ಪ್ರತಿಪಕ್ಷಗಳು ಇಡಿ, ಸಿಬಿಐಗೆ ಹೆದರಿ ಬದುಕುತ್ತಿವೆ: ಕಪಿಲ್ ಸಿಬಲ್

0
149

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತನಿಖಾ ಏಜೆನ್ಸಿಗಳು ಮತ್ತು ಕೇಂದ್ರ ಸರಕಾರಕ್ಕೆ ಹೆದರಿ ಪ್ರತಿಪಕ್ಷಗಳ ನಾಯಕರು ಬದುಕುತ್ತಿದ್ದಾರೆ ಎಂದು ಮಾಜಿ ಕಾಂಗ್ರೆಸ್ ನಾಯಕ ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಧರ್ಮವನ್ನು ಆಯುಧ ಮಾಡುವುದು ಜಗತ್ತಿನುದ್ದಕ್ಕೂ ನಡೆಯುತ್ತಿದೆ. ಆದರೆ ಅದರ ವಿಪರೀತ ಬಳಕೆಗೆ ಭಾರತ ಉದಾಹರಣೆಯಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.

“ಧರ್ಮ ದ್ವೇಷದ ಹೇಳಿಕೆಗಳನ್ನು ನೀಡುವವರು ಒಂದು ವಿಶೇಷ ಸಿದ್ಧಾಂತದವರು. ಆದರೆ, ಇವರ ವಿರುದ್ಧ ಕ್ರಮ ಜರಗಿಸಲು ಪೊಲೀಸರು ಇಲ್ಲ ಎನ್ನುವುದು ನಿಜವಾದ ಸಮಸ್ಯೆಯಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು. ಇವರ ವಿರುದ್ಧ ಪೊಲೀಸ್ ಕ್ರಮ ಇಲ್ಲದಿರುವುದೇ ಅವರು ದ್ವೇಷ ಭಾಷಣಗಳನ್ನು ಮತ್ತೆ ಮತ್ತೆ ಮರುಕಳಿಸಲು ಕಾರಣವೆಂದು ಕಪಿಲ್ ಸಿಬಲ್ ಹೇಳಿದರು.

ನನ್ನ ಸಹಿತ ಪ್ರತಿಪಕ್ಷಗಳ ಸಕಲ ನಾಯಕರು ಹೆದರಿಕೆಯಲ್ಲಿ ಬದುಕುತ್ತಿದ್ದಾರೆ. ನಮಗೆಲ್ಲರಿಗೂ ಇ.ಡಿ ಯ ಹೆದರಿಕೆ, ಸಿಬಿಐ ಹೆದರಿಕೆ, ಸರಕಾರದ ಹೆದರಿಕೆ,  ಪೊಲೀಸರ ಹೆದರಿಕೆಯಿದೆ. ಇನ್ನು ನಮಗೆ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂದು ಸಿಬಲ್ ಹೇಳಿದರು. ಕೇಸು ನಡೆಸಲು ಹಣ ಇಲ್ಲದ ಬಡವರಿಗೆ ಕೋರ್ಟಿಗೆ ಬರಲು ಸಾಧ್ಯವಾಗುವುದಿಲ್ಲವೆಂದೂ ಅವರು ಹೇಳಿದರು.