡಿ, ಮಾನವೀಯ ಸ್ಪಂದನೆಗೆ ಓಗೊಟ್ಟರು. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ತಲುಪಿಸಿದ ಆ್ಯಂಬುಲೆನ್ಸ್ ನ ಡ್ರೈವರ್ ಯುವಕ ಹನೀಫ್ ರವರಿಗೆ ಜಯದೇವ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಸಾರ್ವಜನಿಕರು ಶಾಲು ಹೊದಿಸಿ, ಸನ್ಮಾನಿಸಿ, ಅಭಿನಂದನೆ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಏರ್ ಆ್ಯಂಬುಲೆನ್ಸ್ ಇಲ್ಲವೇ? ನೆಟ್ಟಿಗರ ಪ್ರಶ್ನೆ
ತೀವ್ರ ನಿಗಾ ಘಟಕದಲ್ಲಿದ್ದ ಮಗುವಿನ ಜೀವ ಉಳಿಸಲು ಪಟ್ಟಿರುವ ಪ್ರಯತ್ನ ಮೆಚ್ಚುವಂಥದ್ದೇ. ಆದರೆ ವಿಐಪಿ ಗಳ ಮೃತದೇಹಗಳನ್ನು ಏರ್ ಆ್ಯಂಬುಲೆನ್ಸ್ ಅಥವಾ ಹೆಲಿಕಾಪ್ಟರ್ ಮೂಲಕ ಸಾಗಿಸುವ ನಮ್ಮ ರಾಜಕಾರಣಿಗಳಿಗೆ ಅಥವಾ ಸರಕಾರಕ್ಕೆ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿನ ಜೀವ ಉಳಿಸಲು ಏಕೆ ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.












