17 ತಿಂಗಳಲ್ಲಿ ಅನಿವಾಸಿಗಳು ಭಾರತಕ್ಕೆ ಕಳುಹಿಸಿದ್ದು 8.41 ಲಕ್ಷ ಕೋಟಿ ರೂ.

0
906

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 7: ಜಗತ್ತಿನ ವಿವಿಧ ಕಡೆಗಳಲ್ಲಿರುವ ಅನಿವಾಸಿ ಭಾರತೀಯರು ಕಳೆದ ಹದಿನೇಳು ತಿಂಗಳಲ್ಲಿ ಭಾರತಕ್ಕೆ 118.3 ಶತಕೋಟಿ ಡಾಲರ್ ಕಳುಹಿಸಿದ್ದಾರೆ. ಇದು ಸುಮಾರು 8.41 ಲಕ್ಷ ಕೋಟಿ ರೂಪಾಯಿಯಾಗಿದ್ದು 2018 ಎಪ್ರಿಲ್ ನಿಂದ 2019 ಸೆಪ್ಟಂಬರ್ ವರೆಗೆ ಇಷ್ಟುಮೊತ್ತ ಭಾರತಕ್ಕೆ ಬಂದಿದೆ. ವಿದೇಶ ಸಹ ಸಚಿವ ವಿ. ಮುರಳೀಧರನ್ ಲೋಕಸಭೆಯಲ್ಲಿ ಈ ಲೆಕ್ಕವನ್ನು ತಿಳಿಸಿದ್ದಾರೆ. 1.36 ಕೋಟಿ ಅನಿವಾಸಿಗಳು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೇಪಾಳ, ಗಲ್ಫ್ ದೇಶಗಳು, ಇಂಗ್ಲೆಂಡ್, ಅಮೆರಿಕ, ಮಲೇಶ್ಯ, ಜರ್ಮನಿಗಳಲ್ಲಿ ಅನಿವಾಸಿಗಳ ಸಂಖ್ಯೆ ಅಧಿಕ ಇದೆ. 2015ರಿಂದ 2019ಡಿಸೆಂಬರ್ ವರೆಗೆ 125 ದೇಶಗಳಿಂದ 21,930 ಭಾರತೀಯರ ಮೃತದೇಹಗಳನ್ನು ತರಲಾಗಿದೆ. ಲಭ್ಯವಿರುವ ವಿವರದ ಪ್ರಕಾರ ಮೀನುಗಾರರ ಸಹಿತ 275 ಭಾರತೀಯರು ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದರೆ, 2020 ಜನವರಿ ಒಂದರಿಂದ ಪಾಕಿಸ್ತಾನ ಹಸ್ತಾಂತರಿಸಿದವರ ಪಟ್ಟಿಯ ಪ್ರಕಾರ 262 ಭಾರತೀಯರು ಮಾತ್ರ ಪಾಕಿಸ್ತಾನದಲ್ಲಿ ಕೈದಿಯಾಗಿದ್ದಾರೆ. ಆದರೆ, ಯುದ್ಧಕೈದಿಗಳ ಸಹಿತ ಕಾಣೆಯಾದ 83 ಸೈನಿಕರನ್ನು ಪಾಕಿಸ್ತಾನ ಸೆರೆಹಿಡಿದಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಚಿವರು ಹೇಳಿದರು.